ಬೆಂಗಳೂರು: ಇತರ ರಾಜ್ಯಗಳಲ್ಲಿ ದೇವಾಲಯಗಳ ನಿರ್ವಹಣಾ ವ್ಯವಸ್ಥೆ ಯಾವ ರೀತಿ ಇದೆ ಎನ್ನುವ ವರದಿ ಪಡೆದು ನಂತರ ರಾಜ್ಯದಲ್ಲಿನ ಮುಜರಾಯಿ ಇಲಾಖೆ ಅಧೀನದಲ್ಲಿ ಬರುವ ದೇವಾಲಯಗಳಿಗೆ ಸ್ವಾಯತ್ತತೆ ನೀಡುವ ಸಂಬಂಧ ಅಗತ್ಯ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಮುಜರಾಯಿ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಸ್ಪಷ್ಟಪಡಿಸಿದ್ದಾರೆ.
ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇವಾಲಯಗಳಿಗೆ ಸ್ವಾತಂತ್ರ್ಯ ಕೊಡುವುದಲ್ಲ, ಸ್ವಾಯತ್ತತೆ ಕೊಡಬೇಕು ಎನ್ನುವುದು ನಮ್ಮ ಸರ್ಕಾರದ ಮುಂದಿರುವ ವಿಚಾರ. ನಮ್ಮ ದೇವಾಲಯದಲ್ಲಿ ಬಹಳ ಒಳ್ಳೆಯ ಕೆಲಸ ನಡಯುತ್ತಿವೆ. ಇಡೀ ದೇಶದ ಎಲ್ಲ ದೇವಾಲಯಗಳಲ್ಲಿ ಯಾವ ಸ್ಥಿತಿ ಇದೆ, ಅಲ್ಲಿನ ಸರ್ಕಾರ ಏನು ಮಾಡುತ್ತಿದೆ ಎನ್ನುವ ವರದಿ ಸಂಗ್ರಹ ಮಾಡುತ್ತಿದ್ದೇವೆ. ಅನೇಕ ಇತಿಹಾಸ ತಜ್ಞರ ಜೊತೆ ಮಾತುಕತೆ ನಡೆಸಲಿದ್ದೇವೆ, ಎಲ್ಲ ವರದಿ ಬಂದ ನಂತರ ಸಿಎಂ ಜೊತೆ ಕುಳಿತು ಮಾತುಕತೆ ನಡೆಸಿ ಮುಂದೆ ಏನು ಮಾಡಬೆಕು ಎನ್ನುವ ಕುರಿತು ನಿರ್ಧಾರ ಕೈಗೊಳ್ಳಳಾಗುತ್ತದೆ ಎಂದರು.
ಆಂಜನೇಯನ ಜನ್ಮಸ್ಥಳ ವಿವಾದ ವಿಚಾರ ಕುರಿತು ನಿನ್ನೆ ನಡೆಯಬೇಕಿದ್ದ ಸಭೆ ಮುಂದಕ್ಕೆ ಹೋಗಿಲ್ಲ, ಅದರ ಬಗ್ಗೆ ಸಿಎಂ ಜೊತೆ ಚರ್ಚೆ ಮಾಡಿದ್ದೇನೆ. ಈ ಸಂಬಂಧ ವರದಿ ಕೊಡಲು ಮುಖ್ಯಮಂತ್ರಿಗಳು ಹೇಳಿದ್ದಾರೆ. ಈ ವಿಷಯ ಬಹಳ ಪ್ರಮುಖವಾಗಿರುವುದರಿಂದ ಮುಖ್ಯಮಂತ್ರಿಗಳೇ ಅದರ ಘೋಷಣೆ ಮಾಡಲಿದ್ದಾರೆ, ರಾಜ್ಯದ ಜನತೆಗೆ ಅವರೇ ತಿಳಿಸಲಿದ್ದಾರೆ. ಹಾಗಾಗಿ ನಮ್ಮ ಸಭೆ ನಡೆದಿಲ್ಲ ಎಂದು ಸಚಿವೆ ಶಶಿಕಲಾ ಜೊಲ್ಲೆ ಸ್ಪಷ್ಟೀಕರಣ ನೀಡಿದರು.
ಅಂಜನಾದ್ರಿ ಬೆಟ್ಟದ ಅಭಿವೃದ್ಧಿ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಹಳ ದೊಡ್ಡ ಕನಸಿಟ್ಟುಕೊಂಡಿದ್ದಾರೆ. ಬೆಟ್ಟದ ಅಭಿವೃದ್ಧಿಗೆ ಮುಂದೆ ಬಂದಿದ್ದಾರೆ. ಸ್ವಲ್ಪ ದಿನಗಳಲ್ಲೇ ಅಧಿಕೃತವಾಗಿ ಅದು ಘೋಷಣೆಯಾಗಲಿದೆ. ಅಂಜನಾದ್ರಿ ಅಭಿವೃದ್ದಿ ಬಗ್ಗೆ ಈಗಾಗಲೇ ಹೆಚ್ಚಿನ ಒತ್ತು ಕೊಟ್ಟಿದ್ದೇವೆ. ಸಿಎಂ ಮುಂದೆ ಅದಕ್ಕೆ ಹೆಚ್ಚಿನ ನೆರವು ನೀಡಲಿದ್ದಾರೆ ಎಂದರು.
ಬಿಜೆಪಿ ಕಚೇರಿ ಭೇಟಿ ಖುಷಿ ತಂದಿದೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಸರ್ಕಾರ ಬಹಳಷ್ಟು ಯೋಜನೆಗಳನ್ನು ಒಳ್ಳೆಯ ರೀತಿ ಹಮ್ಮಿಕೊಂಡಿದೆ. ಕೋವಿಡ್ ಸ್ಥಿತಿಯಲ್ಲಿ ರಾಜ್ಯಕ್ಕೆ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ಕಾರ್ಯ ಮಾಡುತ್ತಿದ್ದೇವೆ. ಸಚಿವರು ಜನರಿಗೆ, ಶಾಸಕರಿಗೆ, ಕಾರ್ಯಕರ್ತರಿಗೆ ಸ್ಪಂಧಿಸುವ ಕಾರ್ಯ ಆಗಬೇಕು ಎಂದು ಪಕ್ಷ ಸೂಚಿಸಿದೆ, ನಮ್ಮ ಕ್ಷೇತ್ರಕ್ಕೆ ಹೋದಾಗ ಅಲ್ಲಿ ಜನರ ಕಷ್ಟಗಳಿಗೆ ಸ್ಪಂದನೆ ಕೊಡುತ್ತೇವೆ.
ಆದರೆ, ಬೆಂಗಳೂರಿಗೆ ಬಂದಾಗಿ ಇಲ್ಲಿ ನಮ್ಮ ಕಾರ್ಯಕರ್ತರಿಗೆ ಸ್ಪಂದನೆ ಕೊಡುವ ಕಾರ್ಯ ಆಗಬೇಕು ಅದು ಪಕ್ಷದಿಂದ ನಡೆಯುತ್ತಿದೆ. ಪ್ರತಿ ತಿಂಗಳು ಎರಡು ಮತ್ತು ನಾಲ್ಕನೇ ಗುರುವಾರ ನನಗೆ ಬಿಜೆಪಿ ಕಚೇರಿಗೆ ಬರುವಂತೆ ತಿಳಿಸಿದ್ದಾರೆ ಹಾಗಾಗಿ ಇಂದು ಬಂದಿದ್ದೇನೆ. ನನ್ನ ಇಲಾಖೆಗೆ ಸಂಬಂಧಿಸಿದ ಅನೇಕ ಮನವಿಗಳನ್ನು ಇಲ್ಲಿ ಕೊಟ್ಟಿದ್ದಾರೆ.
ಇದನ್ನೂ ಓದಿ : ಉಕ್ರೇನ್ ಏರ್ಪೋರ್ಟ್ನಲ್ಲಿ ಸಿಲುಕಿರುವ ರಾಜ್ಯದ 10 ವಿದ್ಯಾರ್ಥಿಗಳ ರಕ್ಷಣೆಗೆ ಕ್ರಮ: ಸಿಎಂ ಬೊಮ್ಮಾಯಿ
ಇಲಾಖೆ ವ್ಯಾಪ್ತಿಯ ಸಮಸ್ಯೆಗಳ ಬಗ್ಗೆ ಮನವಿ ಮಾಡಿದ್ದಾರೆ, ಮೌಖಿಕವಾಗಿಯೂ ಹೇಳಿದ್ದಾರೆ. ನನ್ನ ಇಲಾಖೆಗೆ ಬರುವ ದೇವಾಲಯಗಳ ಸಮಸ್ಯೆಗಳ ಬಗ್ಗೆಯೂ ಮನವಿ ಬಂದಿದ್ದು, ಎಲ್ಲರೊಂದಿಗೆ ಮಾತನಾಡಿ ಸರಿಪಡಿಸುವ ಕೆಲಸ ಮಾಡುವ ಭರವಸೆ ನೀಡಿದ್ದೇನೆ. ಇದು ನನಗೆ ಗೌರವ ,ಅಭಿಮಾನ ಅನ್ನಿಸುತ್ತಿದೆ. ಪಕ್ಷದ ಕಚೇರಿಗೆ ಕರೆಸಿಕೊಂಡು ಅಹವಾಲು ಆಲಿಸುವ ಈ ವ್ಯವಸ್ಥೆ ಉತ್ತಮವಾಗಿ ನಡೆಯುತ್ತಿದೆ. ಖುಷಿ ತರುತ್ತಿದೆ ಎಂದರು.