ಬೆಂಗಳೂರು : ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ನಿರ್ಬಂಧಿಸಿರುವ ಕ್ರಮ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ, ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಹಾಗೂ ನ್ಯಾಯಮೂರ್ತಿ ಖಾಜಿ ಜೈಬುನ್ನೀಸಾ ಅವರಿದ್ದ ತ್ರಿಸದಸ್ಯ ಪೀಠ ಇಂದು ವಿಚಾರಣೆ ನಡೆಸಿತು.
ಪ್ರಕರಣಕ್ಕೆ ಸಂಬಂಧಿಸಿದಂತೆ 4ನೇ ದಿನವೂ ಅರ್ಜಿದಾರರ ಪರ ವಕೀಲರೇ ವಾದ ಮಂಡಿಸಿದರು. 2 ಗಂಟೆಗೂ ಹೆಚ್ಚು ಕಾಲ ವಾದ ಆಲಿಸಿದ ಪೀಠ, ವಿಚಾರಣೆಯನ್ನು ನಾಳೆ ಮಧ್ಯಾಹ್ನ 2.30ಕ್ಕೆ ಮುಂದೂಡಿತು.
ಪ್ರೊ. ರವಿವರ್ಮ ಕುಮಾರ್ ವಾದ ಮಂಡನೆ ಸಾರಾಂಶ : ವಿದ್ಯಾರ್ಥಿನಿಯರ ಪರ ಹಿರಿಯ ವಕೀಲ ಪ್ರೊ. ರವಿವರ್ಮ ಕುಮಾರ್ ವಾದ ಮಂಡಿಸಿ, ಶಿಕ್ಷಣ ಕಾಯ್ದೆಯ ಪ್ರಕಾರ ಒಮ್ಮೆ ನಿಗದಿಪಡಿಸಿದ ಸಮವಸ್ತ್ರವನ್ನು 5 ವರ್ಷ ಬದಲಿಸಬಾರದು. ಬದಲಿಸುವ ಮುನ್ನ 1 ವರ್ಷ ಮೊದಲೇ ಪೋಷಕರಿಗೆ ನೋಟಿಸ್ ನೀಡಬೇಕು. ಅದೇ ರೀತಿ ಹಿಜಾಬ್ ವಿಚಾರದಲ್ಲೂ 1 ವರ್ಷ ಮೊದಲೇ ನೋಟಿಸ್ ನೀಡಬೇಕಿತ್ತು ಎಂದು ವಾದಿಸಿದರು.
ಹಿರಿಯ ವಕೀಲ ಯೂಸುಫ್ ಮುಚ್ಚಾಲ ವಾದ : ಪ್ರೊ. ರವಿವರ್ಮ ಕುಮಾರ್ ವಾದ ಮಂಡನೆ ಬಳಿಕ ಅರ್ಜಿದಾರ ವಿದ್ಯಾರ್ಥಿನಿಯೊಬ್ಬರ ಪರ ಬಾಂಬೆ ಹೈಕೋರ್ಟ್‌ನ ಹಿರಿಯ ವಕೀಲ ಯೂಸುಫ್ ಮುಚ್ಚಾಲ ವಾದ ಮಂಡಿಸಿದರು.
ಅರ್ಜಿಗಳಿಗಿಂತ ಮಧ್ಯಂತರ ಅರ್ಜಿಗಳೇ ಹೆಚ್ಚು : ವಿಚಾರಣೆ ಆರಂಭದಲ್ಲಿ ರಿಟ್ ಅರ್ಜಿಗಳಿಗೆ ಸಂಬಂಧಿಸಿದಂತೆ 20ಕ್ಕೂ ಹೆಚ್ಚು ಮಧ್ಯಂತರ ಅರ್ಜಿಗಳನ್ನು ಸಲ್ಲಿಸಿರುವುದನ್ನು ಗಮನಿಸಿದ ಪೀಠ, ಹೀಗೆ ನಿರಂತರವಾಗಿ ಮಧ್ಯಂತರ ಅರ್ಜಿಗಳನ್ನು ಸಲ್ಲಿಸುತ್ತಿದ್ದರೆ, ಪ್ರಕರಣವನ್ನು ತ್ವರಿತವಾಗಿ ಇತ್ಯರ್ಥಗೊಳಿಸುವುದು ಹೇಗೆ ಎಂದು ಪ್ರಶ್ನಿಸಿತು. ಹಾಗೆಯೇ, ಒಂದು ಅರ್ಜಿಗೆ ಒಬ್ಬರೇ ವಾದಿಸಬೇಕು.
ಮುಖ್ಯವಾಗಿ ವಾದ ಮಂಡನೆಯ ವಿಷಯ ಪುನರಾವರ್ತನೆ ಆಗಬಾರದು. ಎಲ್ಲಾ ಮಧ್ಯಂತರ ಅರ್ಜಿ ವಿಚಾರಣೆ ಅಗತ್ಯವಿಲ್ಲ. ಈ ಅರ್ಜಿಗಳಿಂದ ಕೋರ್ಟ್ ಸಮಯ ವ್ಯರ್ಥವಾಗುತ್ತಿದೆ ಎಂದು ಅಭಿಪ್ರಾಯಪಟ್ಟಿತು. ಇದಕ್ಕೆ ಪ್ರತಿಕ್ರಿಯಿಸಿದ ಅರ್ಜಿದಾರರ ಪರ ವಕೀಲರು, ಇದು ಧಾರ್ಮಿಕ ಸೂಕ್ಷ್ಮ ಪ್ರಕರಣವಾಗಿದ್ದು, ಎಲ್ಲರ ವಾದವನ್ನೂ ಆಲಿಸುವಂತೆ ಮನವಿ ಮಾಡಿದರು.