ಬೆಂಗಳೂರು : ಯಾರಿಗೆ ಏನೇ ಅಸಮಾಧಾನವಿದ್ದರೂ ಪಕ್ಷದ ಚೌಕಟ್ಟಿನೊಳಗೆ ಮಾತನಾಡಬೇಕು, ವರಿಷ್ಠರ ಗಮನಕ್ಕೆ ತರಬೇಕು ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದರು.
ವಿಧಾನಸೌಧದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಆರ್.ಅಶೋಕ್, ಶಿಸ್ತು ಉಲ್ಲಂಘಿಸಿ ಮಾತನಾಡುವವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಕೋರ್ ಕಮಿಟಿ ಸಭೆಯಲ್ಲಿ ನಿರ್ಧರಿಸಲಾಗಿದೆ. ರಾಜ್ಯದ ಬೆಳವಣಿಗೆಗಳ ಬಗ್ಗೆ ಬಿಜೆಪಿ ರಾಷ್ಟ್ರೀಯ ವರಿಷ್ಠರಿಗೆ ಪಿನ್ ಟು ಪಿನ್ ಮಾಹಿತಿ ನೀಡಲಾಗಿದೆ. ಯಾಕೆಂದರೆ ಶಿಸ್ತು ಕ್ರಮ ಕೈಗೊಳ್ಳುವ ಅಧಿಕಾರ ರಾಜ್ಯ ಘಟಕಕ್ಕೆ ಇಲ್ಲ. ಕೇಂದ್ರದ ವರಿಷ್ಠರು ಕ್ರಮ ಕೈಗೊಳ್ಳುತ್ತಾರೆ ಎಂದು ತಿಳಿಸಿದರು.
ಎರಡು ದಿನ ಉತ್ತಮ ಸಭೆಯಾಗಿದೆ. ಸಚಿವರಿಗೆ ಎರಡು ದಿನ ವಿಧಾನಸೌಧದಲ್ಲಿ ಇರುವಂತೆ ಹೇಳಿದ್ದಾರೆ. ಪಕ್ಷ ಹಾಗೂ ಸಿಎಂ ಬಗ್ಗೆ ಏನೇ ಆರೋಪ ಇದ್ದರೂ ಅವರು ಪಕ್ಷದ ವೇದಿಕೆಯಲ್ಲಿ ಮಾತನಾಡಬೇಕು. ಹೊರಗಡೆ ಮಾತನಾಡುವವರನ್ನು ಸಹಿಸುವುದಿಲ್ಲ ಎಂದು ಸಭೆಯಲ್ಲಿ ನೇರವಾಗಿ ಸೂಚನೆ ಕೊಟ್ಟಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ:ಶಿವಮೊಗ್ಗ ಗಲಭೆ ಪ್ರಕರಣ: ಹಿಂದೂ, ಮುಸ್ಲಿಂ ಸಂಘಟನೆಗಳಿಂದ ಪ್ರತಿಭಟನೆ
ಸಚಿವರು ಜಿಲ್ಲಾ ಪ್ರವಾಸ ಮಾಡುವಂತೆ ಸೂಚನೆ ನೀಡಲಾಗಿದೆ. ಎಲ್ಲ ಸಚಿವರು 30 ಜಿಲ್ಲೆಗಳಿಗೆ ಪ್ರವಾಸ ಮಾಡುವಂತೆ ಸೂಚಿಸಲಾಗಿದೆ. ಎರಡು ದಿನಗಳ ಕಾಲ ಸಿಎಂ ಶಾಸಕರ ಜೊತೆಗೆ ಸಭೆ ನಡೆಸಿದ್ದು, ಎಲ್ಲಾ ಶಾಸಕರ ಜೊತೆಗೆ ಸಿಎಂ ಮಾತನಾಡಿದ್ದಾರೆ. ಕ್ಷೇತ್ರದಲ್ಲಿ ಏನಾದರೂ ಸಮಸ್ಯೆ ಇದ್ದರೆ ತಿಳಿಸುವಂತೆ ಮುಖ್ಯಮಂತ್ರಿಗಳು ಶಾಸಕರುಗಳನ್ನು ಕೇಳಿದ್ದಾರೆ ಎಂದರು.