ಬೆಂಗಳೂರು: ರಮೇಶ ಜಾರಕಿಹೊಳಿಯನ್ನು ಸಚಿವ ಸ್ಥಾನದಿಂದ ಕೆಳಗಿಳಿಸಲು ಹನಿಟ್ರ್ಯಾಪ್ ನಡೆಸಲಾಗಿದೆ. ಮುಂದಿನ ದಿನಗಳಲ್ಲಿ ಇಂತಹ ಚಟುವಟಿಕೆಗೆ ಕಡಿವಾಣ ಹಾಕಲು ಸರ್ಕಾರ ಕಾನೂನು ರೂಪಿಸಬೇಕು ಎಂದು ಶಾಸಕ ಮಹೇಶ ಕುಮಟಳ್ಳಿ ಹೇಳಿದ್ದಾರೆ.
ಕುಮಾರಕೃಪಾ ಅತಿಥಿಗೃಹದಲ್ಲಿ ಮಾತನಾಡಿದ ಅವರು, ಎರಡು ಮೂರು ವಿಷಯಗಳ ಬಗ್ಗೆ ನನಗೆ ಉತ್ತರ ಸಿಗುತ್ತಿಲ್ಲ. ಒಂದು ಫೇಕ್ ಸಿಡಿ, ಎರಡು ಹನಿಟ್ರ್ಯಾಪ್, ಮೂರು ಈ ಮಹಿಳೆ ಸಂತ್ರಸ್ತೆನಾ. ಮಂತ್ರಿಗಿರಿ ಹಾಗೂ ರಮೇಶ ಬೆಳವಣಿಗೆ ಸಹಿಸದೇ ಇರೋರು ಈ ರೀತಿ ಮಾಡಿದ್ದಾರೆ. ಯುವತಿ ಮೇಲೆ ಎಲ್ಲಿಯೂ ಬಲಾತ್ಕಾರವಾಗಲಿ, ಅತ್ಯಾಚಾರ ಆಗಿಲ್ಲ, ಒಂದು ವೇಳೆ ವೀಡಿಯೋ ಫೇಕ್ ಅಲ್ಲ ಅಂದರೆ, ಅದು ಅವರ ಖಾಸಗಿ ಬದುಕಾಗಲಿದೆ. ಕಲ್ಲಹಳ್ಳಿ ಹಲವಾರು ವಿಷಯಗಳ ಮೇಲೆ ಹಲವು ಕಾರಣ ಹೇಳಿ ಕೇಸ್ ವಾಪಸ್ ಪಡೆದಿದ್ದಾರೆ. ಆದರೆ ರಮೇಶ ಜಾರಕಿಹೊಳಿಯವರ ಮನೆಯವರ, ಬಂಧು-ಬಳಗ, ಮಕ್ಕಳ ಪರಿಸ್ಥಿತಿ ಏನಾಗಿರಬೇಡ. ಮಾನ ಹರಾಜು ಹಾಕಿ ಮಂತ್ರಿಗಿರಿಯಿಂದ ಇಳಿಸಬೇಕು ಎಂಬ ಉದ್ದೇಶ ಸ್ಪಷ್ಟವಾಗಿದೆ.
ಆರು ಜನ ಸಚಿವರು ತಪ್ಪು ಮಾಡಿದ್ದಾರೆ ಅಂತಾ ಕೋರ್ಟ್ಗೆ ಹೋಗಿಲ್ಲ, ಭಯದಿಂದ ಹೋಗಿದ್ದಾರೆ. 1-2 ಲಕ್ಷ ಕೊಟ್ಟರೆ, ನನ್ನ ತರವೇ ಮುಖವಾಡ ಬರುತ್ತದೆ. ನಾನು ನಮ್ಮ ಮನೆಯವರಿಗೆ ಹೇಳಿದ್ದೇನೆ. ನನ್ನ ಮುಖವಾಡ ಧರಿಸಿ ವಿಡಿಯೋ ಮಾಡಿದರೆ ಅಂಜಬೇಡಿ ಎಂದಿದ್ದೇನೆ. ಒಂದು ವೇಳೆ ಫೇಕ್ ವೀಡಿಯೋ ಬಂದರೆ ಅದಕ್ಕೆ ಉತ್ತರ ಕೊಡುತ್ತೇನೆ. ಜಾರಕಿಹೊಳಿ ಈ ಪ್ರಕರಣದಿಂದ ಹೊರಬಂದು ಸಾಮಾಜಿಕ ಜೀವನದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದಿದ್ದಾರೆ.