ಬೆಂಗಳೂರು: ನಮ್ಮಲ್ಲಿ ಬೆಂಕಿಯೂ ಇಲ್ಲ ಬಂಡಾಯವೂ ಇಲ್ಲ. ನನಗೆ ಯಾವ ಅಸಮಾಧಾನವೂ ಆಗಿಲ್ಲ. ಪಕ್ಷ ನೀಡಿರುವ ಜವಾಬ್ದಾರಿ ನಿರ್ವಹಿಸಿಕೊಂಡು ಹೋಗುತ್ತೇನೆ. ಕೊಟ್ಟಿರುವ ಖಾತೆಯನ್ನು ಸಮರ್ಥವಾಗಿ ನಿಭಾಯಿಸಿ ಜನಪರ ಆಡಳಿತ ನೀಡುತ್ತೇನೆ ಎಂದು ಸಚಿವ ಶ್ರೀರಾಮುಲು ಹೇಳಿದರು.
ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಾಮುಲು, ನಮ್ಮದು ಶಿಸ್ತಿನ ಪಕ್ಷ. ಬೊಮ್ಮಾಯಿ ರಾಜ್ಯದ ಮುಖ್ಯಮಂತ್ರಿಯಾಗಿದ್ದಾರೆ. ನಮ್ಮ ವರಿಷ್ಠರು ಎಲ್ಲರೂ ಸೇರಿ ಒಳ್ಳೆಯ ನಿರ್ಧಾರವನ್ನು ಕೈಗೊಂಡಿದ್ದಾರೆ. ಬಿಜೆಪಿ ಯಾವತ್ತೂ ಜನಪರವಾದ, ಜನತೆಗೆ ಒಳ್ಳೆಯ ಆಡಳಿತ ನೀಡುವ ಸರ್ಕಾರವಾಗಿದೆ. ಹಾಗಾಗಿ, ಯಾವ ಇಲಾಖೆಯ ಜವಾಬ್ದಾರಿ ಕೊಟ್ಟಿದ್ದಾರೋ ಆ ಇಲಾಖೆಯಲ್ಲಿ ಸಕ್ರಿಯವಾಗಿ ಕೆಲಸ ಮಾಡುವುದಕ್ಕೆ ನಮ್ಮ ಆದ್ಯತೆ ಎಂದರು.
ನನಗೆ ಸಾರಿಗೆ ಇಲಾಖೆ ಸಚಿವ ಸ್ಥಾನ ನೀಡಲಾಗಿದೆ. ಇಲ್ಲಿ ಜನಸೇವೆ ಮುಖ್ಯವೇ ಹೊರತು ಯಾವುದೋ ಇಲಾಖೆ ಮುಖ್ಯವಲ್ಲ. ಈ ಹಿಂದೆಯೂ ಇದನ್ನೇ ಹೇಳಿದ್ದೆ, ಈಗಲೂ ಇದನ್ನೇ ಹೇಳುತ್ತಿದ್ದೇನೆ. ನನಗೆ ಕೊಟ್ಟ ಜವಾಬ್ದಾರಿಯನ್ನು ಸಕ್ರಿಯವಾಗಿ ಜನರು ಮೆಚ್ಚುವ ರೀತಿ ಕೆಲಸ ಮಾಡುತ್ತೇನೆ.
ಉಪಮುಖ್ಯಮಂತ್ರಿ ಸ್ಥಾನ ಸಿಗಲಿದೆ ಎಂದು ಬಹಳಷ್ಟು ಜನ ನಿರೀಕ್ಷೆ ಇರಿಸಿಕೊಂಡಿದ್ದರು. ಆದರೆ ನಮ್ಮದು ರಾಷ್ಟ್ರೀಯ ಪಕ್ಷವಾಗಿರುವ ಕಾರಣ ರಾಷ್ಟ್ರೀಯ ಅಧ್ಯಕ್ಷರು, ಪ್ರಧಾನಿ ಮೋದಿ, ಅಮಿತ್ ಶಾ, ಕಟೀಲ್ ಸೇರಿ ಕೆಲ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ. ಈಗಿರುವ ವಾತಾವರಣದಲ್ಲಿ ಯಾರನ್ನೂ ಉಪಮುಖ್ಯಮಂತ್ರಿ ಮಾಡಬಾರದು ಎಂದು ತೀರ್ಮಾನ ಕೈಗೊಂಡಿದ್ದಾರೆ. ನಮ್ಮ ಪಕ್ಷದ ತೀರ್ಮಾನಕ್ಕೆ ನಾವೆಲ್ಲರೂ ಬದ್ಧ. ಉಪಮುಖ್ಯಮಂತ್ರಿ ಸ್ಥಾನ ತಿಂಗಳಾಂತ್ಯಕ್ಕೆ ಸೃಷ್ಟಿಯಾಗುವ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಪಕ್ಷ ನೀಡುವ ಜವಾಬ್ದಾರಿಯನ್ನು ಸಕ್ರಿಯವಾಗಿ ಕೆಲಸ ನಿರ್ವಹಿಸುತ್ತೇನೆ ಎಂದರು.
ಆನಂದ್ ಸಿಂಗ್ ನನ್ನ ಆತ್ಮೀಯ ಸ್ನೇಹಿತರು. ನಮ್ಮ ಜಿಲ್ಲೆಯವರು. ಸಾಕಷ್ಟು ಸಮಯದಿಂದ ರಾಜಕೀಯದಲ್ಲಿ ಒಳ್ಳೆಯ ಕೆಲಸ ಮಾಡಿಕೊಂಡು ಬಂದಿದ್ದಾರೆ. ಅವರನ್ನು ಸಂಪರ್ಕಿಸಲು ಸಾಧ್ಯವಾಗಿಲ್ಲ. ಆದಷ್ಟು ಬೇಗ ಮಾತುಕತೆ ನಡೆಸುತ್ತೇನೆ, ಅವರಿಗೆ ಅನ್ಯಾಯವಾಗಿದೆಯೋ ಇಲ್ಲವೋ ಎನ್ನುವ ಬಗ್ಗೆ ನಾನು ಚರ್ಚೆ ಮಾಡಲು ಹೋಗುವುದಿಲ್ಲ. ಆದರೆ ಅಸಮಾಧಾನ ಕುರಿತು ಅವರ ಜೊತೆ ಮಾತುಕತೆ ನಡೆಸುತ್ತೇನೆ ಎಂದು ರಾಮುಲು ತಿಳಿಸಿದರು.