ಬೆಂಗಳೂರು: ರಾಜ್ಯ ಸಮ್ಮಿಶ್ರ ಸರ್ಕಾರ ಆತಂಕಕ್ಕೆ ಸಿಲುಕುವ ಸೂಚನೆ ಹೆಚ್ಚಾಗುತ್ತಿದ್ದು,ಇಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ನಿವಾಸಕ್ಕೆ ಶಾಸಕ ಮಹೇಶ್ ಕುಮಟಳ್ಳಿ ಭೇಟಿ ಕೊಟ್ಟರು.
7 ಮಿನಿಸ್ಟರ್ಸ್ ಕ್ವಾಟರ್ಸ್‌ನಲ್ಲಿರುವ ರಮೇಶ್ ಜಾರಕಿಹೊಳಿ ನಿವಾಸಕ್ಕೆ ಆಗಮಿಸಿದ ಮಹೇಶ್ ಸಾಕಷ್ಟು ಸಮಯ ರಮೇಶ್ ಆಗಮನಕ್ಕೆ ಕಾದು ಕುಳಿತರು. ನಂತರ ರಮೇಶ್ ಜಾರಕಿಹೊಳಿಯನ್ನು ಭೇಟಿಯಾದ ಮಹೇಶ್ ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಸಿರುವ ಸಾಧ್ಯತೆಗಳಿವೆ.
ಈ ಬಗ್ಗೆ ಮಧ್ಯಮಗಳಿಗೆ ಪ್ರತಿಕ್ರಿಯಿಸಿದ ಮಹೇಶ್ ಕುಮಟಳ್ಳಿ, ನಾವು ಏನೂ ಮಾತನಾಡಿಲ್ಲ.ಸುಮ್ಮನೆ ಬಂದೆ. ಕೃಷ್ಣ ನದಿ ನೀರಿನ ಸಮಸ್ಯೆ ಇದೆ. ಅದರ ಬಗ್ಗೆ ಏನಾದ್ರೂ ಪ್ರಶ್ನೆ ಇದ್ರೆ ಕೇಳಿ. ಬೇರೇನೂ ಇಲ್ಲ ಮಾತಾಡುವಂತದ್ದು ಎಂದು ಹೇಳಿ ನುಣುಚಿಕೊಂಡರು.
ಲೋಕಸಭೆ ಚುನಾವಣೆ ಫಲಿತಾಂಶದ ನಂತರ ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಪತನಗೊಳ್ಳಲಿದೆ ಎನ್ನುವ ಮಾತು ಕೇಳಿಬರುತ್ತಿದೆ. ಕೆಲ ಶಾಸಕರು 'ಕೈ' ಕೊಟ್ಟು ಬಿಜೆಪಿ ಸೇರುತ್ತಾರೆ ಎನ್ನುವ ಮಾತು ಕೇಳಿಬರುತ್ತಿದೆ. ರಮೇಶ್ ಜಾರಕಿಹೊಳಿ ಬಿಜೆಪಿ ಸೇರುವುದು ಖಚಿತವಾಗಿದೆ. ಇವರೊಂದಿಗೆ ಮೂರ್ನಾಲ್ಕು ಶಾಸಕರು ತೆರಳುತ್ತಾರೆ ಎನ್ನುವ ಮಾತಿದೆ. ಫಲಿತಾಂಶದ ಬೆನ್ನಲ್ಲೇ ನಡೆದಿರುವ ಈ ಭೇಟಿ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.