ಬೆಂಗಳೂರು: ಯುವತಿ ಮೂಲಕ ಕರೆ ಮಾಡಿಸಿ ಪೀಠೋಪಕರಣ ವ್ಯಾಪಾರಿಯೊಬ್ಬರನ್ನ ಅಪಹರಿಸಿ ಒಂದು ಕೋಟಿ ರೂ. ನಗದು, 15 ಕೆ.ಜಿ ಚಿನ್ನಕ್ಕೆ ಬೇಡಿಕೆ ಇಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಘಟನೆ ನಡೆದ 12 ಗಂಟೆಯೊಳಗೆ ಆರೋಪಿಗಳನ್ನು ಬಂಧಿಸುವಲ್ಲಿ ಪಶ್ಚಿಮ ವಿಭಾಗದ ಪೊಲೀಸರು ಯಶಸ್ವಿಯಾಗಿದ್ದಾರೆ.
ಕೆ.ಆರ್.ಪುರ ನಿವಾಸಿ ಆನಂದ್ ಅಲಿಯಾಸ್ ಆನಂದ್ ಕುಮಾರ್ ಮತ್ತು ಅಜರ್ ಪಾಷಾ ಬಂಧಿತರು. ಕಿಡ್ನಾಪ್ ಕೇಸ್ ಮಾಸ್ಟರ್ ಮೈಂಡ್ ಅರ್ಜಿತ್ ಗನ್ ಮತ್ತು ಸುಪಾರಿ ಪಡೆದುಕೊಂಡಿದ್ದ ತನ್ವೀರ್ ಪಾಷಾ ಸೇರಿದಂತೆ ಇತರ 6 ಮಂದಿ ತಪ್ಪಿಸಿಕೊಂಡಿದ್ದು, ಶೋಧ ಕಾರ್ಯ ನಡೆಯುತ್ತಿದೆ.
ಆರೋಪಿಗಳು ಪೀಠೋಪಕರಣ ವ್ಯವಹಾರ ನಡೆಸುವ ಮಹೇಂದ್ರ ಕುಮಾರ್ ಎಂಬುವರ ಪುತ್ರ ವಿಕಾಸ್ ಬೋರಾ ಎಂಬುವರನ್ನ ಅ.23 ರಂದು ಅಪಹರಣ ಮಾಡಿ, 1 ಕೋಟಿ ರೂ. ನಗದು ಮತ್ತು 15 ಕೆ.ಜಿ ಚಿನ್ನಕ್ಕೆ ಬೇಡಿಕೆ ಇಟ್ಟಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ಮಹೇಂದ್ರ ಕುಮಾರ್ ಅಕ್ಕಿಪೇಟೆಯಲ್ಲಿ ಪೀಠೋಪಕರಣಗಳ ವ್ಯವಹಾರ ನಡೆಸುತ್ತಿದ್ದು, ಸರ್ಕಾರಿ ಕಚೇರಿಗಳು ಹಾಗೂ ಖಾಸಗಿ ಕಚೇರಿಗಳಿಗೆ ಪೀಠೋಪಕರಣಗಳನ್ನು ಪೂರೈಕೆ ಮಾಡುತ್ತಾರೆ. ವಿಕಾಸ್ ಬೋರಾಗೆ ಕಳೆದ 2-3 ದಿನಗಳಿಂದ ಕಾವ್ಯಾ ಎಂಬ ಹೆಸರಿನಲ್ಲಿ ಕರೆ ಮಾಡುತ್ತಿದ್ದ ಯುವತಿ, ನಮಗೆ ಪೀಠೋಪಕರಣಗಳ ಅಗತ್ಯವಿದೆ, ತನ್ನನ್ನು ಭೇಟಿಯಾಗುವಂತೆ ಪೀಡಿಸುತ್ತಿದ್ದರು.
ಹೀಗಾಗಿ, ಅ.23ರಂದು ಸಂಜೆ ನಾಲ್ಕು ಗಂಟೆಗೆ ಕಾವ್ಯಾಳಿಂದ ಕರೆ ಬಂದ ಕೂಡಲೇ ವಿಕಾಸ್ ಬೋರಾ, ಉತ್ತರ - ಕೆಂಗೇರಿ ರಸ್ತೆಯಲ್ಲಿರುವ ಕಚೇರಿ ಬಳಿ ಹೋಗುತ್ತಿದ್ದಂತೆ, ತನ್ವೀರ್ ಪಾಷಾ, ಅಜರ್ ಪಾಷಾ ಮತ್ತು ತಂಡ ಕಾರಿನಲ್ಲಿ ಅಪಹರಿಸಿ ಮಳವಳ್ಳಿಯ ತೋಟದ ಮನೆಯೊಂದರಲ್ಲಿ ಇರಿಸಿದ್ದರು.
ಇದನ್ನೂ ಓದಿ: ಉದ್ಯಮಿ ಅಪಹರಿಸಿ 4 ಕೋಟಿ ಹಣಕ್ಕೆ ಬೇಡಿಕೆ: ಮಹಿಳೆ ಸೇರಿ ಮೂವರ ಬಂಧನ
ರಾತ್ರಿ 8 ಗಂಟೆಗೆ ಮಹೇಂದ್ರ ಕುಮಾರ್‌ಗೆ ಕರೆ ಮಾಡಿ, ಪುತ್ರನ ಅಪಹರಣದ ಬಗ್ಗೆ ಮಾಹಿತಿ ನೀಡಿ, ಹಣ ಮತ್ತು ಚಿನ್ನಕ್ಕೆ ಬೇಡಿಕೆ ಇಟ್ಟಿದ್ದರು. ಕೂಡಲೇ ಮಹೇಂದ್ರ ಕುಮಾರ್ ಪೊಲೀಸರಿಗೆ ದೂರು ನೀಡಿದ್ದಾರೆ. ತಕ್ಷಣ ಕಾರ್ಯಪ್ರವೃತ್ತರಾದ ಪಶ್ಚಿಮ ವಿಭಾಗ ಡಿಸಿಪಿ ಲಕ್ಷ್ಮಣ ನಿಂಬರಗಿ, ವಿಜಯ ಎಸಿಪಿ ಪಿ.ರವಿ ನೇತೃತ್ವದಲ್ಲಿ ವಿಜಯನಗರ ಪಿಐ ಸಂತೋಷ್ ಕುಮಾರ್, ಕಾಮಾಕ್ಷಿಪಾಳ್ಯ ಪಿಐ ಲೋಹಿತ್, ಮಾಗಡಿ ರಸ್ತೆ ಪಿಐ ರಾಜು ಮತ್ತು ಸಿಬ್ಬಂದಿ ತಂಡ ರಚಿಸಿ, ಕ್ಷಿಪ್ರ ಕಾರ್ಯಾಚರಣೆ ನಡೆಸಿ ಅ.24ರ ಮುಂಜಾನೆ 7ಗಂಟೆಗೆ ಆರೋಪಿಗಳ ಸ್ಥಳ ಪತ್ತೆ ಹಚ್ಚಿದ್ದಾರೆ.
ಬಳಿಕ, ಮಹೇಂದ್ರ ಕುಮಾರ್ ಅವರ ಸಂಬಂಧಿಯೊಬ್ಬರಿಂದ ಆರೋಪಿಗಳನ್ನ ಮಾತನಾಡಿಸಿ, 40 ಲಕ್ಷ ರೂ.ಗೆ ಡೀಲ್ ಮುಗಿಸಿದ್ದರು. ಬಳಿಕ ಹಣದ ಜತೆ ಮಹೇಂದ್ರ ಕುಮಾರ್ ಸಂಬಂಧಿ ಒಂದು ಕಾರಿನಲ್ಲಿ ತೆರಳಿದರೆ, ಮತ್ತೊಂದು ಕಾರಿನಲ್ಲಿ ಪೊಲೀಸರು ತೆರಳಿದ್ದರು. ಮಳವಳ್ಳಿ - ಕೊಳ್ಳೆಗಾಲ ಮಾರ್ಗದಲ್ಲಿ ಬೈಕ್‌ನಲ್ಲಿ ಬಂದು ಹಣ ಪಡೆಯುವಾಗ ಆನಂದ್ ಮತ್ತು ಅಜರ್ ಪಾಷಾನನ್ನು ಬಂಧಿಸಲಾಗಿದೆ. ಆರೋಪಿಗಳಿಂದ ಕಾರು, ಮೊಬೈಲ್ ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ಡಿಸಿಪಿ ಲಕ್ಷ್ಮಣ ನಿಂಬರಗಿ ಹೇಳಿದ್ದಾರೆ.
ಇದನ್ನೂ ಓದಿ: ಸೈಟ್ ಖರೀದಿ ನೆಪದಲ್ಲಿ ರಿಯಲ್ ಎಸ್ಟೇಟ್ ಉದ್ಯಮಿ ಕಿಡ್ನಾಪ್.. 20 ಲಕ್ಷ ರೂ. ಪೀಕಿದ್ದ ಖದೀಮರು ಅರೆಸ್ಟ್
ಪ್ರಕರಣದ ಮಾಸ್ಟರ್ ಮೈಂಡ್ ಅರ್ಜಿತ್ ಗನ್ ಫಾರ್ಮಾ ಕಂಪನಿ ನಡೆಸುತ್ತಿದ್ದು, ವಿಕಾಸ್ ಬೋರಾನಿಂದ ಪೀಠೋಪಕರಣ ಪಡೆದುಕೊಂಡಿದ್ದ. ಹೀಗಾಗಿ, ಎರಡು ವರ್ಷಗಳಿಂದ ವಿಕಾಸ್ ಬೋರಾನ ಐಷಾರಾಮಿ ಜೀವನದ ಬಗ್ಗೆ ಮಾಹಿತಿ ಪಡೆದುಕೊಂಡು, ತಮ್ಮ ಸಂಸ್ಥೆಯಲ್ಲಿ ಕೆಲಸ ಮಾಡುವ ಆನಂದ್‌ಗೆ ಈ ವಿಚಾರ ತಿಳಿಸಿ, ಹಣ ಮಾಡುವ ಬಗ್ಗೆ ಚರ್ಚಿಸಿದ್ದರು.
ಆಗ ಆನಂದ್, ತನ್ವೀರ್‌ನನ್ನು ಪರಿಚಯಿಸಿದ್ದಾರೆ. ಬಳಿಕ ತನ್ವೀರ್‌ಗೆ ಸುಪಾರಿ ಕೊಟ್ಟ ಆರೋಪಿಗಳು, ವಿಕಾಸ್ ಬೋರಾನ ಅಪಹರಣಕ್ಕೆ ಸಂಚು ರೂಪಿಸಿದ್ದರು. ಅದರಂತೆ ಯುವತಿಯೊಬ್ಬಳ ಮೂಲಕ ಕರೆ ಮಾಡಿಸಿ ಅಪಹರಿಸಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.