ಬೆಂಗಳೂರು : ಶಬ್ದ ಜಗತ್ತಿನ ಪರಿಚಯವೇ ಇಲ್ಲದ ಶ್ರವಣದೋಷ ಮಕ್ಕಳಿಗೆ ಆತ್ಮವಿಶ್ವಾಸವೊಂದೇ ಆಧಾರ. ಹೀಗಾಗಿ ಇಂತಹ ಮಕ್ಕಳಲ್ಲಿ ಆತ್ಮವಿಶ್ವಾಸ ಮೂಡಿಸಿ ಪ್ರೋತ್ಸಾಹಿಸುವುದು ನಮ್ಮ ಜವಾಬ್ದಾರಿ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ಹೇಳಿದ್ದಾರೆ.
ಡಾ.ಎಸ್.ಆರ್ ಚಂದ್ರಶೇಖರ್ ವಾಕ್ ಮತ್ತು ಶ್ರವಣ ಸಂಸ್ಥೆಗೆ ಭೇಟಿ ನೀಡಿದ ವೇಳೆ ಸಚಿವೆಯನ್ನು ಶಾಲಾ ಮಕ್ಕಳು ಆತ್ಮೀಯವಾಗಿ ಸ್ವಾಗತಿಸಿದರು. ಬಳಿಕ ಸಂಸ್ಥೆಯ ಮೂಲ ಸೌಕರ್ಯ ವ್ಯವಸ್ಥೆಯನ್ನು ಪರಿಶೀಲಿಸಿ, ಸಿಬ್ಬಂದಿ ವರ್ಗದ ಜೊತೆ ಸಮಾಲೋಚನೆ ನಡೆಸಿದರು. ನಂತರ ಮಕ್ಕಳ ಶೈಕ್ಷಣಿಕ ಚಟುವಟಿಕೆ ಹಾಗೂ ಅವರು ತಯಾರಿಸಿದ ಕರಕುಶಲ ವಸ್ತುಗಳನ್ನು ವೀಕ್ಷಿಸಿದರು.
ಓದಿ : ಕೋಲಾರದ ಬೂದಿಕೋಟೆ ಸುತ್ತಮುತ್ತ ಭಾರೀ ಶಬ್ದ; ಬೆಚ್ಚಿಬಿದ್ದ ಜನ!
ಈ ವೇಳೆ ಮಾತನಾಡಿದ ಅವರು, ಶಬ್ದ ಜಗತ್ತಿನ ಪರಿಚಯವೇ ಇಲ್ಲದ ಇಂತಹ ಮಕ್ಕಳಿಗೆ ಆತ್ಮವಿಶ್ವಾಸವೊಂದೇ ಆಧಾರ. ಹೀಗಾಗಿ, ಇಂತಹ ಮಕ್ಕಳ ಆರೋಗ್ಯ, ಪೋಷಣೆ, ಶಿಕ್ಷಣ ಹಾಗೂ ಅವರ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವುದು ನಮ್ಮ ಜವಾಬ್ದಾರಿ. ಅವರಿಗೆ ಉತ್ತಮ ಶಿಕ್ಷಣ, ಆತ್ಮಸ್ಥೈರ್ಯ ತುಂಬಿ, ಅವರನ್ನು ಸಮಾಜ ಮುಖ್ಯವಾಹಿನಿಗೆ ತರಬೇಕು. ಈ ನಿಟ್ಟಿನಲ್ಲಿ ನಮ್ಮ ಶ್ರಮ ಅವಿರತವಾಗಿರುತ್ತದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಶಾಲೆಯ ಪ್ರಾಂಶುಪಾಲೆ ಪದ್ಮಪ್ರಭಾ, ಆಡಳಿತಾಧಿಕಾರಿ ಜಯರಾಮ್ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.