ಬೆಂಗಳೂರು : ನಗರದಲ್ಲಿ ಮರಗಳ ಮೇಲೆ ಹೊಡೆದಿರುವ ಮೊಳೆ, ಸ್ಟಾಪ್ಲರ್ ಮತ್ತು ಪೋಸ್ಟರ್‌ಗಳನ್ನು ತೆಗೆದು ಮರಗಳನ್ನು ಮುಕ್ತಗೊಳಿಸುವ ಅಭಿಯಾನಕ್ಕೆ ವ್ಯಾಪಕ ಜನ ಬೆಂಬಲ ವ್ಯಕ್ತವಾಗಿದೆ. ಈ ಕುರಿತು ಈಟಿವಿ ಭಾರತವು ವಿಶೇಷ ವರದಿ ಮಾಡಿತ್ತು.
ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ವಿನೋದ್ ಮತ್ತು ಅವರ ಗೆಳೆಯರ ಬಳಗ ಈ ಕಾರ್ಯಕ್ರಮ ಹಮ್ಮಿಕೊಂಡಿದೆ. ಇವರೊಂದಿಗೆ ನಟ ಕಿಶೋರ್ ಹಾಗೂ ಸೈಬರ್ ಪೊಲೀಸ್ ಠಾಣೆಯ ರಾಜಶೇಖರ್ ಸೇರಿದಂತೆ 40ಕ್ಕೂ ಹೆಚ್ಚು ಸ್ವಯಂಸೇವಕರು ಭಾಗಿಯಾಗಿ ಮೊಳೆ ತೆಗೆಯುವ ಕಾಯಕದಲ್ಲಿ ನಿರತರಾಗಿದ್ದಾರೆ.
ಇಂದು ಇವರೆಲ್ಲರೂ ಸೇರಿ ಕೆಜಿ ರಸ್ತೆಯ ಮರಗಳಲ್ಲಿ ಹೊಡೆದಿರುವ ಎಲ್ಲ ರೀತಿಯ ಮೊಳೆಗಳು, ಪೋಸ್ಟರ್ ಸೇರಿ ಇನ್ನಿತರೆ ವಸ್ತುಗಳನ್ನು ತೆಗೆಯುವ ಕಾಯಕದಲ್ಲಿ ಕೈ ಜೋಡಿಸಿದ್ದರು. ಈ ಕುರಿತು ಮಾಹಿತಿ ಹಂಚಿಕೊಂಡ ವಿನೋದ್ ಕರ್ತವ್ಯ, ಒಂದೊಮ್ಮೆ ಸಂಪಂಗಿರಾಮನಗರದಲ್ಲಿ ಮರದ ಮೇಲೆ ಹೊಡೆದಿದ್ದ ಮೊಳೆಯಿಂದ ನನ್ನ ತಲೆಗೆ ಗಾಯವಾಯಿತು.
ಆಗ, ಮನುಷ್ಯನಿಗೆ ಇಷ್ಟು ನೋವಾದರೆ ಮರಗಳಿಗೆ ಇನ್ನೆಷ್ಟು ನೋವಾಗಬಹುದು ಎಂದು ಭಾವಿಸಿ ಸಂಪಂಗಿರಾಮ ನಗರದಲ್ಲಿರುವ ಮರಗಳ ಮೊಳೆ ತೆಗೆಯುವ ಅಭಿಯಾನ ಆರಂಭಿಸಿದೆ ಎಂದು ಹೇಳಿದರು.