ಬೆಂಗಳೂರು: ಕರ್ನಾಟಕ ಸಂಗೀತ, ನೃತ್ಯ ಅಕಾಡೆಮಿಯ 2022-23ನೇ ಸಾಲಿನ “ಕರ್ನಾಟಕ ಕಲಾಶ್ರೀ” ಗೌರವ ಹಾಗೂ ವಾರ್ಷಿಕ ಪ್ರಶಸ್ತಿ ಪ್ರಕಟವಾಗಿದೆ. ಮೂವರು ವಿಶೇಷಚೇತನರು ಸೇರಿದಂತೆ 18 ಕಲಾವಿದರು ಪ್ರಶಸ್ತಿಗೆ ಭಾಜನರಾಗಿದ್ದಾರೆ.
ನಗರದಲ್ಲಿಂದು ರವೀಂದ್ರ ಕಲಾಕ್ಷೇತ್ರದ ಕನ್ನಡ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಅಧ್ಯಕ್ಷ ಆನೂರು ಅನಂತ ಕೃಷ್ಣ ಶರ್ಮ, ಈ ಬಾರಿ ಕರ್ನಾಟಕ ಕಲಾಶ್ರೀ ಪ್ರಶಸ್ತಿಯೊಂದಿಗೆ ಗೌರವ ಪ್ರಶಸ್ತಿ ಪುರಸ್ಕೃತರಿಗೆ 50 ಸಾವಿರ ರೂ ನಗದು, ವಾರ್ಷಿಕ ಪ್ರಶಸ್ತಿಗೆ 25 ಸಾವಿರ ರೂ ಗೌರವಧನ ನೀಡಲಾಗುವುದು ಎಂದರು.
ಮುಂದಿನ ಸೆಪ್ಟೆಂಬರ್ ಕೊನೆಯ ತಿಂಗಳು ಈ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಜರುಗಲಿದ್ದು, ಅದಕ್ಕೂ ಮೊದಲು ಸೆಪ್ಟೆಂಬರ್ 16ರಿಂದ ಎರಡು ದಿನಗಳ ಕಾಲ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಾಟ್ಯ ನವೋದಯ ನೃತ್ಯ ಸಂಯೋಜನಾ ಉತ್ಸವ ಏರ್ಪಡಿಸಲಾಗಿದೆ. ಸಂಗೀತ ನೃತ್ಯ ಕ್ಷೇತ್ರದಲ್ಲಿ ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಸಂದರ್ಶನ ನಡೆಸಿ 100 ಮಂದಿಗೆ ತಲಾ 10 ಸಾವಿರ ರೂ ಶಿಷ್ಯ ವೇತನ ನೀಡಲಾಗುವುದು ಎಂದು ತಿಳಿಸಿದರು.
15 ತರಬೇತಿ ಶಿಬಿರಗಳ ಆಯೋಜನೆ: ವಿಶೇಷ ಘಟಕ ಹಾಗೂ ಗಿರಿಜನ ಉಪಯೋಜನೆ ಅಡಿ 5 ತಿಂಗಳ ಗುರು ಶಿಷ್ಯ ಪರಂಪರೆ 15 ತರಬೇತಿ ಶಿಬಿರಗಳನ್ನು ಹಮ್ಮಿಕೊಳ್ಳಲಾಗಿದೆ. ಹಿಂದುಸ್ತಾನಿ ಶಾಸ್ತ್ರಿಯ ಸಂಗೀತ, ಸುಗಮ ಸಂಗೀತ, ಸುಗಮ ಸಂಗೀತ ಹಾಗೂ ಕೂಚಿಪುಡಿ ನೃತ್ಯ ತರಬೇತಿ ಶಿಬಿರಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಬೃಹತ್ ಸಂಗೀತ ನೃತ್ಯೋತ್ಸವ: ಈಗಾಗಲೇ ಬೃಹತ್ ಸಂಗೀತ ನೃತ್ಯೋತ್ಸವ ಕಾರ್ಯಕ್ರಮವನ್ನು ಹುಬ್ಬಳ್ಳಿಯಲ್ಲಿ ನಡೆಸಲಾಗಿದೆ. ಹೀಗೆ ಹಲವು ಕಾರ್ಯಕ್ರಮಗಳನ್ನು ಅಕಾಡೆಮಿ ವತಿಯಿಂದ ನಡೆಸಲಾಗಿದೆ ಎಂದು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಅಕಾಡೆಮಿಯ ರಿಜಿಸ್ಟ್ರಾರ್ ಎಸ್.ಎಸ್.ಶಿವರುದ್ರಪ್ಪ, ಲೆಕ್ಕಾಧಿಕಾರಿ ಸುರೇಶ್ ನಾಯ್ಕ್ ಉಪಸ್ಥಿತರಿದ್ದರು.
ಇದನ್ನೂ ಓದಿ : ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ 2021 ನೇ ಸಾಲಿನ ಪ್ರಶಸ್ತಿ ಪ್ರಕಟ