ಬೆಂಗಳೂರು: ಕೊರೊನಾದಿಂದಾಗಿ ಜಾರಿಯಲ್ಲಿದ್ದ ಲಾಕ್ಡೌನ್ 3.O ಇಂದಿಗೆ ಮುಕ್ತಾಯವಾಗಲಿದ್ದು, ನಾಳೆಯಿಂದ ಸಾರ್ವಜನಿಕ ಸಂಚಾರ ಸೇವೆಗೆ ರಿಲೀಫ್ ಸಿಗಲಿದೆಯಾ ಎನ್ನುವ ಪ್ರಶ್ನೆ ಎಲ್ಲರಲ್ಲೂ ಕಾಡುತ್ತಿದೆ.
ರಾಜ್ಯದಲ್ಲಿ ಕೆಎಸ್ಆರ್ಟಿಸಿ ಬಸ್ಗಳ ಸಂಖ್ಯೆ 8500 ಇದ್ದು, ನಿತ್ಯ ಸುಮಾರು 30 ಲಕ್ಷ ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. ಬಸ್ನಲ್ಲಿ ಅರ್ಧದಷ್ಟು ಪ್ರಯಾಣಿಕರಿಗೆ ನಿರ್ಬಂಧ ವಿಧಿಸಿದ್ರೂ 15 ಲಕ್ಷ ಪ್ರಯಾಣಿಕರು ಓಡಾಟ ಇರಲಿದೆ. ಇನ್ನು ನಗರದಲ್ಲಿ ಸುಮಾರು 6500 ಬಸ್ಗಳಿದ್ದು, ನಿತ್ಯ ಪ್ರಯಾಣಿಕರ ಸಂಖ್ಯೆ 45 ಲಕ್ಷ ಇದೆ. ಇದರಲ್ಲಿ ಅರ್ಧದಷ್ಟು ಪ್ರಯಾಣಿಕರು ಅಂದ್ರೂ 23 ಲಕ್ಷ ಪ್ರಯಾಣಿಕರು ಪ್ರಯಾಣಿಸಲಿದ್ದಾರೆ.
ನಮ್ಮ ಮೆಟ್ರೋದಲ್ಲಿ ಷರತ್ತುಗಳ ಅನ್ವಯ ಓಡಾಟಕ್ಕೆ ಅವಕಾಶ ಸಿಕ್ಕಿದ್ದರೆ ಹಸಿರು ಹಾಗೂ ನೇರಳೆ ಮಾರ್ಗದಲ್ಲಿ ನಿತ್ಯ ಪ್ರಯಾಣಿಸುವವರ ಸಂಖ್ಯೆ ಸುಮಾರು 4.5 ಲಕ್ಷ ಇದೆ. ಆಟೋಗಳ ಸಂಖ್ಯೆ 80 ಸಾವಿರವಿದ್ದು, ನಿತ್ಯ ಆಟೋದಲ್ಲಿ ಸಂಚರಿಸುವವರ ಸಂಖ್ಯೆ ಸುಮಾರು ಒಂದು ಲಕ್ಷ ಇದೆ. ಟ್ಯಾಕ್ಸಿಗಳ ಸಂಖ್ಯೆ 2.5 ಲಕ್ಷ (ಓಲಾ, ಉಬರ್ ಮ್ಯಾಕ್ಸಿ, ಕ್ಯಾಬ್ ಸೇರಿಸಿ) ಶೇರಿಂಗ್ ಅವಕಾಶ ನಿರ್ಬಂಧ ಮಾಡಿದ್ರೂ ಸುಮಾರು ಒಂದು ಲಕ್ಷ ಪ್ರಯಾಣಿಕರು ಓಡಾಟ ನಡೆಸಬಹುದಾಗಿದೆ.
ಕೊರೊನಾ ನಡುವೆ ಯಾವೆಲ್ಲಾ ಸಾರಿಗೆ ಸೇವೆ ಇರಲಿದೆ, ಇದ್ದರೂ ಎಷ್ಟೆಷ್ಟು ಪ್ರಯಾಣಿಕರು ಸಂಚರಿಸಬಹುದು, ರೆಡ್ ಝೋನ್ಗಳಲ್ಲಿ ಸಂಚಾರಕ್ಕೆ ಬ್ರೇಕ್ ಹಾಕಲಾಗುತ್ತಾ ಎನ್ನುವ ಪ್ರಶ್ನೆಗಳು ಜನರನ್ನು ಕಾಡುತ್ತಿವೆ. ಇವೆಲ್ಲ ಪ್ರಶ್ನೆಗಳಿಗೆ ಕೇಂದ್ರ ಸರ್ಕಾರದ ಹೊಸ ಮಾರ್ಗಸೂಚಿಗಳಿಂದ ಉತ್ತರ ಸಿಗಲಿದ್ದು, ಎಲ್ಲರ ಚಿತ್ತ ಕೇಂದ್ರದತ್ತ ನೆಟ್ಟಿದೆ.