ಬೆಂಗಳೂರು: ಅನಾರೋಗ್ಯದಿಂದ ಬಳಲುತ್ತಿರುವ ಮಾಜಿ ಸಚಿವ ಹಾಗೂ ಶಿರಾ ಶಾಸಕ ಸತ್ಯನಾರಾಯಣ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ಈ ಸಂದರ್ಭ ಗೃಹ ಸಚಿವರು ಸೇರಿದಂತೆ ಹಲವು ಸಚಿವರು ಹಾಗೂ ವಿವಿಧ ಪಕ್ಷಗಳ ಶಾಸಕರು ಸಂತಾಪ ಸೂಚಿಸಿ ಯಡವಟ್ಟು ಮಾಡಿದ್ದಾರೆ.
![ಆರೋಗ್ಯ ಸಚಿವರಿಂದ ಟ್ವೀಟ್](https://etvbharatimages.akamaized.net/etvbharat/prod-images/8291839_413_8291839_1596544952262.png)
ಬೆಂಗಳೂರಿನ ಹಳೆ ವಿಮಾನ ನಿಲ್ದಾಣ ರಸ್ತೆಯ ಮಣಿಪಾಲ ಆಸ್ಪತ್ರೆಯಲ್ಲಿ ಕಳೆದ ಕೆಲದಿನಗಳಿಂದ ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಸತ್ಯನಾರಾಯಣ ಅವರ ಪರಿಸ್ಥಿತಿ ಇನ್ನಷ್ಟು ವಿಷಮಗೊಂಡ ಹಿನ್ನೆಲೆಯಲ್ಲಿ ಅವರನ್ನು ತೀವ್ರ ನಿಗಾ ಘಟಕದಲ್ಲಿ ಇರಿಸಿ ಚಿಕಿತ್ಸೆ ಮುಂದುವರಿಸಲಾಗಿದೆ. ಶಾಸಕರ ಆರೋಗ್ಯ ಹದಗೆಟ್ಟಿದೆ ಎಂಬ ಮಾಹಿತಿಯನ್ನು ಕೆಲವರು ನಿಧನ ಎಂದು ಬಿಂಬಿಸಿದ್ದು, ಕೆಲ ಮಾಧ್ಯಮಗಳಲ್ಲಿ ವರದಿ ಪ್ರಕಟವಾಗಿದೆ. ಇದನ್ನು ಗಮನಿಸಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ ಸೇರಿದಂತೆ ಸಂಪುಟದ ಹಲವು ಸಚಿವರು ಸಂತಾಪ ಸೂಚಿಸಿದ್ದಾರೆ.
![ವೈದ್ಯಕೀಯ ಶಿಕ್ಷಣ ಸಚಿವರ ಟ್ವೀಟ್](https://etvbharatimages.akamaized.net/etvbharat/prod-images/8291839_326_8291839_1596544995963.png)
![ಎಂ.ಸತೀಶ್ ರೆಡ್ಡಿ ಟ್ವೀಟ್](https://etvbharatimages.akamaized.net/etvbharat/prod-images/8291839_424_8291839_1596544792086.png)
ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದು, ಮಾಧ್ಯಮ ಪ್ರಕಟಣೆಯನ್ನೇ ಹೊರಡಿಸಿದ್ದಾರೆ. ಆದರೆ ಶಾಸಕರು ನಿಧನರಾಗಿಲ್ಲ. ಅವರ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ ಎಂದು ಖುದ್ದು ಮಣಿಪಾಲ್ ಆಸ್ಪತ್ರೆ ಮೂಲಗಳು ಪ್ರಕಟಣೆ ಹೊರಡಿಸಿದ್ದರೂ ಸಹ ಕೆಲ ಮಾಧ್ಯಮಗಳಲ್ಲಿ ಸುದ್ದಿ ಬದಲಿಸುವ ಕಾರ್ಯ ಮಾಡಿಲ್ಲ. ಈ ಹಿನ್ನೆಲೆಯಲ್ಲಿ ಮಧ್ಯಾಹ್ನದ ನಂತರವೂ ಹಲವು ಸಚಿವರು ಹಾಗೂ ಶಾಸಕರು ಸಂತಾಪ ಸಂದೇಶಗಳನ್ನು ಕಳುಹಿಸುತ್ತಲೇ ಇದ್ದರು.
![ಡಿಕೆ ಸುರೇಶ್ ಟ್ವೀಟ್ ಮಾಡಿ ಯಡವಟ್ಟು](https://etvbharatimages.akamaized.net/etvbharat/prod-images/8291839_801_8291839_1596544934247.png)
![ಶಾಸಕ ವಿ. ಮುನಿಯಪ್ಪ ಮಾಡಿರುವ ಟ್ವೀಟ್](https://etvbharatimages.akamaized.net/etvbharat/prod-images/8291839_147_8291839_1596544813260.png)
ಸಂಜೆ 4 ಗಂಟೆಯ ಸಮಯದಲ್ಲಿಯೂ ಶಾಸಕರನ್ನು ತೀವ್ರ ನಿಗಾ ಘಟಕದಲ್ಲಿರಿಸಿ ಚಿಕಿತ್ಸೆ ಮುಂದುವರಿಸಲಾಗಿದೆ. ಸತ್ಯನಾರಾಯಣ ಅವರ ಆಪ್ತ ಹಾಗೂ ಕುಟುಂಬ ಮೂಲಗಳಿಂದ ಯಾವುದೇ ಸುದ್ದಿ ತಿಳಿದು ಬಂದಿಲ್ಲ. ಆದರೂ ಈಗಾಗಲೇ ರಾಜ್ಯ ಸಚಿವ ಸಂಪುಟದ ಹಲವು ಸದಸ್ಯರು ಸಂತಾಪ ಸೂಚಿಸಿರುವುದು ವಿಪರ್ಯಾಸ. ಗೃಹ ಸಚಿವ ಬಸವರಾಜ ಬೊಮ್ಮಾಯಿ ಮಾತ್ರವಲ್ಲದೆ ಆರೋಗ್ಯ ಸಚಿವ ಬಿ ಶ್ರೀರಾಮುಲು, ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್, ಕೃಷಿ ಸಚಿವ ಬಿಸಿ ಪಾಟೀಲ್, ಸಂಸದ ಪಿ.ಸಿ. ಮೋಹನ್ ಹಾಗೂ ಡಿ.ಕೆ. ಸುರೇಶ್, ಶಾಸಕರಾದ ಬಿ.ಎಂ ಫಾರೂಕ್, ವಿ.ಮುನಿಯಪ್ಪ, ಎಂ.ಸತೀಶ್ ರೆಡ್ಡಿ ಸೇರಿದಂತೆ ಹಲವು ಮುಖಂಡರು ಸಂತಾಪ ಸೂಚಿಸಿ ಟ್ವೀಟ್ ಮಾಡಿದ್ದು ಇವರಲ್ಲಿ ಕೆಲವರು ಈಗಾಗಲೇ ತಮ್ಮ ಸಂದೇಶವನ್ನು ಡಿಲೀಟ್ ಮಾಡಿದ್ದಾರೆ.
![ಗೃಹ ಸಚಿವರಿಂದ ಟ್ವೀಟ್](https://etvbharatimages.akamaized.net/etvbharat/prod-images/8291839_319_8291839_1596544855536.png)
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಸೇರಿದಂತೆ ಹಲವು ನಾಯಕರು ತಾವು ಸೂಚಿಸಿದ್ದ ಸಂತಾಪ ಸಂದೇಶವನ್ನು ಅಳಿಸಿ ಹಾಕಿದ್ದಾರೆ. ಇವರಲ್ಲದೆ ಸಚಿವರಾದ ಬಿ. ಶ್ರೀರಾಮುಲು, ಡಾ.ಕೆ ಸುಧಾಕರ್, ಕೆ.ಎಸ್.ಈಶ್ವರಪ್ಪ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸೇರಿದಂತೆ ಹಲವು ನಾಯಕರು ಕೂಡ ತಮ್ಮ ಸಂದೇಶವನ್ನು ಹಿಂಪಡೆದಿದ್ದಾರೆ. ವಿಪರ್ಯಾಸ ಎಂದರೆ ಬೆಂಗಳೂರಿನಲ್ಲಿ ನಡೆದ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಸಭೆಯಲ್ಲಿ ಜೆಡಿಎಸ್ನಿಂದ ಬಿ.ಸತ್ಯನಾರಾಯಣಗೆ ಸಂತಾಪ ಸೂಚಿಸಲಾಗಿದೆ.
![ಶಾಸಕ ಬಿ.ಎಂ ಫಾರೂಕ್ ಮಾಡಿರುವ ಟ್ವೀಟ್](https://etvbharatimages.akamaized.net/etvbharat/prod-images/8291839_755_8291839_1596544882981.png)
ಮಾಜಿ ಸಚಿವರಾದ ಎಚ್.ಕೆ.ಪಾಟೀಲ್, ಹೆಚ್.ಡಿ.ರೇವಣ್ಣ, ಸಿ.ಎಂ ಇಬ್ರಾಹಿಂ, ಉಮೇಶ್ ಕತ್ತಿ ಮತ್ತಿತರರು ಸಂತಾಪ ಸೂಚಿಸಿದ್ದರು. ಗುಬ್ಬಿ ಶಾಸಕ ಶ್ರೀನಿವಾಸ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಸಂದರ್ಭ ಸಂತಾಪ ಸೂಚಿಸಿ ಎಡವಟ್ಟು ಮಾಡಿಕೊಂಡಿದ್ದಾರೆ. ಒಟ್ಟಾರೆ ಅನಾರೋಗ್ಯ ಪೀಡಿತ ಶಾಸಕರ ಚಿಕಿತ್ಸೆ ಮುಂದುವರಿದಿರುವ ಸಂದರ್ಭದಲ್ಲಿಯೇ ಇಂಥದ್ದೊಂದು ವಿಪರ್ಯಾಸದ ಘಟನೆ ನಡೆದುಹೋಗಿದೆ.
![ಸಂಸದ ಪಿಸಿ ಮೋಹನ್ ಟ್ವೀಟ್](https://etvbharatimages.akamaized.net/etvbharat/prod-images/8291839_458_8291839_1596544903143.png)
ತುಮಕೂರು ಜಿಲ್ಲೆಯವರೇ ಆದ ಮಾಜಿ ಸಚಿವ ಸಿ.ಚನ್ನಿಗಪ್ಪ ಅನಾರೋಗ್ಯಕ್ಕೊಳಗಾದ ಸಂದರ್ಭದಲ್ಲಿಯೂ ಇಂಥದ್ದೇ ಕೆಲ ಸನ್ನಿವೇಶ ಸೃಷ್ಟಿಯಾಗಿ ಹಲವರು ಮುಜುಗರಕ್ಕೀಡಾಗಿದ್ದನ್ನು ನೆನಪಿಸಿಕೊಳ್ಳಬಹುದಾಗಿದೆ.