ಬೆಂಗಳೂರು: ಕೊನೆಗೂ ಸಚಿವ ಜೆ.ಸಿ.ಮಾಧುಸ್ವಾಮಿ ಕುರುಬ ಸಮುದಾಯಕ್ಕೆ ಕ್ಷಮೆಯಾಚಿಸಲು ಮುಂದಾಗಿಲ್ಲ. ವಿಧಾನಸೌಧದಲ್ಲಿ ಪ್ರತಿಕ್ರಿಯಿಸಿದ ಅವರು, ಸಿಎಂ ಯಡಿಯೂರಪ್ಪ ಕ್ಷಮೆ ಯಾಚಿಸುವ ಸನ್ನಿವೇಶ ನಿರ್ಮಾಣ ಆಗಿದ್ದರೆ, ನಾನು ಅದಕ್ಕೆ ವಿಷಾದ ವ್ಯಕ್ತಪಡಿಸುತ್ತೇನೆ ಎಂದು ಅವರು ತಿಳಿಸಿದರು.
ಹುಳಿಯಾರ್ ಕುರುಬ ಸಮುದಾಯದ ಶಾಖಾ ಮಠದ ಸ್ವಾಮೀಜಿ ವಿಚಾರದಲ್ಲಿ ಸಚಿವ ಮಾಧುಸ್ವಾಮಿ ಒರಟಾಗಿ ವರ್ತಿಸಿರುವ ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ಈ ಹಿನ್ನೆಲೆ ಸಿಎಂ ಇಂದು ಕುರುಬ ಸಮುದಾಯಕ್ಕೆ ಕ್ಷಮೆಯಾಚಿಸಿದ್ದರು. ಈ ಹಿನ್ನೆಲೆ ಪ್ರತಿಕ್ರಿಯಿಸಿದ ಮಾಧುಸ್ವಾಮಿ ಮುಖ್ಯಮಂತ್ರಿಗಳಿಗೆ ಕ್ಷಮೆ ಕೇಳುವಷ್ಟು ನೋವಾಗಿದ್ದರೆ ವಿಷಾದಿಸುತ್ತೇನೆ ಎಂದಷ್ಟೇ ತಿಳಿಸಿದರು. ಆದರೆ ಕೊನೆಗೂ ಮಾಧುಸ್ವಾಮಿ ಕ್ಷಮೆ ಕೇಳಲು ಮುಂದಾಗಿಲ್ಲ. ಸಿಎಂ ಕ್ಷಮೆಯಾಚಿಸಿರುವ ಸ್ಥಿತಿ ನಿರ್ಮಾಣವಾಗಿದ್ದಕ್ಕೆ ಕೇವಲ ವಿಷಾದ ವ್ಯಕ್ತಪಡಿಸಿದರಷ್ಟೇ ಹೊರತು ಕ್ಷಮೆಯಾಚಿಸಿಲ್ಲ.
ಇನ್ನು ಸಚಿವ ಮಾಧುಸ್ವಾಮಿ ಬಗ್ಗೆ ಸಮರ್ಥನೆ ಮಾಡಿಕೊಳ್ಳಲು ಹೋಗಿ ಮಾಧ್ಯಮಗಳನ್ನೇ ಸಚಿವ ಕೆ.ಎಸ್.ಈಶ್ವರಪ್ಪ ವ್ಯಭಿಚಾರಕ್ಕೆ ಹೋಲಿಸಿದರು. ವಿಧಾನಸೌಧದಲ್ಲಿ ಮಾತನಾಡುತ್ತಾ, ಮಾಧ್ಯಮಗಳೇ ಈ ವಿಚಾರವಾಗಿ ರಾಜಕಾರಣ ಮಾಡುತ್ತಿವೆ. ಮಾಧುಸ್ವಾಮಿ ತುಂಬಾ ಸ್ಪಷ್ಟವಾಗಿ ವಿಷಾದ ವ್ಯಕ್ತಪಡಿಸಿದ್ದಾರೆ. ನೀವು ಮಾಡಿದ ವ್ಯಭಿಚಾರಕ್ಕೆ ಇಷ್ಟೆಲ್ಲ ಆಗಿದೆ ಎಂದು ವಾಗ್ದಾಳಿ ನಡೆಸಿದರು.