ಬೆಂಗಳೂರು: ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಮಿತಿಯ 3ನೇ ವರದಿಯನ್ನು ಇಂದು ವಿಧಾನಸಭೆಯಲ್ಲಿ ಶಾಸಕ ಕುಮಾರ್ ಬಂಗಾರಪ್ಪ ಮಂಡನೆ ಮಾಡಿದರು.
ವಿಧಾನಸಭೆಯ ವಿವಿಧ ಸಮಿತಿಗಳು ನೀಡುವ ಯೋಜನೆಗಳ ಮೇಲೆ ಚರ್ಚೆಗೆ ಅವಕಾಶ ನೀಡಬೇಕೆಂದು ಇದೇ ಸಂದರ್ಭದಲ್ಲಿ ಶಾಸಕರಾದ ಅರಗ ಜ್ಞಾನೆಂದ್ರ ಮತ್ತು ಕುಮಾರ್ ಬಂಗಾರಪ್ಪ ಒತ್ತಾಯಿಸಿದರು. ಇದಕ್ಕೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಸಕಾರಾತ್ಮಕವಾಗಿ ಸ್ಪಂದಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕುಮಾರ್ ಬಂಗಾರಪ್ಪ, ವರದಿಗಳನ್ನು ಮಂಡಿಸಿದರೆ ಸಾಲದು, ಅದರ ಮೇಲೆ ಚರ್ಚೆಯಾಗಬೇಕು. ನಾವು ಮಾಡಿದ ಶಿಫಾರಸುಗಳು ಅನುಷ್ಠಾನಕ್ಕೆ ತರಬೇಕು. ಹಾಗಾಗಿ ಚರ್ಚೆಗೆ ಅವಕಾಶ ಕೊಡಿ ಎಂದು ಮನವಿ ಮಾಡಿದರು.
ಶಾಸಕ ಅರಗ ಜ್ಞಾನೇಂದ್ರ ಮಾತನಾಡಿ, ವಿಧಾನಮಂಡಲದ ಬಹುತೇಕ ವರದಿಗಳು ಮೂಲೆ ಸೇರುತ್ತಿವೆ. ಕಷ್ಟಪಟ್ಟು ವರದಿ ತಯಾರಿಸುತ್ತೇವೆ. ಅವು ಜಾರಿಯಾಗಬೇಕು. ಒಂದು ಗಂಟೆ ಚರ್ಚೆಗೆ ಅವಕಾಶ ಕೊಡಿ ಎಂದರು. ಇದು ಉತ್ತಮ ಸಲಹೆ ಎಂದು ಅಭಿಪ್ರಾಯಪಟ್ಟ ಸ್ಪೀಕರ್ ಕಾಗೇರಿ, ಮುಂದಿನ ದಿನಗಳಲ್ಲಿ ಪರಿಶೀಲನೆ ಮಾಡುವುದಾಗಿ ಹೇಳಿದರು.