ಬೆಂಗಳೂರು : ಒಕ್ಕಲಿಗ ಸಂಘದಿಂದ ಕಾಡುಗೋಡಿಯ ಚನ್ನಸಂದ್ರದಲ್ಲಿ ನಿರ್ಮಿಸಲಾಗಿರುವ ನಾಡಪ್ರಭು ಕೆಂಪೇಗೌಡರ ಕಂಚಿನ ಪುತ್ಥಳಿಯನ್ನು ಆದಿಚುಂಚನಗಿರಿ ಮಠದ ಡಾ. ನಿರ್ಮಾಲಾನಂದ ಸ್ವಾಮೀಜಿ ಅನಾವರಣಗೊಳಿಸಿದರು.
ಬಳಿಕ ಮಾತನಾಡಿದ ಅವರು, ಒಕ್ಕಲಿಗ ಸಮುದಾಯದ ಸುತ್ತ ಹಲವಾರು ಸಮಾಜಗಳು ಧ್ವನಿ ಪಡೆದುಕೊಂಡಿವೆ. ಒಕ್ಕಲಿಗರು ನೇಗಿಲು ಹಿಡಿದು ಉತ್ತಿ ಬಿತ್ತನೆ ಮಾಡುವ ಜೊತೆಗೆ ಖಡ್ಗ ಹಿಡಿದು ನಾಡನ್ನು ಕಟ್ಟಿದ್ದಾರೆ. ಸುಮಾರು 3ನೇ ಶತಮಾನದಿಂದಲೂ ರಾಷ್ಟ್ರ ಕಟ್ಟುವ ಕಾರ್ಯದಲ್ಲಿ ಒಕ್ಕಲಿಗ ಸಮುದಾಯ ತೊಡಗಿದೆ. ಒಂದು ಸಾಮ್ರಾಜ್ಯ ಸ್ಥಾಪಿಸಿದ ಕೀರ್ತಿ ಒಕ್ಕಲಿಗ ಸಮುದಾಯಕ್ಕೆ ಸಲ್ಲುತ್ತದೆ ಎಂದರು.
ನಂತರ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಚನ್ನಸಂದ್ರದಲ್ಲಿ ನಾಡಪ್ರಭು ಕೆಂಪೇಗೌಡ ಪುತ್ಥಳಿಯನ್ನು ಸ್ಥಾಪಿಸಿ ನಮ್ಮ ಮುಂದಿನ ಪೀಳಿಗೆಗೆ ಕೆಂಪೇಗೌಡರ ಸಾಧನೆಯನ್ನು ತೋರಿಸುವುದಕ್ಕೆ ಪ್ರಯತ್ನ ಮಾಡಿರುವುದು ಸಂತಸದ ಸಂಗತಿ. ಅಮ್ಮನ ನೆನಪು ಪ್ರೀತಿಯ ಮೂಲ, ಗುರುವಿನ ನೆನಪು ಜ್ಞಾನದ ಮೂಲ, ದೇವರ ನೆನಪು ಭಕ್ತಿಯ ಮೂಲ, ಈ ಮೂರರ ನೆನಪು ಮನುಷ್ಯರ ಮೂಲ. ಹಾಗೆ ಜೊತೆಗೂಡುವುದು ಆರಂಭ, ಜೊತೆಗೂಡಿ ಯೋಚಿಸುವುದು ಪ್ರಗತಿ, ಜೊತೆಗೂಡಿ ಕೆಲಸ ಮಾಡುವುದು ಯಶಸ್ಸು ಎಂದರು.
ಬೆಂಗಳೂರು ಅತಿ ವೇಗದಲ್ಲಿ ಬೆಳೆಯುತ್ತಿದ್ದು, ಯಾರು ಜಮೀನನ್ನು ಹೊಂದಿದ್ದೀರಾ ಮಾರಾಟ ಮಾಡಬೇಡಿ. ಹೆಣ್ಣು ಮಕ್ಕಳು ಗಂಡಂದಿರಿಗೆ ಮತ್ತು ಮಕ್ಕಳಿಗೆ ಜಮೀನು ಮಾರಾಟ ಮಾಡಲು ಬಿಡಬೇಡಿ ಮತ್ತು ಸಹಿ ಹಾಕಬೇಡಿ. ಯಾಕೆಂದರೆ ಮುಂದಿನ ಕೆಲ ವರ್ಷಗಳ ನಂತರ ಕೋಟಿ ಕೋಟಿ ಬೆಲೆ ಬಾಳುವ ಜಾಗಗಳು ಇವು. ಮಕ್ಕಳಿಗೆ ಮದುವೆ ಅಥವಾ ಮನೆ ಕಟ್ಟುವ ಗುರಿ ಇದ್ದರೆ, ಸಣ್ಣಪುಟ್ಟ ಜಮೀನು ಮಾರಿಕೊಂಡು ಉಳಿದ ಜಮೀನನ್ನು ಹಾಗೆ ಉಳಿಸಿಕೊಳ್ಳಿ ಎಂದು ಕಿವಿಮಾತು ಹೇಳಿದರು.
ಓದಿ : ಶಿವರಾಮ ಕಾರಂತ ಬಡಾವಣೆ ವಿವಾದ: ಸಾರ್ವಜನಿಕರಿಗೆ ಅರ್ಜಿ ಸಲ್ಲಿಸಲು ಏ.30ರ ಗಡುವು
ಬೆಂಗಳೂರನ್ನು ಕಟ್ಟಿದ್ದು ಕೆಂಪೇಗೌಡರು, ಬೆಳೆಸಿದ್ದು ಕೆಂಗಲ್ ಹನುಮಂತಯ್ಯನವರು ಮತ್ತು ಬೆಂಗಳೂರು ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದಿದ್ದು ಮಾಜಿ ಸಿಎಂ ಎಸ್.ಎಂ ಕೃಷ್ಣ ಅವರು. ಈ ಮೂವರಿಂದ ಬೆಂಗಳೂರು ಬೃಹತ್ ಮಟ್ಟದಲ್ಲಿ ಬೆಳೆದಿದೆ. ಆದರೆ, ಈಗ ಬೆಂಗಳೂರು ಬೇರೆಯವರ ಆಸ್ತಿಯಾಗುತ್ತಿದೆ. ಮುಂದಿನ ದಿನಗಳಲ್ಲಿ ಬೆಂಗಳೂರು ಕನ್ನಡಿಗರ ಆಸ್ತಿಯಾಗಬೇಕು, ಕೆಂಪೇಗೌಡರ ವಂಶಸ್ಥರ ಆಸ್ತಿಯಾಗಬೇಕು ಎಂದು ಡಿಕೆಶಿ ಹೇಳಿದರು.
ನಾನು ಇಲ್ಲಿಗೆ ಬಂದಿದ್ದು ನಿಮ್ಮ ಜೈ ಕಾರ, ಹೂವಿನ ಹಾರಕ್ಕೆ ಅಲ್ಲ. ನಾನೂ ನಿಮ್ಮೊಂದಿಗೆ ಒಬ್ಬ ಎಂದು ಹೇಳಲು ಬಂದಿದ್ದೇನೆ. ಇದೇ ರೀತಿ ಮುಂದಿನ ದಿನಗಳಲ್ಲಿ ನಿಮ್ಮ ಪ್ರೀತಿ ವಿಶ್ವಾಸ ನನ್ನ ಮೇಲೆ ಇದ್ದರೆ ಸಾಕು, ನನಗೆ ಏನು ಬೇಡ. ನಿಮ್ಮ ಆಸ್ತಿ- ದುಡ್ಡು ಬೇಡ, ನಿಮ್ಮ ಪ್ರೀತಿ ಮಾತ್ರ ಸಾಕು. ನಿಮ್ಮ ಹೆಣ ಹೊರಕ್ಕೂ ನಾನು ರೆಡಿ, ನಿಮ್ಮ ಪಾದ ಹಿಡಿಯೋಕು ರೆಡಿ. ತಲೆ ಕೆಡಿಸ್ಕೋಬೇಡಿ, ಮುಂದಿನ ದಿನಗಳಲ್ಲಿ ನಿಮ್ಮ ಆಶೀರ್ವಾದ ಡಿ.ಕೆ ಶಿವಕುಮಾರ್ ಮೇಲೆ ಇರಲಿ ಎಂದು ಮನವಿ ಮಾಡಿದರು.
ಶಾಸಕ ಶರತ್ ಬಚ್ಚೇಗೌಡ, ವಿಧಾನಪರಿಷತ್ ಸದಸ್ಯ ರಮೇಶ್ ಗೌಡ, ಡಿಸಿಪಿ ದೇವರಾಜ್, ಚನ್ನಸಂದ್ರ ಒಕ್ಕಲಿಗರ ಸಂಘದ ಅಧ್ಯಕ್ಷ ಆರ್.ಮಂಜುನಾಥ್ ಗೌಡ, ಪ್ರಧಾನ ಕಾರ್ಯದರ್ಶಿ ಸುನೀಲ್ ಕುಮಾರ್ ಗೌಡ, ಮುಖಂಡರಾದ ಕೆಂಪೇಗೌಡ, ಕಬಡ್ಡಿ ಪಿಳ್ಳಪ್ಪ, ಬಿದರಹಳ್ಳಿ ರಾಜೇಶ್ ಇದ್ದರು.