ಬೆಂಗಳೂರು : ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್‌ಸಿಎಲ್)ಕ್ಕೆ ಪೂರ್ಣಪ್ರಮಾಣದಲ್ಲಿ ನೂತನ ವ್ಯವಸ್ಥಾಪಕ ನಿರ್ದೇಶಕರನ್ನಾಗಿ ಹಿರಿಯ ಐಎಎಸ್ ಅಧಿಕಾರಿ ಮಹೇಶ್ವರ್ ರಾವ್ ಅವರನ್ನು ನೇಮಕ ಮಾಡಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.
ಕೇಂದ್ರದ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಹಿರಿಯ ಅಧಿಕಾರಿಗಳು ಗುರುವಾರ ಈ ಕುರಿತು ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರವನ್ನು ಬರೆದಿದ್ದಾರೆ. ಆದ್ದರಿಂದ ಮಹೇಶ್ವರ್ ರಾವ್ ಅವರು ಬಿಎಂಆರ್‌ಸಿಎಲ್ ನೂತನ ವ್ಯವಸ್ಥಾಪಕ ನಿರ್ದೇಶಕರಾಗಿ ನೇಮಕಗೊಂಡಿದ್ದಾರೆ.
ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕರನ್ನು ಕೇಂದ್ರ ಸರ್ಕಾರದ ಅನುಮತಿ ಇಲ್ಲದೇ ರಾಜ್ಯ ಸರ್ಕಾರ ವರ್ಗಾವಣೆ ಮಾಡುವಂತಿಲ್ಲ ಅಥವಾ ತೆಗೆದು ಹಾಕುವಂತಿಲ್ಲ. ಅಲ್ಲದೇ ಕರ್ನಾಟಕ ಸರ್ಕಾರ ವ್ಯವಸ್ಥಾಪಕ ನಿರ್ದೇಶಕರಿಗೆ ಯಾವುದೇ ಹೆಚ್ಚುವರಿ ಜವಾಬ್ದಾರಿಯನ್ನು ಕೇಂದ್ರದ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಒಪ್ಪಿಗೆ ಇಲ್ಲದೇ ನೀಡುವಂತಿಲ್ಲ ಎಂದು ಆದೇಶದಲ್ಲಿ ತಿಳಿಸಿದೆ.
ನಮ್ಮ ಮೆಟ್ರೋದಲ್ಲಿ ಮೊಬೈಲ್ ಕ್ಯೂಆರ್ ಗ್ರೂಪ್ ಟಿಕೆಟ್ ಜಾರಿ: ಪ್ರಯಾಣಿಕರ ಅನುಕೂಲಕ್ಕಾಗಿ ನಮ್ಮ ಮೆಟ್ರೋ ವತಿಯಿಂದ ಮೊಬೈಲ್ ಕ್ಯೂಆರ್ ಗ್ರೂಪ್ ಟಿಕೆಟ್ ನ.13 ರಿಂದ ಜಾರಿಗೆ ಬರಲಿದೆ ಎಂದು ಬಿಎಂಆರ್‌ಸಿಎಲ್ (ನವೆಂಬರ್- 11-23) ತಿಳಿಸಿತ್ತು. ಇಲ್ಲಿಯವರೆಗೆ ಮೊಬೈಲ್ ಕ್ಯೂಆರ್ ಟಿಕೆಟ್‌ಗಳನ್ನು ಮೊಬೈಲ್ ಅಪ್ಲಿಕೇಶನ್‌ಗಳ ಮೂಲಕ ನಮ್ಮ ಮೆಟ್ರೋ ಪೇಟಿಎಂ, ವಾಟ್ಸ್ಆ್ಯಪ್ ಮತ್ತು ಯಾತ್ರಾ ಪ್ರಯಾಣಿಕರಿಗೆ ಒಂದು ಪ್ರಯಾಣಕ್ಕೆ ನೀಡಲಾಗುತ್ತಿತ್ತು. ಇದೀಗ ಸಾರ್ವಜನಿಕರ ಬೇಡಿಕೆಯ ಮೇರೆಗೆ ಮೊಬೈಲ್ ಕ್ಯೂಆರ್ ಗ್ರೂಪ್ ಟಿಕೆಟ್ ಸೋಮವಾರದಿಂದ ಜಾರಿಗೆ ಬರಲಿದೆ ಎಂದು ತಿಳಿಸಿತ್ತು.
ಒಮ್ಮೆ ಆರು ಜನರ ಕುಟುಂಬ/ಗುಂಪು ಪ್ರಯಾಣಿಸಲು ಅನುಕೂಲವಾಗುವಂತೆ ಮೊಬೈಲ್ ಕ್ಯೂಆರ್ ಟಿಕೆಟ್‌ಗಳನ್ನು ಪರಿಚಯಿಸಲಾಗುತ್ತಿದೆ. ಮೊಬೈಲ್ ಕ್ಯೂಆರ್ ಟಿಕೆಟ್‌ಗಳು ಟೋಕನ್ ದರಕ್ಕಿಂತ ಶೇ.5 ರಿಯಾಯಿತಿಯಲ್ಲಿ ನೀಡಲಾಗುತ್ತಿದೆ. ಈ ಸೌಲಭ್ಯವನ್ನು ಬಳಸುವ ಪ್ರಯಾಣಿಕರ ಸಂಖ್ಯೆಗೆ ಎನ್‌ಕ್ರಿಪ್ಟ್ ಮಾಡಿದ ಕ್ಯೂಆರ್ ಟಿಕೆಟ್ ಬರುತ್ತದೆ. ಈ ಕ್ಯೂಆರ್ ಟಿಕೆಟ್ ಗುಂಪಿನ ಪ್ರತಿ ಪ್ರಯಾಣಿಕರ ಪ್ರವೇಶ ಮತ್ತು ನಿರ್ಗಮನಕ್ಕಾಗಿ ಎಫ್‌ಸಿ ಗೇಟ್‌ಗಳಲ್ಲಿ ಸ್ಕ್ಯಾನ್ ಮಾಡಬೇಕಾಗುತ್ತದೆ ಎಂದು ಬಿ.ಎಂ.ಆರ್.ಸಿ.ಎಲ್ ಪ್ರಕಟಣೆಯಲ್ಲಿ ತಿಳಿಸಿತ್ತು.
ಇನ್ನೊಂದೆಡೆ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು, ಬಿಡದಿಯು ಕೈಗಾರಿಕಾ ಪ್ರದೇಶವಾಗಿದ್ದು, ಇಲ್ಲಿ ಒಂದು ಲಕ್ಷಕ್ಕೂ ಅಧಿಕ ಜನ ಉದ್ಯೋಗ ಮಾಡುತ್ತಿದ್ದಾರೆ. ಅವರ ಓಡಾಟಕ್ಕೆ ಅನುಕೂಲವಾಗಲಿ ಎಂಬ ದೃಷ್ಟಿಯಿಂದ ಬಿಡದಿಗೆ ನಮ್ಮ ಮೆಟ್ರೋ ಘೋಷಣೆ ಮಾಡಲಾಗಿದೆ. ಹಾಗೆಯೇ, ಇನ್ಮುಂದೆ ಬಿಡದಿ ಪ್ರಾಧಿಕಾರ ಹೆಸರಿಗೆ ಬದಲಾಗಿ ಗ್ರೇಟರ್ ಬೆಂಗಳೂರು ಎಂಬ ಹೊಸ ನಾಮಕರಣ ಮಾಡಲಾಗಿದೆ ಎಂದು ತಿಳಿಸಿದ್ದರು.
ಇದನ್ನೂ ಓದಿ: ಪ್ರಯಾಣಿಕರ ಅನುಕೂಲಕ್ಕಾಗಿ ನಮ್ಮ ಮೆಟ್ರೋದಲ್ಲಿ ಮೊಬೈಲ್ ಕ್ಯೂಆರ್ ಗ್ರೂಪ್ ಟಿಕೆಟ್ ಜಾರಿ: ಬಿಎಂಆರ್‌ಸಿಎಲ್