ಬೆಂಗಳೂರು: ರಾಜ್ಯ ಸರ್ಕಾರದ ವಾರ್ತಾ ಮತ್ತು ಪ್ರಸಾರ ಇಲಾಖೆಯು ಮಹಾತ್ಮ ಗಾಂಧೀಜಿಯವರ ಕನಸುಗಳನ್ನು ಸಾಕಾರಗೊಳಿಸಲು ಶ್ರಮಿಸುವ ವ್ಯಕ್ತಿಗಳಿಗೆ ನೀಡುವ 'ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿ'ಯು ಈ ಬಾರಿ ರಾಷ್ಟ್ರಕವಿ ಡಾ.ಜಿ.ಎಸ್ ಶಿವರುದ್ರಪ್ಪನವರ ಪುತ್ರ ಚಾಮರಾಜನಗರದ ದೀನಬಂಧು ಟ್ರಸ್ಟ್ ಸಂಸ್ಥಾಪಕ ಟಿ.ಎಸ್ ಜಯದೇವ್ ಅವರಿಗೆ ದೊರೆತಿದೆ.
ಗಾಂಧೀಜಿಯವರ ತತ್ವಗಳನ್ನು ಅಳವಡಿಸಿಕೊಂಡು ಸಲ್ಲಿಸುತ್ತಿರುವ ಸಮಾಜ ಸೇವೆ ಗುರುತಿಸಿ ಜಯದೇವ್ ಅವರನ್ನು ಪ್ರತಿಷ್ಠಿತ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಪ್ರಶಸ್ತಿ ಫಲಕ ಹಾಗು 5 ಲಕ್ಷ ರೂ ನಗದು ಹೊಂದಿದೆ.
ಪ್ರಶಸ್ತಿಗೆ ಅರ್ಹರನ್ನು ಆಯ್ಕೆ ಮಾಡಲು ಕರ್ನಾಟಕ ಉಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಭೀಮನಗೌಡ ಸಂಗನಗೌಡ ಪಾಟೀಲ್ ಅಧ್ಯಕ್ಷತೆಯಲ್ಲಿ ಆಯ್ಕೆ ಸಮಿತಿ ರಚಿಸಲಾಗಿತ್ತು. ಸಮಿತಿಯ ಶಿಫಾರಸ್ಸನ್ನು ರಾಜ್ಯ ಸರ್ಕಾರ ಅಂಗೀಕರಿಸಿ ಆದೇಶ ಹೊರಡಿಸಿದೆ.