ಬೆಂಗಳೂರು: ಭ್ರಷ್ಟಾಚಾರ ಪ್ರಕರಣದಲ್ಲಿ ಬಂಧನದಲ್ಲಿರುವ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ತಡರಾತ್ರಿ ಲೋಕಾಯುಕ್ತ ಕಚೇರಿಯಲ್ಲೇ ಕಾಲ ಕಳೆದರು. ರಾತ್ರಿ 12 ಗಂಟೆಯವರೆಗೂ ತನಿಖಾಧಿಕಾರಿಗಳ ತಂಡ ಸಾಕಷ್ಟು ಪ್ರಶ್ನೆಗಳನ್ನು ಕೇಳಿದೆ ಎಂದು ತಿಳಿದುಬಂದಿದೆ.
ಪ್ರಕರಣದ ಬಗ್ಗೆ ಹಲವು ಪ್ರಶ್ನೆಗಳನ್ನು ಶಾಸಕರಿಗೆ ಕೇಳಲಾಗಿದೆ. ಇದಾದ ಬಳಿಕ, ತಮ್ಮ ಆಪ್ತರ ಮೂಲಕ ಲೋಕಾಯುಕ್ತ ಕಚೇರಿಗೆ ಪ್ರತ್ಯೇಕ ಮಂಚ, ಹಾಸಿಗೆ, ದಿಂಬು, ಊಟ, ನೀರು ತರಿಸಿಕೊಂಡ ಮಾಡಾಳ್, ವಿಚಾರಣೆ ಮುಗಿಸಿ, ತನಿಖಾಧಿಕಾರಿಗಳು ಹೊರಟು ಹೋದ ಬಳಿಕ ನಿದ್ರೆಗೆ ಜಾರಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಲಂಚ ಪ್ರಕರಣದಲ್ಲಿ ಹೈಕೋರ್ಟ್‌ನಿಂದ ನಿರೀಕ್ಷಣಾ ಜಾಮೀನು ರದ್ದಾಗುತ್ತಿದ್ದಂತೆ ನಿನ್ನೆ ಬೆಂಗಳೂರಿಗೆ ಬರುತ್ತಿದ್ದ ಶಾಸಕರನ್ನು ತುಮಕೂರಿನ ಕ್ಯಾತ್ಸಂದ್ರ ಟೋಲ್ ಬಳಿಯೇ ವಶಕ್ಕೆ ಪಡೆದು ಬಂಧಿಸಿ ಬೆಂಗಳೂರಿಗೆ ಕರೆತರಲಾಗಿತ್ತು. ಇಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದೆದುರು ಹಾಜರುಪಡಿಸಲಿರುವ ಪೊಲೀಸರು ಹೆಚ್ಚಿನ ವಿಚಾರಣೆ ಅಗತ್ಯವಿರುವ ಹಿನ್ನೆಲೆಯಲ್ಲಿ ಮತ್ತೆ ವಶಕ್ಕೆ ನೀಡುವಂತೆ ಮನವಿ ಮಾಡುವ ಸಾಧ್ಯತೆ ಇದೆ. ಈ ಹಿಂದೆ ಮಾಡಾಳ್ ವಿರೂಪಾಕ್ಷಪ್ಪ ಮೂರು ಬಾರಿ ಲೋಕಾಯುಕ್ತ ವಿಚಾರಣೆಗೆ ಹಾಜರಾಗಿದ್ದರು.
ಇದನ್ನೂ ಓದಿ: ಕಾಣದ ಕೈಗಳ ಷಡ್ಯಂತ್ರದಿಂದ ರಾಜಕೀಯ ಜೀವನದಲ್ಲಿ ಕಪ್ಪು ಚುಕ್ಕೆ ಬಂದಿದೆ: ಶಾಸಕ ಮಾಡಾಳ್ ಭಾವುಕ
ಪ್ರಕರಣದ ಹಿನ್ನೆಲೆ: ಮಾಡಾಳ್ ವಿರೂಪಾಕ್ಷಪ್ಪ ಅವರ ಪುತ್ರ ಹಾಗೂ ಬೆಂಗಳೂರು ಜಲಮಂಡಳಿ ಪ್ರಧಾನ ಲೆಕ್ಕಾಧಿಕಾರಿಯಾಗಿದ್ದ ಪ್ರಶಾಂತ್ ಮಾಡಾಳ್ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಲು ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಬಂಧಿಸಿದ್ದರು. ಪ್ರಕರಣದಲ್ಲಿ ಮಾಡಾಳ್ ವಿರೂಪಾಕ್ಷಪ್ಪ ಅವರನ್ನು ಮೊದಲ ಆರೋಪಿಯನ್ನಾಗಿಸಿ ಎಫ್‌ಐಆರ್ ದಾಖಲಿಸಲಾಗಿತ್ತು. ಭ್ರಷ್ಟಾಚಾರ ನಿಗ್ರಹ ಕಾಯ್ದೆ–1988ರ ಕಲಂ 7 (ಎ) ಮತ್ತು (ಬಿ), 7 ಎ, 8, 9 ಮತ್ತು 10ರ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.
ಇದನ್ನೂ ಓದಿ: ಲಂಚ ಆರೋಪ; ಶಾಸಕ ಮಾಡಾಳ್ ವಿರೂಪಾಕ್ಷಪ್ಪ ನಿರೀಕ್ಷಣಾ ಜಾಮೀನು ವಜಾಗೊಳಿಸಿದ ಹೈಕೋರ್ಟ್
ಇದಾದ ಬಳಿಕ ಕೆಎಸ್‌ಡಿಎಲ್‌ನ ಗುತ್ತಿಗೆಗೆ ಲಂಚ ಪಡೆದಿರುವವರಿಗೂ ನನಗೂ ಯಾವುದೇ ಸಂಬಂಧ ಇಲ್ಲ. ಆದರೂ ನನ್ನ ಮೇಲೆ ಪ್ರಕರಣ ದಾಖಲಿಸಲಾಗಿದೆ. ಲೋಕಾಯುಕ್ತ ಪೊಲೀಸರು ಬಂಧಿಸುವ ಸಾಧ್ಯತೆಯಿದ್ದು, ನಿರೀಕ್ಷಣಾ ಜಾಮೀನು ಕೋರಿ ಮಾಡಾಳ್ ವಿರೂಪಾಕ್ಷಪ್ಪ ಹೈಕೋರ್ಟ್‌ಗೆ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಬಳಿಕ ವಿರೂಪಾಕ್ಷಪ್ಪರಿಗೆ ಜಾಮೀನು ಮಂಜೂರು ಮಾಡಲಾಗಿತ್ತು.
ಇದನ್ನೂ ಓದಿ: ಲೋಕಾಯುಕ್ತ ಪೊಲೀಸರಿಂದ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಬಂಧನ
ನಿನ್ನೆ(ಸೋಮವಾರ) ವಿರೂಪಾಕ್ಷಪ್ಪರಿಗೆ ಮಂಜೂರಾಗಿದ್ದ ನಿರೀಕ್ಷಣಾ ಜಾಮೀನನ್ನು ಹೈಕೋರ್ಟ್ ನ್ಯಾಯಮೂರ್ತಿ ಕೆ.ನಟರಾಜನ್ ಅವರಿದ್ದ ನ್ಯಾಯಪೀಠ ವಜಾಗೊಳಿಸಿ ಆದೇಶಿಸಿದೆ. ಪ್ರಕರಣದಲ್ಲಿ ಅರ್ಜಿದಾರರು ಎ1 ಆರೋಪಿಯಾಗಿದ್ದು, ಸಾಕ್ಷ್ಯಾಧಾರಗಳಿವೆ. ಆದ್ದರಿಂದ ವಿಚಾರಣೆಗೆ ಒಳಪಡಿಸಬೇಕಾದ ಅಗತ್ಯವಿದೆ. ಈ ಹಿಂದೆ ಮಂಜೂರಾಗಿದ್ದ ನಿರೀಕ್ಷಣಾ ಜಾಮೀನು ರದ್ದು ಮಾಡಲಾಗುತ್ತಿದೆ ಎಂದು ಆದೇಶದಲ್ಲಿ ಹೇಳಿದೆ. ಆದೇಶದ ಬೆನ್ನಲ್ಲೇ ವಿರೂಪಾಕ್ಷಪ್ಪರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ: ನಿರೀಕ್ಷಣಾ ಜಾಮೀನು ವಜಾಗೊಂಡ ಬೆನ್ನಲ್ಲೇ ಮಾಡಾಳ್ ವಿರೂಪಾಕ್ಷಪ್ಪ ನಿವಾಸಕ್ಕೆ ಬಂದ ಲೋಕಾಯುಕ್ತ ಅಧಿಕಾರಿಗಳು