ಬೆಂಗಳೂರು : ವಿಶ್ವ ಆರೋಗ್ಯ ದಿನದ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ವಿಶೇಷ ವೈದ್ಯಕೀಯ ಸೇವಾ ಕೇಂದ್ರವನ್ನು ಆರಂಭಿಸುತ್ತಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ತಿಳಿಸಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ಲಾಕ್ಡೌನ್ ಆಗಿ 11 ದಿನಗಳೇ ಕಳೆದಿವೆ. ನಾವೆಲ್ಲರೂ ಮನೆಯಲ್ಲೇ ಇರಬೇಕಾದ ಪರಿಸ್ಥಿತಿ ಇದೆ. ಅನೇಕರು ಇನ್ನಿತರ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಅವರು ಆಸ್ಪತ್ರೆಗೆ ಹೋಗೋಕು ಕಷ್ಟವಾಗಿದೆ. ಇಂತವರಿಗೆ ನಮ್ಮ ವೈದ್ಯಕೀಯ ಘಟಕ ನೆರವಾಗಲಿದೆ.
75 ಮಂದಿ ವೈದ್ಯರು ಸ್ವಯಂ ಪ್ರೇರಣೆಯಿಂದ ಮುಂದೆ ಬಂದಿದ್ದಾರೆ. ನಮ್ಮದೇ ಸಹಾಯವಾಣಿ ರಚಿಸಿದ್ದೇವೆ. ಇದು ಕೆಪಿಸಿಸಿ ವೈದ್ಯಕೀಯ ಸಹಾಯವಾಣಿ ನಂಬರ್ 080-47188000. ಈ ಸಹಾಯವಾಣಿಯನ್ನ ವೈದ್ಯರೇ ನಿರ್ವಹಿಸುತ್ತಾರೆ. ಏಕಕಾಲಕ್ಕೆ 20 ಕರೆಗಳನ್ನು ಸ್ವೀಕರಿಸಬಹುದಾಗಿದೆ. ಕೋವಿಡ್-19 ಸೇರಿ ಇತರ ಕಾಯಿಲೆಗೂ ಈ ತಂಡ ಚಿಕಿತ್ಸೆ ನೀಡಲಿದೆ. ಇನ್ನೂ ಹೆಚ್ಚಿನ ವೈದ್ಯರು ಈ ತಂಡಕ್ಕೆ ಸೇರ್ತಿದ್ದಾರೆ. ಸಹಾಯವಾಣಿ ನಂಬರ್‌ಗೆ ಕರೆ ಮಾಡಿದರೆ ಅಗತ್ಯ ಸಹಾಯ ಸಿಗಲಿದೆ ಎಂದರು.
ಟೆಲಿಕನ್ಸ್‌ಲ್ಟೇಶನ್ ಮುಖಾಂತರ ಸೂಕ್ತ ಔಷಧಿ ತಿಳಿಸ್ತಾರೆ. ಕೋವಿಡ್-19 ಇದ್ದರೆ ಮಾತ್ರ ನೇರವಾಗಿ ಚಿಕಿತ್ಸೆ ನೀಡ್ತಾರೆ. ಇನ್ನಿತರ ಕಾಯಿಲೆ ಇದ್ದವರು ಕರೆ ಮಾಡಿ ಮನೆಯಿಂದಲೇ ಔಷಧಿ ಪಡೆಯಲು ಸಲಹೆ ಪಡೆಯಬಹುದು ಎಂದರು.