ಹಾವೇರಿ : ಅಧಿಕಾರ ಹಂಚಿಕೆ ವಿಚಾರ ಜನರ ಸಮಸ್ಯೆಯಲ್ಲ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ತಿಳಿಸಿದ್ದಾರೆ. ಹಾವೇರಿ ಜಿಲ್ಲೆ ಹಿರೇಕೆರೂರರಲ್ಲಿ ಮಾತನಾಡಿದ ಅವರು, ಈ ರೀತಿಯ ಹೇಳಿಕೆಗಳಿಗೆ ಸಂಪೂರ್ಣ ತೆರೆ ಎಳೆಯಬೇಕಾಗಿದೆ. ಈ ಕುರಿತಂತೆ ಸಿಎಂ ಮಾತನಾಡುತ್ತಾರೆ. ನಾನಂತೂ ಇದರ ಬಗ್ಗೆ ಮಾತನಾಡುವುದಿಲ್ಲ ಎಂದರು.
ಜನರ ಮೇಲೆ ಪರಿಣಾಮ ಬೀರುವ ವಿಷಯಗಳ ಬಗ್ಗೆ ಮಾತನಾಡೋಣಾ. ಅಧಿಕಾರ ಹಂಚಿಕೆ, ಬಣ ರಾಜಕೀಯ ಪಕ್ಷ ನೋಡಿಕೊಳ್ಳುತ್ತೆ. ಹೈಕಮಾಂಡ್ ತಾಕೀತು ಮಾಡಿದ ನಂತರ, ಕೆಲವರು ಬಣ ರಾಜಕಾರಣ ಮಾತನಾಡುತ್ತಿರುವ ಕುರಿತಂತೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಾನಂತೂ ಈ ರೀತಿಯ ಪ್ರಶ್ನೆಗಳಿಗೆ ಉತ್ತರಿಸಬಾರದು ಎಂಬ ತೀರ್ಮಾನ ಕೈಗೊಂಡಿದ್ದೇನೆ ಎಂದು ತಿಳಿಸಿದ್ದಾರೆ.
ಕಾರ್ಮಿಕ ಇಲಾಖೆ 45 ಲಕ್ಷ ಕಾರ್ಡ್‌ಗಳನ್ನ ವಿತರಿಸಿದೆ. ಡಿ ಕೆ ಶಿವಕುಮಾರ್ ವಿರುದ್ಧ ಗುತ್ತಿಗೆದಾರ ಸಂಘದ ಅಧ್ಯಕ್ಷ ಕೆಂಪಣ್ಣ ಮಾಡಿರುವ ಆರೋಪದ ಬಗ್ಗೆ ನನಗೆ ಮಾಹಿತಿ ಇಲ್ಲ. ಈ ಬಗ್ಗೆ ಅವರನ್ನೇ ಕೇಳಿಕೊಳ್ಳಿ ಎಂದು ಲಾಡ್ ಜಾರಿಕೊಂಡರು. ಇನ್ನು ಮೂರ್ನಾಲ್ಕು ತಿಂಗಳಲ್ಲಿ ನಕಲಿ ಕಾರ್ಮಿಕ ಕಾರ್ಡ್‌ಗಳನ್ನು ತಡೆಹಿಡಿಯುತ್ತೇವೆ ಎಂದು ಅವರು ಹೇಳಿದರು.
ಕಾರ್ಮಿಕ ಇಲಾಖೆಯ ಯೋಜನೆಗಳ ಬಗ್ಗೆ ಕಾರ್ಮಿಕರಿಗೆ ಜಾಗೃತಿ ಇದೆ. ಸುಮಾರು 45 ಲಕ್ಷ ಕಾರ್ಮಿಕ ಕಾರ್ಡ್ ಇವೆ ಎಂದರೆ ಕಾರ್ಮಿಕ ಒಕ್ಕೂಟಗಳ ಅಳಲೇನು ಅಂದರೆ ಪ್ರತಿಶತ 60 ರಿಂದ 70 ರಷ್ಟು ನಕಲಿ ಕಾರ್ಮಿಕ ಕಾರ್ಡ್ಗಳಿವೆ ಎಂದು ಸಂತೋಷ್ ಲಾಡ್ ತಿಳಿಸಿದರು. ನಮ್ಮ ಇಲಾಖೆಯಲ್ಲಿ ಸಾಕಷ್ಟು ಹಣ ಇದೆ ಎಂದು ಬಹಳಷ್ಟು ಕಾರ್ಡ್ಗಳು ಮಾಡಿಕೊಂಡಿದ್ದಾರೆ. ಹೀಗಾಗಿ ಅಧ್ಯಯನ ಆರಂಭ ಮಾಡಿದ್ದು, ಈ ವರ್ಷ 13 ಲಕ್ಷ ಅರ್ಜಿಗಳು ಬಂದಿದ್ದವು. ಅದರಲ್ಲಿ ಆರು ಲಕ್ಷ ಹೊರತುಪಡಿಸಿ ಸುಮಾರು 7 ಲಕ್ಷ ಕಾರ್ಡ್‌ಗಳಿಗೆ ಸ್ಕಾಲರ್‌ಶಿಪ್ ನೀಡಲಾಗುವುದು. ಇದನ್ನ ಸಿಎಂ ಸಿದ್ದರಾಮಯ್ಯ ಉದ್ಘಾಟನೆ ಮಾಡಲಿದ್ದಾರೆ ಎಂದು ಅವರು ತಿಳಿಸಿದರು.
ಕೆಲವೊಂದಿಷ್ಟು ಜಿಲ್ಲೆಗಳಲ್ಲಿ ಕಾರ್ಮಿಕ ಯೋಜನೆಯ ಕಿಟ್ ಹಂಚುವಿಕೆ ಕೊರತೆಯಾಗಿದೆ. ಆದಷ್ಟು ಬೇಗ ವಿತರಿಸುವುದಾಗಿ ಸಂತೋಷ್ ಲಾಡ್ ತಿಳಿಸಿದರು. ಲ್ಯಾಪ್ಟಾಪ್ಗೆ ಸಾಕಷ್ಟು ಅರ್ಜಿಗಳು ಬಂದಿವೆ. ಬಂದ ಅರ್ಜಿಗಳಿಗೆಲ್ಲ ಟ್ಯಾಬ್ ಮತ್ತು ಲ್ಯಾಪ್ಟಾಪ್ ವಿತರಿಸಲು ಆಗುವುದಿಲ್ಲ. ಈ ಕುರಿತಂತೆ ಬೋರ್ಡ್ ರಚಿಸಿ ಆದಷ್ಟು ಬೇಗ ತೀರ್ಮಾನ ಕೈಗೊಳ್ಳುವುದಾಗಿ ಲಾಡ್ ತಿಳಿಸಿದರು. ನಕಲಿ ಕಾರ್ಡ್‌ಗಳನ್ನು ರಾತ್ರೋರಾತ್ರಿ ಬದಲಾಯಿಸಲು ಬರುವುದಿಲ್ಲ. ಇದಕ್ಕಾಗಿ ಹೊಸ ಆ್ಯಪ್ ಮಾಡುತ್ತಿದ್ದೇವೆ ಎಂದು ಹೇಳಿದರು.
ಜೊತೆಗೆ ಕೆಲಸ ಮಾಡಿರುವ ಬಗ್ಗೆ ಕ್ರಾಸ್ ಚೆಕ್ ಮಾಡಲಾಗುತ್ತದೆ. ಹೊಸ ಕಾರ್ಡ್ ಅರ್ಜಿ ಮತ್ತು ನವೀಕರಣಗಳನ್ನು ಜಾಗರೂಕತೆಯಿಂದ ಮಾಡುತ್ತಿದ್ದೇವೆ. ರಾಜ್ಯದಲ್ಲಿ 1.80 ಕೋಟಿ ಅಸಂಘಟಿತ ಕಾರ್ಮಿಕರಿದ್ದಾರೆ. ಟ್ರಾನ್ಸ್ಪೋರ್ಟ್ ಬೋರ್ಡ್ನಿಂದ ಪ್ರತಿಶತ 27 ಸೆಸ್ ಪಡೆಯಲು ನಿರ್ಧರಿಸಿದ್ದೇವೆ. ಇದಕ್ಕೆ ಸಿಎಂ ಸಿದ್ದರಾಮಯ್ಯ ಮತ್ತು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸಹ ಒಪ್ಪಿದ್ದಾರೆ ಎಂದು ತಿಳಿಸಿದರು.
ರಾಜ್ಯದಲ್ಲಿ ಗಿಗ್ ಸರ್ವಿಸ್ ಮಾಡುವ ಐದು ಲಕ್ಷ ಕಾರ್ಮಿಕರಿದ್ದಾರೆ. ಅವರಿಗೆ ಸಹ ಸಾಮಾಜಿಕ ಭದ್ರತೆ ನೀಡುವ ಕೆಲಸವನ್ನು ಮಾಡಲಾಗುವುದು. ಸಿನಿಕಾರ್ಮಿಕರ ಬಿಲ್ ಸಹ ಮೂವ್ ಮಾಡಲಾಗಿದೆ. ಡೊಮೆಸ್ಟಿಕ್ ವರ್ಕರ್ ಬಿಲ್ ಸಹ ಜಾರಿಗೆ ತರುವುದಾಗಿ ಸಚಿವ ಲಾಡ್ ಮಾಹಿತಿ ನೀಡಿದರು.
ನೇಕಾರರಿಗೆ, ಹಮಾಲರಿಗೆ ಹೋಟೆಲ್ ಕಾರ್ಮಿಕರಿಗೆ ಬಿಲ್ ತರುವ ಯೋಚನೆ ಇದೆ. ಒಂದು ಕೋಟಿ 80 ಲಕ್ಷ ಅಸಂಘಟಿತ ಕಾರ್ಮಿಕರಲ್ಲಿ ಕನಿಷ್ಠ 60 ಪ್ರತಿಶತ ಕಾರ್ಮಿಕರಿಗೆ ಭದ್ರತೆ ಒದಗಿಸುವ ಕಾರ್ಯ ಮಾಡುವುದಾಗಿ ಭರವಸೆ ನೀಡಿದರು.
ಇದನ್ನೂ ಓದಿ : ರಾಜ್ಯೋತ್ಸವ ಕಾರ್ಯಕ್ರಮ: ಜಾನಪದ ಹಾಡು ಕೇಳಿ ಭಾವುಕರಾದ ಸಚಿವ ಸಂತೋಷ್ ಲಾಡ್