ಬೆಂಗಳೂರು: ಮೇಕೆದಾಟು ಯೋಜನೆ ಎರಡೂ ರಾಜ್ಯಗಳಿಗೆ ಅನುಕೂಲ ಆಗುತ್ತೆ ಎಂದು ತಮಿಳುನಾಡಿನ ಸಿಎಂಗೆ ಅರ್ಥ ಮಾಡಿಸುವ ಪ್ರಯತ್ನ ಮಾಡಿದ್ದೇವೆ. ಆದರೆ ತಮಿಳುನಾಡಿನ ಸಿಎಂ ಉತ್ತರದ ವೈಖರಿ ಸರಿಯಿಲ್ಲ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅಸಮಾಧಾನ ವ್ಯಕ್ತಪಡಿಸಿದರು.
ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈಗಾಗಲೇ ಮೇಕೆದಾಟು ಯೋಜನೆ ಸಂಬಂಧ ಡಿಪಿಆರ್ ಆಗಿದೆ. ಈ ಯೋಜನೆ ನಿನ್ನೆ ಮೊನ್ನೆಯದಲ್ಲ. ಇದು ನಾಲ್ಕು ದಶಕದ ಯೋಜನೆಯಾಗಿದೆ. ನಾಲ್ಕು ಪ್ರೊಜೆಕ್ಟ್ ಮಾಡಲಾಗಿದ್ದು, ಅದೆಲ್ಲ ನ್ಯಾಷನಲ್ ಹೈಡ್ರೋಎಲೆಕ್ಟ್ರಿಕ್ ಕಾರ್ಪೋರೇಶನ್ ಗೈಡ್ ಮಾಡಿತ್ತು. ಅದಾದ ಮೇಲೆ ಹಲವಾರು ಬಾರಿ ಮಾರ್ಪಾಡಾಗಿದ್ದು, 2012ರಲ್ಲಿ ಈ ಯೋಜನೆಗೆ ಹೊಸ ಡಿಪಿಆರ್ ಮಾಡಲಾಗಿತ್ತು ಎಂದರು.
ಇದನ್ನೂ ಓದಿ: ಮೇಕೆದಾಟು ಯೋಜನೆಯಿಂದ ಎರಡೂ ರಾಜ್ಯಕ್ಕೆ ಅನುಕೂಲ: ಬಸವರಾಜ ಬೊಮ್ಮಾಯಿ
ಕುಡಿಯುವ ನೀರಿನ ಸಲುವಾಗಿ ಬಳಕೆ ಮಾಡಲು ಈ ಯೋಜನೆ ರೂಪಿಸಲಾಗಿದೆ. ತಮಿಳುನಾಡು ಈ ವಿಚಾರದಲ್ಲಿ ಹೊಸದಾಗಿ ಆಕ್ಷೇಪ ಮಾಡುತ್ತಿಲ್ಲ. ಅಲ್ಲಿ ಸರ್ಕಾರ ಬದಲಾಗಿದೆ. ಆದರೆ ನಮ್ಮ ಲೀಗಲ್ ಬ್ಯಾಟಲ್ ನಾವು ಮುಂದುವರೆಸುತ್ತೇವೆ. ಈ ಯೋಜನೆ ನಾವು ಮಾಡಿಯೇ ಮಾಡುತ್ತೇವೆ. ಪರಿಸರ ಸಂಬಂಧ‘ ಅನುಮತಿ ಕೂಡ ತೆಗೆದುಕೊಳ್ಳುತ್ತೇವೆ ಎಂದರು.
ಕೇರಳ ಗಡಿ ಭಾಗದಲ್ಲಿ ಸ್ಯಾಟಲೈಟ್ ಫೋನ್ ಬಳಕೆ ಹೆಚ್ಚಳ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಸ್ಯಾಟಲೈಟ್ ಫೋನ್ ಬಳಕೆ ಮೇಲೆ ನಿರಂತರ ಕಣ್ಣಿಟ್ಟಿದ್ದೇವೆ. ಅಕ್ರಮ ಅರಣ್ಯ ಉತ್ಪನ್ನ ಸಾಗಣೆಗಳ ಬಗ್ಗೆಯೂ ಕೂಡ ಪತ್ತೆ ಮಾಡಿ ಕ್ರಮ ಜರುಗಿಸಿದ್ದೇವೆ. ಕಾಲ ಕಾಲಕ್ಕೆ ಕಾನೂನು ಪ್ರಕಾರ ಏನು ಮಾಡಬೇಕೋ ಮಾಡುತ್ತೇವೆ ಎಂದರು.