ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ದೇಶದಲ್ಲಿನ ಅತ್ಯಂತ ಬ್ಯುಸಿ ವಿಮಾನ ನಿಲ್ದಾಣಗಳಲ್ಲಿ ಒಂದು ಹಾಗೂ ಭಾರತದಲ್ಲೇ ಮೂರನೇ ಅತಿ ದೊಡ್ಡ ನಿಲ್ದಾಣ. ಹೀಗೆ ಹತ್ತು ಹಲವು ಗರಿಮೆಗಳನ್ನು ಪಡೆದಿರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಆಸುಪಾಸಿನ ಗ್ರಾಮ ಪಂಚಾಯಿತಿಗೆ ತೆರಿಗೆ ಕಟ್ಟಲು ಮಾತ್ರ ಹಿಂದೇಟು ಹಾಕುತ್ತಿದೆ ಎನ್ನಲಾಗಿದೆ.
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಯಾಣಿಕರ ಬಳಸುವಿಕೆಯಲ್ಲಿ ಭಾರತದ ಮೂರನೇ ಅತಿ ದೊಡ್ಡ ವಿಮಾನ ನಿಲ್ದಾಣವಾಗಿದೆ. ಪ್ರತಿನಿತ್ಯ ಸಾವಿರಾರು ಪ್ರಯಾಣಿಕರು ಈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ವೈಮಾನಿಕ ಪ್ರಯಾಣ ಕೈಗೊಳ್ಳುತ್ತಾರೆ. ಅನೇಕ ಹೊಸತನಗಳೊಂದಿಗೆ ಪ್ರಯಾಣಿಕರಿಗೆ ಹೈ-ಫೈ ಸೇವೆಗಳನ್ನು ಕೊಡುವ ಮೂಲಕ ವಿಶ್ವದ ಗಮನ ಸೆಳೆದಿರುವ ವಿಮಾನ ನಿಲ್ದಾಣ, ಅತಿ ವೇಗದಲ್ಲಿ ಅಭಿವೃದ್ಧಿ ಕಾಣುತ್ತಿದೆ.
ವಾರ್ಷಿಕ ಸುಮಾರು 3 ಕೋಟಿಗೂ ಹೆಚ್ಚು ಪ್ರಯಾಣಿಕರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಪ್ರಯಾಣ ಬೆಳೆಸುತ್ತಾರೆ. ಹತ್ತು ಹಲವು ಹೆಗ್ಗಳಿಕೆಯನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮುಡಿಗೇರಿಸಿಕೊಂಡಿದೆ. ಹಲವು ಹಿರಿಮೆಗಳನ್ನು ಗಳಿಸಿರುವ ವಿಮಾನ ನಿಲ್ದಾಣ ಪಕ್ಕದ ಗ್ರಾಮ ಪಂಚಾಯತಿಗೆ ನೀಡಬೇಕಾದ ಕೋಟ್ಯಂತರ ರೂಪಾಯಿ ಮೊತ್ತದ ಆಸ್ತಿ ತೆರಿಗೆ ಪಾವತಿಯನ್ನು ಇನ್ನೂ ಬಾಕಿ ಉಳಿಸಿಕೊಂಡಿದೆಯಂತೆ.
ಅಣ್ಣೇಶ್ವರ ಗ್ರಾಪಂಗೆ ಕೋಟಿ ತೆರಿಗೆ ಬಾಕಿ
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ದೇವನಹಳ್ಳಿ ತಾಲೂಕಿನ ಒಟ್ಟು ನಾಲ್ಕು ಗ್ರಾಮ ಪಂಚಾಯತಿಗಳ ಭೂಮಿಯನ್ನು ಬಳಸಿಕೊಂಡಿದೆ. ಅಣ್ಣೇಶ್ವರ, ಬೆಟ್ಟಕೋಟೆ, ಬಿ.ಕೆ.ಹಳ್ಳಿ ಮತ್ತು ದೊಡ್ಡಜಾಲ ಗ್ರಾಮ ಪಂಚಾಯತಿಗಳ ಭೂಮಿಯನ್ನು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬಳಸುತ್ತಿದೆ. ಈ ಗ್ರಾಮ ಪಂಚಾಯತಿಗಳಿಗೆ ಬಿಐಎಎಲ್ ಆಸ್ತಿ ತೆರಿಗೆ ಕಟ್ಟಬೇಕು. ವಿಮಾನ ನಿಲ್ದಾಣ ಅತಿ ಹೆಚ್ಚು ಭೂಮಿ ಬಳಸಿಕೊಂಡಿರುವುದು ಅಣ್ಣೇಶ್ವರ ಗ್ರಾಮ ಪಂಚಾಯತಿಯದ್ದು.
ಸುಮಾರು 2,540 ಎಕರೆ ಭೂಮಿಯನ್ನು ಬಳಸುತ್ತಿದೆ. ಆಸ್ತಿ ತೆರಿಗೆ ನಿಗದಿ ಸಂಬಂಧ ತಕರಾರು ಎತ್ತಿ 2013ರಲ್ಲಿ ಬಿಐಎಎಲ್ ಹೈಕೋರ್ಟ್ ಮೊರೆ ಹೋಗಿತ್ತು. ಆಸ್ತಿ ತೆರಿಗೆ ನಿಗದಿಗೆ ಸ್ಪಷ್ಟ ಮಾರ್ಗಸೂಚಿ ಇಲ್ಲದಿದ್ದು, ಅಣ್ಣೇಶ್ವರ ಗ್ರಾಮ ಪಂಚಾಯತಿ ಹೆಚ್ಚಿನ ತರಿಗೆ ನಿಗದಿಗೊಳಿಸುತ್ತಿದೆ ಎಂದು ವಾದ ಮಂಡಿಸಿತ್ತು. ವಿಚಾರಣೆಯಲ್ಲಿ ಕೋರ್ಟ್ ಬಿಐಎಎಲ್ಗೆ ಈ ಹಿಂದಿನ ಬಾಕಿ ಸೇರಿ ಅಣ್ಣೇಶ್ವರ ಗ್ರಾಮ ಪಂಚಾಯತಿಗೆ ಸುಮಾರು 28 ಕೋಟಿ ರೂ. ಪಾವತಿಸುವಂತೆ ನಿರ್ದೇಶನ ನೀಡಿತ್ತು.
ಅದರಂತೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸುಮಾರು 17.50 ಕೋಟಿ ರೂ. ಪಾವತಿ ಮಾಡಿದೆ. ಆದರೆ, ಇನ್ನೂ 10.5 ಕೋಟಿ ರೂ. ತೆರಿಗೆ ಕಟ್ಟದೆ ಬಾಕಿ ಉಳಿಸಿಕೊಂಡಿದೆ ಎಂದು ಪಂಚಾಯತಿ ಅಧಿಕಾರಿಗಳು ತಿಳಿಸಿದ್ದಾರೆ. ಈ ಸಾಲಿನ ಆಸ್ತಿ ತೆರಿಗೆ ಪೈಕಿ 5 ಕೋಟಿ ರೂ. ಮೊತ್ತವನ್ನು ಪಾವತಿಸಿದೆ. ಇನ್ನೂ ಒಂದು ಕೋಟಿ ರೂ. ತೆರಿಗೆಯನ್ನು ಬಾಕಿ ಉಳಿಸಿಕೊಂಡಿದೆ ಎಂದು ಪಂಚಾಯತಿ ಅಧಿಕಾರಿಗಳು ತಿಳಿಸಿದ್ದಾರೆ.
ಇತರೆ ಗ್ರಾಪಂಗಳ ತೆರಿಗೆ ಎಷ್ಟು?
ಉಳಿದಂತೆ ಇತರ ಮೂರು ಗ್ರಾಮ ಪಂಚಾಯತಿಗಳಿಗೂ ವಿಮಾನ ನಿಲ್ದಾಣ ಪ್ರಾಧಿಕಾರ ಆಸ್ತಿ ತೆರಿಗೆ ಪಾವತಿಸಬೇಕಾಗಿದೆ. ಬಿ.ಕೆ.ಹಳ್ಳಿ, ಬೆಟ್ಟಕೋಟೆ ಹಾಗೂ ದೊಡ್ಡಜಾಲ ಗ್ರಾಮ ಪಂಚಾಯತಿಗಳ ಭೂಮಿಯನ್ನೂ ಏರ್ಪೋರ್ಟ್ ಬಳಸಿಕೊಂಡಿದೆ. ಬಿ.ಕೆ.ಹಳ್ಳಿಯ ಸುಮಾರು 818 ಎಕರೆ ಜಮೀನು ಬಳಸಿಕೊಂಡಿದ್ದರೆ, ಬೆಟ್ಟಕೋಟೆಯ 471 ಎಕರೆ, ದೊಡ್ಡಜಾಲದ 162 ಎಕರೆ ಭೂಮಿಯನ್ನು ಬಳಸಲಾಗುತ್ತಿದೆಯಂತೆ.
ಈ ಗ್ರಾಮ ಪಂಚಾಯತಿಗಳ ವ್ಯಾಪ್ತಿಯ ಭೂಮಿಯಲ್ಲಿ ಬಿಐಎಎಲ್ ಯಾವುದೇ ಕಟ್ಟಡಗಳನ್ನು ಕಟ್ಟಿಲ್ಲ. ಖಾಲಿ ನಿವೇಶನಗಳಾಗಿರುವುದರಿಂದ ಹೆಚ್ಚಿನ ಆಸ್ತಿ ತೆರಿಗೆ ಹೊರೆ ಇಲ್ಲ. ಬೆಟ್ಟ ಕೋಟೆ ಗ್ರಾಪಂಗೆ ಈ ವರ್ಷ ಸುಮಾರು 80 ಲಕ್ಷ ರೂ. ಆಸ್ತಿ ತೆರಿಗೆ ಕಟ್ಟಬೇಕಾಗಿದ್ದು, ಆ ಮೊತ್ತವನ್ನು ಪಾವತಿ ಮಾಡಲಾಗಿದೆ. ಇನ್ನು ಬಿ.ಕೆ.ಹಳ್ಳಿ ಗ್ರಾಪಂಗೆ ನೀಡಬೇಕಾಗಿರುವ 84 ಲಕ್ಷ ರೂ. ತೆರಿಗೆಯನ್ನು ಬಿಐಎಎಲ್ ಅಧಿಕಾರಿಗಳು ಪಾವತಿ ಮಾಡಿದ್ದಾರೆ ಎನ್ನಲಾಗಿದೆ.