ಬೆಂಗಳೂರು: ನೆರೆ ಹಾವಳಿ ವಿಚಾರದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸಂತ್ರಸ್ತರಿಗೆ ಮಾತು ಕೊಟ್ಟಿದ್ದಾರೆ. ಆ ಮಾತಿನಂತೆ ಮೊದಲು ಅವರು ನಡೆದುಕೊಳ್ಳಲಿ ಎಂದು ಮಾಜಿ ಸಚಿವ ಡಿ ಕೆ ಶಿವಕುಮಾರ್ ಆಗ್ರಹಿಸಿದ್ದಾರೆ.
ಸದಾಶಿವನಗರದ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, 5 ಸಾವಿರ ಬಾಡಿಗೆ ಕೊಡ್ತೀವಿ. ಮನೆ ರಿಪೇರಿಗೆ 1 ಲಕ್ಷ ಕೊಡ್ತಿವಿ, ಮನೆ ಸಂಪೂರ್ಣ ಬಿದ್ದವರಿಗೆ 5 ಲಕ್ಷ ಕೊಡ್ತೀವಿ, ಅಷ್ಟು ಕೊಡ್ತೀವಿ, ಇಷ್ಟು ಕೊಡ್ತೀವಿ ಅಂತಾ ಘೋಷಿಸಿದ್ದಾರೆ. ಮೊದಲು ಅವರು ಹೇಳಿದಂತೆ ನಡೆದುಕೊಳ್ಳಲಿ. ನಿಮ್ಮ ಅಧಿಕಾರಿಗಳನ್ನು ಬಳಸಿಕೊಂಡು ಚೆಕ್ ವಿತರಿಸಿ. ನೆರೆ ಸಂತ್ರಸ್ತರ ವಿಚಾರದಲ್ಲಿ ನಾವು ರಾಜಕಾರಣ ಮಾಡಲ್ಲ. ಮೊದಲು ಸಂತ್ರಸ್ತರಿಗೆ ಚೆಕ್ ಗಳನ್ನು ವಿತರಿಸಲಿ ಎಂದರು.
ಇದೇ ವೇಳೆ ಮಾಜಿ ಸಿಎಂ ಕುಮಾರಸ್ವಾಮಿ ಅವರ ಅವಧಿಯಲ್ಲಾದ ಫೋನ್ ಟ್ಯಾಪಿಂಗ್ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಡಿಕೆಶಿ, ಆ ಬಗ್ಗೆ ನನಗೆ ಗೊತ್ತಿಲ್ಲ. ತಿಳ್ಕೊಂಡು ಹೇಳ್ತಿನಿ ಎಂದರು.
ಇನ್ನು ಸಚಿವ ಸಂಪುಟ ರಚನೆಯಾಗಿಲ್ಲ ಅನ್ನೋ ವಿಚಾರವಾಗಿ ಮಾತನಾಡಿ, ಸ್ವಾತಂತ್ರ್ಯ ಬಂದ ನಂತರ ಇದೇ ಮೊದಲ ಬಾರಿಗೆ ಸಚಿವರಿಲ್ಲದೆ ಬಾವುಟ ಹಾರಿಸುವ ಸ್ಥಿತಿ ನಿರ್ಮಾಣವಾಗಿದೆ. ತಹಶಿಲ್ದಾರ್, ಡಿಸಿಗಳು ಬಾವುಟ ಹಾರಿಸುವಂತಾಗಿದೆ. ಇದೆಲ್ಲ ರಾಜ್ಯಪಾಲರ ಆಡಳಿತದಂತೆ ನಡೀತಿದೆ ಎಂದು ಲೇವಡಿ ಮಾಡಿದರು.