ಬೆಂಗಳೂರು: ನಗರದ ರಸ್ತೆಗಳಲ್ಲಿ ಐದು ಸಾವಿರಕ್ಕೂ ಹೆಚ್ಚು ರಸ್ತೆಗುಂಡಿಗಳಿವೆ ಎಂದು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ (ಕೆಎಸ್‌ಎಲ್‌ಎಸ್‌ಎ) ಹೈಕೋರ್ಟ್‌ಗೆ ಸಮೀಕ್ಷಾ ವರದಿ ಸಲ್ಲಿಸಿದೆ.
ಬೆಂಗಳೂರಿನ ರಸ್ತೆಗಳ ನಿರ್ವಹಣೆಗೆ ಸಂಬಂಧಿಸಿದಂತೆ ಸಲ್ಲಿಸಿರುವ ವಿವಿಧ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ. ಎಸ್. ಓಕ ನೇತೃತ್ವದ ವಿಭಾಗೀಯ ಪೀಠ ಈ ಮಾಹಿತಿ ನೀಡಿದೆ.
ಬಿಬಿಎಂಪಿಯ ವಿಭಾಗವಾರು ಮತ್ತು ವಲಯವಾರು ವಿವರಗಳನ್ನು ಒಳಗೊಂಡ ಸಮಗ್ರ ವರದಿಯಲ್ಲಿ ನಗರದ ರಸ್ತೆಗಳಲ್ಲಿ ಐದು ಸಾವಿರಕ್ಕೂ ಅಧಿಕ ಗುಂಡಿಗಳಿವೆ ಎಂಬ ಮಾಹಿತಿ ಇದ್ದು, ಎಲ್ಲೆಲ್ಲಿ ಗುಂಡಿಗಳಿವೆ ಮತ್ತು ಅವುಗಳ ದುರಸ್ತಿಗೆ ಯಾವ ಕ್ರಮ ಕೈಗೊಳ್ಳಬೇಕು ಎಂಬ ಬಗ್ಗೆ ವಿವರಿಸಲಾಗಿದೆ.
ವರದಿ ಪರಿಶೀಲಿಸಿದ ಪೀಠ ಕಾನೂನು ಸೇವೆಗಳ ಪ್ರಾಧಿಕಾರದ ಈ ವರದಿಯನ್ನು ಪರಿಗಣಿಸಿದರೆ ಬಿಬಿಎಂಪಿಯ ಅರ್ಧ ಜವಾಬ್ದಾರಿ ಕಡಿಮೆಯಾಗುತ್ತದೆ ಎಂದಿದ್ದು, ವರದಿಯನ್ನು ಪ್ರಾಧಿಕಾರದ ಹಾಗೂ ಪಾಲಿಕೆಯ ವೆಬ್‌ಸೈಟ್‌ಗಳಲ್ಲಿ ಪ್ರಕಟಿಸುವಂತೆ ಪಾಲಿಕೆಗೆ ನಿರ್ದೇಶಿಸಿದೆ.
ಇದನ್ನೂ ಓದಿ: ದೇವರ ದರ್ಶನ ಬಳಿಕ 'ಸಿಡಿ' ಸ್ಫೋಟ: ಅಜ್ಞಾತ ಸ್ಥಳದತ್ತ ಚಿತ್ತ ಹರಿಸಿದ ರಮೇಶ್ ಜಾರಕಿಹೊಳಿ!
ಅಲ್ಲದೇ, ರಸ್ತೆಗುಂಡಿಗಳನ್ನು ಮುಚ್ಚಲು ಕಾಲಮಿತಿ ನಿಗದಿಪಡಿಸಿಕೊಂಡು ಕ್ರಿಯಾ ಯೋಜನೆ ರೂಪಿಸುವಂತೆ ಬಿಬಿಎಂಪಿಗೆ ನೀಡಿದ್ದ ನಿರ್ದೇಶನ ಪಾಲಿಸದ ಪಾಲಿಕೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿರುವ ಪೀಠ, ಕ್ರಿಯಾ ಯೋಜನೆ ರೂಪಿಸುವಾಗ ಕಾನೂನು ಸೇವೆಗಳ ಪ್ರಾಧಿಕಾರದ ವರದಿ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವ್ಯವಸ್ಥಾಪಕ ನಿರ್ದೇಶಕರು ನೀಡಿರುವ ಸಲಹೆಗಳನ್ನು ಪರಿಗಣಿಸಬೇಕು. ಈ ಬಗ್ಗೆ ವಿವರಣೆ ನೀಡಲು ಪಾಲಿಕೆಯ ಇಬ್ಬರು ಮುಖ್ಯ ಇಂಜಿನಿಯರ್‌ಗಳು (ರಸ್ತೆ ಮೂಲಸೌಕರ್ಯ) ಮುಂದಿನ ವಿಚಾರಣೆ ವೇಳೆ ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾಗಬೇಕು. ಕೆಎಸ್‌ಎಲ್‌ಎಸ್‌ಎ ಸದಸ್ಯ ಕಾರ್ಯದರ್ಶಿಗಳೂ ಹಾಜರಾಗಬೇಕು. ಅವರು ನೀಡುವ ವಿವರಣೆ ಆಧರಿಸಿ ಯಾವ ನಿರ್ದೇಶನ ನೀಡಬೇಕೆಂಬ ಬಗ್ಗೆ ಕೋರ್ಟ್ ತೀರ್ಮಾನಿಸಲಿದೆ ಎಂದು ಹೈಕೋರ್ಟ್ ತಿಳಿಸಿದೆ.