ಬೆಂಗಳೂರು: ಶಾಸಕ ಅರವಿಂದ್ ಬೆಲ್ಲದ್ಗೆ ಜೈಲಿನಿಂದ ಕರೆ ಬಂದಿರುವ ಆರೋಪ ಸಂಬಂಧ, ಕಬ್ಬನ್ ಪಾರ್ಕ್ ಎಸಿಪಿಗೆ ತನಿಖೆ ನಡೆಸುವಂತೆ ಸೂಚನೆ ನೀಡಿರುವುದಾಗಿ ನಗರ ಪೊಲೀಸ್ ಆಯುಕ್ತ ಕಮಲ್‌ಪಂತ್ ಸ್ಪಷ್ಟಪಡಿಸಿದ್ದಾರೆ. ಪ್ರಕರಣ ಸಂಬಂಧ ತನಿಖೆಯನ್ನು ಕೇಂದ್ರ ವಿಭಾಗದ ಡಿಸಿಪಿ ಅನುಚೇತ್ ನೇತೃತ್ವದಲ್ಲಿ ಎಸಿಪಿ ಯತಿರಾಜ್ಗೆ ವಹಿಸಲಾಗಿದ್ದು, ಈಗಾಗಲೇ ತನಿಖೆ ನಡೆಸುತ್ತಿದ್ದಾರೆ ಎಂದು ಮಾಹಿತಿ ನೀಡಿದರು.
ಅರವಿಂದ್ ಬೆಲ್ಲದ್ ನೀಡಿರುವ ದೂರು ಅಸ್ಪಷ್ಟವಾಗಿದ್ದು, ಹೆಚ್ಚಿನ ಮಾಹಿತಿಗಾಗಿ ಪೊಲೀಸರು ಸಂಪರ್ಕಿಸಿದರೂ ಕೂಡ ಬೆಲ್ಲದ್ ಫೋನ್ ಸಂಪರ್ಕಕ್ಕೆ ಸಿಕ್ಕಿಲ್ಲ. ಇದ್ರಿಂದ ತನಿಖೆಗೆ ಸಹಕಾರ ನೀಡುತ್ತಿಲ್ಲವೇ ಎನ್ನುವ ಅನುಮಾನ ಮೂಡಿಸಿದೆ.
ಹುಬ್ಬಳ್ಳಿ-ಧಾರವಾಡ ಪಶ್ಚಿಮ ಕ್ಷೇತ್ರದ ಶಾಸಕ ಅರವಿಂದ್ ಬೆಲ್ಲದ್ ಕೆಲ ದಿನಗಳ ಹಿಂದೆ ಜೈಲಿನಿಂದ ಆರೋಪಿ ಯುವರಾಜ್ ಸ್ವಾಮಿ ಎಂಬಾತ ಕರೆ ಮಾಡಿದ್ದಾನೆ. ಕರೆ ಹಿಂದೆ ನನ್ನನ್ನು ಸಿಲುಕಿಸಲು ಷಡ್ಯಂತ್ರ ಇದೆ. ನನಗೆ ಬರುವ ಕರೆಗಳನ್ನು ಫೋನ್ ಟ್ಯಾಪಿಂಗ್ ಮಾಡಲಾಗುತ್ತಿದೆ ಎಂದು ಅನುಮಾನ ವ್ಯಕ್ತಪಡಿಸಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಗೆ ಪತ್ರ ಬರೆದು, ಗೃಹ ಸಚಿವರಿಗೆ ದೂರು ನೀಡಿದ್ದರು.
ಜೈಲಿನಿಂದ ಕರೆ ಮಾಡಿರುವ ಬಗ್ಗೆ ಬೆಲ್ಲದ್ ಅವರ ದೂರನ್ನು ಗಂಭೀರವಾಗಿ ಪರಿಗಣಿಸಿದ್ದ ಗೃಹ ಸಚಿವ ಬಸವರಾಜ ಬೊಮ್ಮಾಯಿ ಡಿಜಿಪಿ ಪ್ರವೀಣ್ ಸೂದ್ಗೆ ತನಿಖೆ ನಡೆಯುವಂತೆ ಆದೇಶಿಸಿದ್ದರು. ಈ ಸಂಬಂಧ ನಗರ ಪೊಲೀಸ್ ಆಯುಕ್ತ ಕಮಲ್‌ಪಂತ್ ತನಿಖೆ ನಡೆಸುವಂತೆ ಸೂಚನೆ ನೀಡಿದ್ದಾರೆ.