ಬೆಂಗಳೂರು: ಖಾತೆ ಹಂಚಿಕೆ ಸಸ್ಪೆನ್ಸ್ ಮುಂದುವರಿದಿದೆ. ಇಂದು ಸಂಜೆ ಸಿಎಂ ಯಡಿಯೂರಪ್ಪ ಖಾತೆ ಹಂಚಿಕೆ ನಾಟಕಕ್ಕೆ ತೆರೆ ಎಳೆಯುವ ಸಾಧ್ಯತೆ ಇದ್ದು, 17 ಸಚಿವರಿಗೂ ಖಾತೆ ಹಂಚಿಕೆ ಮಾಡಲಿದ್ದಾರೆ ಎಂದು ಹೇಳಲಾಗ್ತಿದೆ.
ದೆಹಲಿಗೆ ಹೋಗಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷರ ಅಮಿತ್ ಶಾ ಅವರನ್ನು ಭೇಟಿಯಾಗಿ ಖಾತೆ ಹಂಚಿಕೆಗೆ ಗ್ರೀನ್ ಸಿಗ್ನಲ್ ಪಡೆದುಕೊಂಡಿದ್ದ ಸಿಎಂ ಯಡಿಯೂರಪ್ಪ, ಶನಿವಾರವೇ ಖಾತೆ ಹಂಚಿಕೆ ಮಾಡಲು ಉದ್ದೇಶಿಸಿದ್ದರು. ಆದರೆ, ಬಿಜೆಪಿ ಮುಖಂಡ ಅರುಣ್ ಜೇಟ್ಲಿ ನಿಧನದ ಹಿನ್ನೆಲೆ ಖಾತೆ ಹಂಚಿಕೆ ಸಾಧ್ಯವಾಗಿಲ್ಲ. ಅಗಲಿದ ನಾಯಕನಿಗೆ ಶ್ರದ್ಧಾಂಜಲಿ ಸಲ್ಲಿಸಲು ಸಿಎಂ ಇಂದು ದೆಹಲಿಗೆ ತೆರಳಿದ್ದು, ಸಂಜೆ ವಾಪಸಾಗಲಿದ್ದಾರೆ. ಇಂದು ಸಂಜೆಯೇ ರಾಜಭವನಕ್ಕೆ ಖಾತೆ ಹಂಚಿಕೆ ಪಟ್ಟಿ ಕಳಿಸಲಿದ್ದಾರಂತೆ ಎಂದು ತಿಳಿದುಬಂದಿದೆ.
ಖಾತೆಗಾಗಿ ಫೈಪೋಟಿ ಜೋರು
ಇತ್ತ ಖಾತೆ ಹಂಚಿಕೆ ಸಸ್ಪೆನ್ಸ್ ಮುಂದುವರಿದಿರುವ ಕಾರಣ ಸಚಿವರುಗಳಿಂದ ಪ್ರಬಲ ಖಾತೆಗಾಗಿ ಪೈಪೋಟಿ ಹೆಚ್ಚಾಗಿದೆ. ಕಂದಾಯ, ಇಂಧನ, ಲೋಕೋಪಯೋಗಿ, ಜಲಸಂಪನ್ಮೂಲ ಖಾತೆಗಾಗಿ ಹಿರಿಯ ಸಚಿವರ ಲಾಬಿ ಜೋರಾಗಿದೆ. ಅನರ್ಹ ಶಾಸಕರನ್ನು ಪರಿಗಣನೆಯಲ್ಲಿಟ್ಟುಕೊಂಡೇ ಖಾತೆ ಹಂಚಿಕೆಯಾಗಲಿವೆ. ಕೆಲ ನಿರ್ದಿಷ್ಟ, ಹಿರಿಯ ಸಚಿವರಿಗೆ ಎರಡೆರಡು ಖಾತೆಗಳು ಸಿಗಲಿದ್ದು, ಉಳಿದವರಿಗೆ ಒಂದೊಂದೇ ಖಾತೆ ಹಂಚಿಕೆಯಾಗಲಿದೆ ಎಂದು ಹೇಳಲಾಗುತ್ತಿದೆ. 20 ರಿಂದ 25 ಖಾತೆಗಳನ್ನು ನೂತನ ಸಚಿವರಿಗೆ ಹಂಚಿಕೆ ಮಾಡುವ ಸಾಧ್ಯತೆ ಇದೆ ಎನ್ನಲಾಗ್ತಿದೆ.
ಯಾರಿಗೆ ಗೃಹ ಖಾತೆ?
ಗೃಹ ಖಾತೆ ಯಾರಿಗೆ ಎಂಬ ಗುಟ್ಟು ಇನ್ನೂ ಮುಂದುವರಿದಿದೆ. ಅತಿ ಒತ್ತಡದ ಖಾತೆ ವಹಿಸಿಕೊಳ್ಳಲು ಬಿಜೆಪಿ ಹಿರಿಯ ನಾಯಕರು ಮುಂದೆ ಬರುತ್ತಿಲ್ಲ ಎಂದು ಹೇಳಲಾಗುತ್ತಿದೆ. ಆರ್.ಅಶೋಕ್, ಜಗದೀಶ್ ಶೆಟ್ಟರ್, ವಿ.ಸೋಮಣ್ಣ, ಕೆ.ಎಸ್. ಈಶ್ವರಪ್ಪ ಗೃಹ ಖಾತೆ ವಹಿಸಿಕೊಳ್ಳಲು ಒಲವು ಹೊಂದಿಲ್ಲ. ಅದರ ಬದಲು ಹೊಸ ಪ್ರಬಲ ಖಾತೆಯ ಮೇಲೆ ಕಣ್ಣಿಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಡಿಸಿಎಂ ಸ್ಥಾನಕ್ಕಾಗಿ ಫೈಟ್
ಮೂರು ಡಿಸಿಎಂ ಹುದ್ದೆ ಸೃಷ್ಟಿಗೆ ಹೈಕಮಾಂಡ್ ಪ್ರಸ್ತಾಪ ಹಿನ್ನೆಲೆ ಹಿರಿಯ ಸಚಿವರಿಂದ ಡಿಸಿಎಂ ಹುದ್ದೆಗಾಗಿಯೂ ತೀವ್ರ ಪೈಪೋಟಿ ನಡೆಯುತ್ತಿದೆ. ಹೈಕಮಾಂಡ್ ಲಿಸ್ಟ್ ನಲ್ಲಿ ಈಶ್ವರಪ್ಪ, ಆರ್.ಅಶೋಕ್, ಡಾ.ಅಶ್ವಥ ನಾರಾಯಣ ಮತ್ತು ಗೋವಿಂದ ಕಾರಜೋಳ ಇದ್ದಾರೆ ಎನ್ನಲಾಗ್ತಿದೆ. ಡಿಸಿಎಂ ಹುದ್ದೆಯನ್ನು ತಮಗೆ ನೀಡುವಂತೆ ಹಿರಿಯ ಸಚಿವರುಗಳು ಸಿಎಂಗೆ ದಂಬಾಲು ಬಿದ್ದಿದ್ದಾರೆ. ಮಾಜಿ ಸಿಎಂ ಜಗದೀಶ್ ಶೆಟ್ಟರ್, ಶ್ರೀರಾಮಯಲು ಡಿಸಿಎಂ ಹುದ್ದೆಗಾಗಿ ಪೈಪೋಟಿ ನಡೆಸುತ್ತಿದ್ದಾರೆ.
ಆದರೆ ಡಿಸಿಎಂ ಹುದ್ದೆ ಸೃಷ್ಟಿಗೆ ಸಿಎಂ ಯಡಿಯೂರಪ್ಪ ಒಲವು ಹೊಂದಿಲ್ಲ. ಡಿಸಿಎಂ ಹುದ್ದೆ ಸೃಷ್ಟಿಸಿದ್ರೆ ಸರ್ಕಾರದ ಸುಗಮ ಆಡಳಿತ ಕಷ್ಟವಾಗಲಿದ್ದು, ಸರ್ಕಾರದಲ್ಲಿ ಮೂರು ಆಡಳಿತ ಕೇಂದ್ರಗಳು ಹುಟ್ಟಿಕೊಳ್ಳಲಿವೆ. ಮುಖ್ಯವಾಗಿ ಪಕ್ಷದಲ್ಲಿ, ಸರ್ಕಾರದಲ್ಲಿ ಗೊಂದಲ, ವೈಮನಸ್ಸು ಸೃಷ್ಟಿ ಆಗಲಿದೆ ಎಂಬುದು ಸಿಎಂ ಅಭಿಪ್ರಾಯ. ಇದನ್ನು ವರಿಷ್ಠರಿಗೆ ಮನವರಿಕೆ ಮಾಡಲು ಸಿಎಂ ಯಡಿಯೂರಪ್ಪ ಮುಂದಾಗಿದ್ದಾರೆ ಎಂದು ಹೇಳಲಾಗ್ತಿದೆ.