ಬೆಂಗಳೂರು: ಚಾಮರಾಜಪೇಟೆ ಈದ್ಗಾ ಮೈದಾನದ ವಿವಾದ ತೀವ್ರಗೊಂಡಿದೆ. ಮೈದಾನದ ಹಕ್ಕು ಕುರಿತು ಬಿಬಿಎಂಪಿ ನೀಡಿರುವ ಹೇಳಿಕೆ ಖಂಡಿಸಿ ನಾಗರಿಕರ ಸಂಘಟನೆಗಳ ಒಕ್ಕೂಟ ಇಂದು ಮಹತ್ವದ ಸಭೆ ನಡೆಸಿದ್ದು, ವಿವಾದವನ್ನು ಬಗೆಹರಿಸದಿದ್ದರೆ ಚಾಮರಾಜಪೇಟೆ ಬಂದ್ ಮಾಡುವುದಾಗಿ ಎಚ್ಚರಿಕೆ ನೀಡಿದೆ.
ಚಾಮರಾಜಪೇಟೆ ಮೈದಾನ ಹಿಂದೂ ಸಂಘಟನೆಗಳಿಗೆ ಸೇರಿದ್ದು, ಈ ಸಂಬಂಧ ಎಲ್ಲಾ ದಾಖಲೆಗಳಿದ್ದರೂ ಬಿಬಿಎಂಪಿ ಆಯುಕ್ತರು ವಕ್ಫ್ ಬೋರ್ಡ್ ಆಸ್ತಿ ಎಂದು ಗೊಂದಲದ ಹೇಳಿಕೆ ನೀಡಿದ್ದಾರೆ. ಕೂಡಲೇ ತಮ್ಮ ಹೇಳಿಕೆಯನ್ನು ಹಿಂಪಡೆಯಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ನಡೆಸುವುದಾಗಿ ಹೇಳಿದರು. ಚಾಮರಾಜಪೇಟೆ ನಾಗರಿಕರು, ವಿವಿಧ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಇಂದು ಜಂಗಮ ಮಠದಲ್ಲಿ ಸಭೆ ನಡೆಸಿ ಸಮಾಲೋಚನೆ ನಡೆಸುತ್ತಿದ್ದ ಸಂದರ್ಭದಲ್ಲಿ ಶಾಸಕ ಜಮೀರ್ ಆಗಮಿಸಿದ್ದಕ್ಕೆ ತೀವ್ರ ಆಕ್ರೋಶ ವ್ಯಕ್ತವಾಯಿತು.
ಎಲ್ಲೋ ಕುಳಿತುಕೊಂಡು ಆಟವಾಡುವ ಅಗತ್ಯವಿಲ್ಲ. ಈ ಜಾಗ ಹಿಂದುಗಳಿಗೆ ಸೇರಿದ್ದು, ಅದನ್ನು ನಮಗೆ ಬಿಟ್ಟುಕೊಡಬೇಕು. ನಾವು ಯಾವುದೇ ಒತ್ತಡಕ್ಕೂ ಮಣಿಯುವುದಿಲ್ಲ. ಬಿಬಿಎಂಪಿ ಆಯುಕ್ತರು ಯಾವುದೋ ಒತ್ತಡಕ್ಕೆ ಮಣಿದು ಗೊಂದಲದ ಹೇಳಿಕೆ ನೀಡಿದ್ದಾರೆ ಎಂದು ಸಂಘಟನೆಗಳ ಮುಖಂಡರು ಹೇಳಿದರು.
ಇದನ್ನೂ ಓದಿ: ಉತ್ತಮ ಮಳೆ: ತುಂಗಭದ್ರಾ ಜಲಾಶಯಕ್ಕೆ ದಾಖಲೆ ಪ್ರಮಾಣದಲ್ಲಿ ಹರಿದು ಬಂತು ನೀರು
ಜುಲೈ 12ರಂದು ಚಾಮರಾಜಪೇಟೆ ಬಂದ್: ಈದ್ಗಾ ಮೈದಾನಕ್ಕೆ ನಾಲ್ವಡಿ ಕೃಷ್ಣರಾಜ ಒಡೆಯರ್ ಹೆಸರನ್ನು ನಾಮಕರಣ ಮಾಡುತ್ತೇವೆ. ಬಿಬಿಎಂಪಿ ಸೂಕ್ತ ಕ್ರಮ ಕೈಗೊಂಡು ವಿವಾದ ಬಗೆಹರಿಸದಿದ್ದರೆ ಜುಲೈ 12ರಂದು ಚಾಮರಾಜಪೇಟೆ ಬಂದ್‌ಗೆ ಕರೆ ಕೊಡಬೇಕಾಗುತ್ತದೆ. ಈ ಹೋರಾಟವನ್ನು ನಾವು ಇಲ್ಲಿಗೆ ಕೈ ಬಿಡುವುದಿಲ್ಲ, ನಿರಂತರವಾಗಿರುತ್ತದೆ ಎಂದು ತಿಳಿಸಿದರು.