ಬೆಂಗಳೂರು: ಮತದಾರರ ದತ್ತಾಂಶ ಕಳ್ಳತನ ಪ್ರಕರಣ ಸಂಬಂಧ ನಾಳೆ ಅಥವಾ ನಾಡಿದ್ದು ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ನೀಡುತ್ತೇವೆ ಎಂದು ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ್ ತಿಳಿಸಿದ್ದಾರೆ.
ನಗರದಲ್ಲಿಂದು ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇಲ್ಲಿ ನಡೆದ ಅಕ್ರಮ ಕುರಿತು ಆಯೋಗಕ್ಕೆ ದೂರು ಕೊಡುತ್ತೇವೆ. ಜನರ ಖಾಸಗಿ ಮಾಹಿತಿಯನ್ನು ಇವರು ಕಲೆ ಹಾಕಿದ್ದಾರೆ. ಇದು ಅತ್ಯಂತ ಗಂಭೀರ ವಿಚಾರ. ಕರ್ನಾಟಕ ಮಾತ್ರವಲ್ಲದೇ, ಬೇರೆ ರಾಜ್ಯದಲ್ಲೂ ಚುನಾವಣೆ ಇದೆ. ಅಲ್ಲೂ ಅಕ್ರಮ ನಡೆದಿರುವ ಶಂಕೆ ಇದೆ. ಹಾಗಾಗಿ ಚುನಾವಣಾ ಆಯೋಗದ ಮುಂದೆ ಹೋಗುತ್ತೇವೆ. ಇಲ್ಲಿ ಯಾರು ತಪ್ಪು ಮಾಡಿದ್ದಾರೋ ಅವರಿಗೆ ಶಿಕ್ಷೆ ಆಗಲೇಬೇಕು. ಯಾರು ಭಾಗಿಯಾಗಿದ್ದಾರೋ ಅವರ ವಿರುದ್ಧ ದೂರು ದಾಖಲಾಗಬೇಕು. ಇವಿಎಂ ಮಷಿನ್ಗೂ ಅನುಮತಿ ಕೊಟ್ಟಿದ್ದಾರೆ. ಇದು ಕೂಡ ಆತಂಕದ ವಿಚಾರ ಎಂದು ಹೇಳಿದ್ದಾರೆ. ಮತದಾರರ ಗುರುತಿನ ಚೀಟಿಯನ್ನು ಮತ್ತೆ ತಯಾರಿ ಮಾಡಬೇಕು. ಈಗ ಮಾಡಿರುವ ದತ್ತಾಂಶ ಸಂಗ್ರಹಣೆಯನ್ನು ಕೈಬಿಡಬೇಕು. ಇದರಿಂದ ನಿಸ್ಪಕ್ಷಪಾತವಾಗಿ ಚುನಾವಣೆ ನಡೆಯುತ್ತದೆ ಎಂದರು.
ಈ ಪ್ರಕರಣ ಪ್ರಜಾಪ್ರಭುತ್ವದ ಕಗ್ಗೊಲೆ. ಬೇರೆ ರಾಜ್ಯದಲ್ಲಿಯೂ ಹೀಗೆ ಆಗಿದಿಎಯಾ ಅನ್ನೋದನ್ನ ನೋಡಬೇಕು. ಹಾಗಾಗಿ ನಾಳೆ ಪಕ್ಷದ ರಾಜ್ಯಾಧ್ಯಕ್ಷ ಡಿ ಕೆ ಶಿವಕುಮಾರ್, ಕಾಂಗ್ರೆಸ್ ರಾಜ್ಯ ಉಸ್ತುವಾರಿ ಸುರ್ಜೆವಾಲಾ ಸೇರಿ ಹಲವರು ಸೇರಿ ದೂರು ಕೊಡ್ತೀವಿ. ಬೆಂಗಳೂರು ನಂತರ ಇಡೀ ರಾಜ್ಯದ ಡೇಟಾ ಸಿಕ್ಕಿದೆ ಅವರಿಗೆ. ಹಾಗಾಗಿ ಇಡೀ ರಾಜ್ಯಾದ್ಯಂತ ಈ ಕುತಂತ್ರ ಮಾಡಲು ಹೊರಟಿದ್ದಾರೆ. ಡೇಟಾವನ್ನು ದುಡ್ಡಿಗೆ ಮಾರಲು ಹೊರಟಿದ್ದಾರೆ. ಪಕ್ಷಗಳು ಕೂಡ ಈ ಡೇಟಾ ವನ್ನು ಉಪಯೋಗಿಸಿಕೊಳ್ಳುತ್ತವೆ. ಉಚಿತವಾಗಿ ಹೀಗೆ ಮಾಡಿದ್ದೇವೆ ಅಂದರೆ ಅದು ಸರಿಯಲ್ಲ. ಉಚಿತವಾಗಿ ಮಾಡುವುದಕ್ಕೂ ಒಂದು ನಿಯಮ ಇರುತ್ತಲ್ವಾ? ಆ ಸಂಸ್ಥೆ ಪರವಾಗಿ ಯುವಕರು ಹೋಗಿದ್ದಾರೆ. ಅವರಿಗೆ ನಿರುದ್ಯೋಗ ಸಮಸ್ಯೆ ಇದ್ದಿದ್ದರಿಂದ ಹೋಗಿದ್ದಾರೆ. ಅದು ಅವರ ತಪ್ಪಲ್ಲ ಅದು ಎಂದು ಎಂ ಬಿ ಪಾಟೀಲ್ ಹೇಳಿದರು.
ಸಿದ್ದರಾಮಯ್ಯರಿಂದ ಕೊಪ್ಪಳದಲ್ಲಿ ಅಭ್ಯರ್ಥಿ ಘೋಷಣೆ ವಿಚಾರ ಕುರಿತು ಪ್ರತಿಕ್ರಿಯಿಸಿ, ಅವರು ಅಭ್ಯರ್ಥಿಗಳ ಘೋಷಣೆಗೆ ಸಮಿತಿ ಮಾಡಬೇಕು. ಎಐಸಿಸಿ ಅಧ್ಯಕ್ಷರು ಒಪ್ಪಿಗೆ ನೀಡಿದ ನಂತರ ಪಟ್ಟಿ ಬಿಡುಗಡೆ ಮಾಡಲಾಗುತ್ತದೆ. ಸಿದ್ದರಾಮಯ್ಯ ಅವರು ಘೋಷಣೆ ಮಾಡಿದ್ದು, ಸ್ಫೂರ್ತಿ ತುಂಬಲು. ಇದಕ್ಕೆ ಬೇರೆ ಅರ್ಥ ಕಲ್ಪಿಸೋದು ಬೇಡ. ಅದೇನು ಅಂತಿಮ ಅಲ್ಲ, ಅದಕ್ಕೂ ಪ್ರಕ್ರಿಯೆ ಇರಲಿದೆ ಎಂದು ತಮ್ಮ ಪಕ್ಷದ ನಾಯಕರನ್ನು ಎಂ ಬಿ ಪಾಟೀಲ್ ಸಮರ್ಥಿಸಿಕೊಂಡರು.
ಇದನ್ನೂ ಓದಿ: ಅಭ್ಯರ್ಥಿ ಘೋಷಿಸುವ ಅಧಿಕಾರ ನನಗಾಗಲಿ ಸಿದ್ದರಾಮಯ್ಯಗಾಗಲಿ ಇಲ್ಲ: ಡಿಕೆಶಿ