ಬೆಂಗಳೂರು: ಕರ್ನಾಟಕ ಬಂದ್ ಹಿನ್ನೆಲೆ ಕೆಂಪೇಗೌಡ ವಿಮಾನ ನಿಲ್ದಾಣದ ಒಳಗಡೆ ಪ್ರವೇಶಿಸಿ ವಿಮಾನದಲ್ಲಿ ಪ್ರತಿಭಟನೆ ನಡೆಸಲು ಮುಂದಾಗಿದ್ದವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ವಿಮಾನ ಟಿಕೆಟ್ ಬುಕ್ ಮಾಡಿ ನಮ್ಮ ಕರ್ನಾಟಕ ಸೇನೆಯ ಐವರು ಕಾರ್ಯಕರ್ತರು, ವಿಮಾನ ನಿಲ್ದಾಣದ ಒಳಗಡೆ ಪ್ರವೇಶಿಸಿದ್ದಾರೆ. ಬಳಿಕ ವಿಮಾನದಲ್ಲಿ ಪ್ರತಿಭಟನೆ ನಡೆಸಲು ಮುಂದಾಗಿದ್ದರು. ಆದ್ರೆ ವಿಮಾನ ನಿಲ್ದಾಣದ ಪ್ರವೇಶ ವೇಳೆ ಐವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪ್ರತಿಭಟನಾಕಾರರು ಶಿವಮೊಗ್ಗಕ್ಕೆ ತೆರಳಬೇಕಿದ್ದ ಬೆಳಗ್ಗೆ 9.50ರ ಇಂಡಿಗೋ 7731 ಸಂಖ್ಯೆಯ ವಿಮಾನದ ಟಿಕೆಟ್ ಬುಕ್ ಮಾಡಿದ್ದರು.
ವಿಮಾನಗಳ ಹಾರಾಟ ರದ್ದು: ಬಂದ್ ಹಿನ್ನೆಲೆ ಬೆಂಗಳೂರಿಗೆ ಆಗಮಿಸುವ ಮತ್ತು ನಿರ್ಗಮಿಸುವ ವಿಮಾನಗಳ ಸಂಚಾರದಲ್ಲಿ ಅಡಚಣೆಯಾಗಿದೆ. ದೆಹಲಿ, ಮುಂಬೈ, ಕೊಲ್ಕತ್ತಾ, ಮಂಗಳೂರು ಸೇರಿ ಒಟ್ಟು 41 ವಿಮಾನಗಳ ಹಾರಾಟ ರದ್ದಾಗಿದೆ. ಬೆಂಗಳೂರಿಗೆ ಆಗಮಿಸಬೇಕಿದ್ದ ಹಾಗೂ ಬೆಂಗಳೂರಿನಿಂದ ನಿರ್ಗಮಿಸಬೇಕಿದ್ದ ವಿಮಾನಗಳು ರದ್ದುಗೊಂಡಿವೆ. ಪ್ರಯಾಣಿಕರ ಅಲಭ್ಯಯಿಂದಾಗಿ 41 ವಿಮಾನಗಳ ಹಾರಾಟ ರದ್ದುಗೊಂಡಿದ್ದು, ಕೊನೆ ಗಳಿಗೆಯಲ್ಲಿ ಇನ್ನಷ್ಟು ವಿಮಾನಗಳು ರದ್ದಾಗುವ ಸಾಧ್ಯತೆ ಇದೆ.
ಇದಕ್ಕೂ ಮೊದಲು ಕರ್ನಾಟಕ ನವ ನಿರ್ಮಾಣ ಸೇನೆ ಕಾರ್ಯಕರ್ತರು ವಿಮಾನ ನಿಲ್ದಾಣಕ್ಕೆ ನುಗ್ಗಿ ಮುತ್ತಿಗೆ ಹಾಕಲು ಯತ್ನಿಸಿದ್ದರು. ವಿಮಾನ ನಿಲ್ದಾಣದ ಟರ್ಮಿನಲ್ 1 ನಿರ್ಗಮನ ಗೇಟ್ನಲ್ಲಿ ಮುತ್ತಿಗೆ ಹಾಕಲು ಯತ್ನಿಸಿದ ಕಾರ್ಯಕರ್ತರನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮತ್ತೊಂದೆಡೆ ಕನ್ನಡ ಪರ ಸಂಘಟನೆಗಳ ಕಾರ್ಯಕತರು ಹೋರಾಟ ನಡೆಸಿ ವಿಮಾನ ನಿಲ್ದಾಣಕ್ಕೆ ಮುತ್ತಿಗೆ ಹಾಕಿದ್ದಾರೆ. ಅಲ್ಲದೇ ತಮಿಳುನಾಡಿಗೆ ಕಾವೇರಿ ನೀರು ಬಿಡದಂತೆ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದ್ದಾರೆ.
ವಿಮಾನ ನಿಲ್ದಾಣದ ಆಗಮನ ಗೇಟ್ ಬಳಿ ಕರವೆ ಕಾರ್ಯಕರ್ತರ ಕನ್ನಡ ಬಾವುಟಗಳನ್ನ ಕೈಲಿಡಿದು ಘೋಷಣೆಗಳನ್ನು ಹಾಕಿದ್ದಾರೆ. ಈ ವೇಳೆ ಕರವೇ ಕಾರ್ಯಕರ್ತರನ್ನ ವಶಕ್ಕೆ ಪಡೆಯಲು ಪೊಲೀಸರು ಹರಸಾಹಸಪಟ್ಟಿದ್ದು, 20 ಕ್ಕೂ ಅಧಿಕ ಕಾರ್ಯಕರ್ತರನ್ನ ವಶಕ್ಕೆ ಪಡೆದಿದ್ದಾರೆ. ಇನ್ನೂ ಕೆಲ ಕಾರ್ಯಕರ್ತರನ್ನು ಏರ್ಪೋರ್ಟ್ನ ಹೊರಭಾಗದಲ್ಲೇ ತಡೆದು ವಶಕ್ಕೆ ಪಡೆದಿದ್ದಾರೆ. ಸದ್ಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ಕೆಎಸ್ಆರ್ಪಿ ಪೊಲೀಸರನ್ನು ಹೆಚ್ಚಿನ ಸಂಖ್ಯೆಯಲ್ಲಿ ನಿಯೋಜಿಸಲಾಗಿದೆ. ಡಿವೈಎಸ್ಪಿ ನವೀನ್ ಕುಮಾರ್ ನೇತೃತ್ವದಲ್ಲಿ ಭದ್ರತೆ ಕಾರ್ಯ ಕೈಗೊಳ್ಳಲಾಗಿದೆ.
ಮಧ್ಯಾಹ್ನದ ವಿಮಾನಕ್ಕಾಗಿ ಬೆಳಗ್ಗೆಯೇ ಏರ್ಪೋರ್ಟ್ಗೆ ಬಂದ ಪ್ರಯಾಣಿಕರು: ಮಧ್ಯಾಹ್ನ ಮತ್ತು ಸಂಜೆ ಇರುವ ಫ್ಲೈಟ್ಗಳಲ್ಲಿ ಪ್ರಯಾಣಿಸಬೇಕಿರುವ ಪ್ರಯಾಣಿಕರು ಬಂದ ಹಿನ್ನೆಲೆಯಲ್ಲಿ ಬೆಳಗ್ಗೆಯೇ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿದ್ದಾರೆ. ಪ್ರಯಾಣಿಕರು ಒಮ್ಮೆಲೆ ಏರ್ಪೋರ್ಟ್ಗೆ ಬರುತ್ತಿರುವುದರಿಂದ ಡ್ರಾಪ್ ಪಾಯಿಂಟ್ ಬಳಿ ಟ್ರಾಫಿಕ್ ಜಾಮ್ ಉಂಟಾಗಿದೆ.
ನಗರದ ಬೇರೆ ಬೇರೆ ಕಡೆ ಪ್ರತಿಭಟನಾನಿರತರನ್ನ ಫ್ರೀಡಂ ಪಾರ್ಕ್ಗೆ ಕರೆತರಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಫ್ರೀಡಂ ಪಾರ್ಕ್ ಹೊರತುಪಡಿಸಿ ಬೇರೆ ಕಡೆ ಪ್ರತಿಭಟನೆಗೆ ಅವಕಾಶವಿರದ ಹಿನ್ನೆಲೆಯಲ್ಲಿ, ಆಯಕಟ್ಟಿನ ಸ್ಥಳಗಳಲ್ಲಿ ಪ್ರತಿಭಟನಾ ನಿರತರನ್ನ ವಶಕ್ಕೆ ಪಡೆಯಲು ಪೊಲೀಸರು ಸಿದ್ದರಾಗಿದ್ದಾರೆ. ಟೌನ್ ಹಾಲ್ ಬಳಿ ಪ್ರತಿಭಟನೆ ನಡೆಸಲು ಬರುವವರನ್ನ ನಿಯಂತ್ರಿಸಲು ಬೆಂಗಳೂರು ಕೇಂದ್ರ ವಿಭಾಗದ ಡಿಸಿಪಿ ಶೇಖರ್ ಟೆಕ್ಕಣ್ಣವರ್ ನೇತೃತ್ವದಲ್ಲಿ ಐದು ತಂಡಗಳು ಸಿದ್ಧವಾಗಿವೆ. 15ಕ್ಕೂ ಅಧಿಕ ಬಿಎಂಟಿಸಿ ಬಸ್‌ಗಳನ್ನ ಮುಂಜಾಗ್ರತಾ ಕ್ರಮವಾಗಿ ಟೌನ್ ಹಾಲ್ ಬಳಿ ನಿಲ್ಲಿಸಲಾಗಿದ್ದು, ಪ್ರತಿಭಟನೆಗೆ ಬರುವವರನ್ನ ವಶಕ್ಕೆ ಪಡೆದು ಬಸ್‌ನಲ್ಲಿ ಫ್ರೀಡಂ ಪಾರ್ಕಿಗೆ ಕಳಿಸಲು ತಯಾರಿ ಮಾಡಲಾಗಿದೆ.
ಇದನ್ನೂ ಓದಿ: ಬಳ್ಳಾರಿಯಲ್ಲಿ ಬಂದ್ಗೆ ಸಿಗದ ಬೆಂಬಲ... ಅಂಗಡಿ ಮುಂಗಟ್ಟು ಓಪನ್, ಎಂದಿನಂತೆ ಬಸ್ ಆಟೋ ಸಂಚಾರ