ಬೆಂಗಳೂರು : ಜೆ.ಜೆ.ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಿನ್ನೆ ನಡೆದ ಚಂದ್ರು ಕೊಲೆ ಪ್ರಕರಣ ಸಂಬಂಧ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಸುದ್ದಿಯ ಬಗ್ಗೆ ರಾಜ್ಯ ಪೊಲೀಸರು ಫ್ಯಾಕ್ಟ್ ಚೆಕ್ ಮಾಡಿದ್ದಾರೆ. ಅನಗತ್ಯವಾಗಿ ಸುಳ್ಳು ಸುದ್ದಿ ಹರಡಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಚಂದ್ರು ಕೊಲೆ ಪ್ರಕರಣವೀಗ ರಾಜಕೀಯ ಸ್ವರೂಪ ಪಡೆದಿದೆ. ಗೃಹ ಸಚಿವರ ಹೇಳಿಕೆಯು ತೀವ್ರ ಚರ್ಚೆಗೆ ಗ್ರಾಸವಾಗಿದೆ. ಈ ಮಧ್ಯೆ ಸೋಷಿಯಲ್ ಮೀಡಿಯಾದಲ್ಲಿ ಸುಳ್ಳು ಸುದ್ದಿ ಹರಿದಾಡುತ್ತಿರುವುದನ್ನ ಕಂಡು ಎಚ್ಚೆತ್ತುಕೊಂಡಿರುವ ಪೊಲೀಸರು ಫ್ಯಾಕ್ಟ್ ಚೆಕ್ ಮಾಡಿದ್ದಾರೆ.
ಕನ್ನಡ ಸಂಘಟನೆಗಳು ಎಲ್ಲಿದ್ದೀರಿ ಎಂದು ಪೋಸ್ಟ್ ಹಾಕಿದ್ದ ವಕೀಲೆ : ಅನ್ಯಭಾಷೆ ಬೋರ್ಡ್‌ಗಳಿಗೆ ಮಸಿ ಬಳಿಯುತ್ತೀರಾ. ಸಂತೋಷ.. ಆದರೆ, ಇವತ್ತು ಕನ್ನಡಿಗರ ಉಳಿವು ನಿಮ್ಮಿದಂಲೇ, ಉರ್ದು ಮಾತನಾಡದಿದಕ್ಕೆ ಕೊಲೆಯಾಗಿದ್ದಾನೆ. ಶಾಂತಿಧೂತರ ಮೇಲೆ ನಿಮ್ಮ ಸದಾ ಶೂನ್ಯ. ಭಾಷಾ ಹೋರಾಟದಲ್ಲಿ ಸಮಾನತೆ ಇರಲಿ. ಇವನಿಗಾಗಿ ಧ್ವನಿ ಎತ್ತೋಣ ಎಂದು ವಕೀಲೆ ಮೀರಾ ರಾಘವನ್, ಚಂದ್ರು ಫೋಟೋ ಸಮೇತ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದರು.
ಇದೇ ವಿಚಾರವಾಗಿ ಖಾಸಗಿ ಸುದ್ದಿ ವಾಹಿನಿಯಲ್ಲಿ ಸುದ್ದಿ ಪ್ರಸಾರವಾಗಿತ್ತು. ಇದೇ ವಿಡಿಯೋ ಆಧರಿಸಿ ಸ್ಕ್ರೀನ್ ಶಾಟ್ ತೆಗೆದುಕೊಂಡು ಕೆಲವರು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ ವೈರಲ್ಗೆ ಕಾರಣರಾಗಿದ್ದರು. ಬಳಿಕ ತಾವು ಮಾಡಿದ ಪೋಸ್ಟ್ ಸುಳ್ಳು ಸುದ್ದಿ ಎಂದು ಮನಗಂಡು ವಕೀಲೆ ಮೀರಾ ರಾಘವನ್ ಪೋಸ್ಟ್ ಡಿಲೀಟ್ ಮಾಡಿರುವುದು ಗಮನಿಸಬಹುದಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಾಮಾಜಿಕ ಸ್ವಾಸ್ಥ್ಯ ಕೆಡಿಸದಂತೆ ಮನವಿ : ವೈರಲ್ ಆಗುತ್ತಿರುವ ಸುಳ್ಳು ಸುದ್ದಿ ಬಗ್ಗೆ ಸತ್ಯಾಸತ್ಯತೆ ಪರಿಶೀಲಿಸಲಾಗಿದ್ದು, ಪ್ರಸಾರವಾಗುತ್ತಿರುವ ಸುದ್ದಿ ಸುಳ್ಳು ಸುದ್ದಿಯಾಗಿದ್ದು, ಸಾಮಾಜಿಕ ಸ್ವಾಸ್ಥ್ಯ ಕೆಡಿಸಲು ಉದ್ದೇಶಪೂರ್ವಕವಾಗಿ ಸುಳ್ಳು ಸುದ್ದಿ ಹರಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದೆಂದು ಎಚ್ಚರಿಕೆ ನೀಡಿದ್ದಾರೆ. ಸಾರ್ವಜನಿಕರು ಸರಿಯಾಗಿ ಪರಿಶೀಲಿಸದೇ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಈ ರೀತಿಯ ಸುಳ್ಳು ಸುದ್ದಿ ಹಂಚಿಕೊಳ್ಳಬಾರದೆಂದು ಈ ಮೂಲಕ ಪೊಲೀಸರು ಕೋರಿದ್ದಾರೆ.
ಆದ್ದರಿಂದ ಪೊಲೀಸ್ ಇಲಾಖೆ ಮತ್ತು ಇತರ ಮತೀಯ ಭಾವನೆಯನ್ನು ಕೆರಳುವಂತಹ ಧಾರ್ಮಿಕ ಸೂಕ್ಷ್ಮತೆಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಸೂಕ್ತ ಪ್ರಾಧಿಕಾರಗಳಿಂದ ಯಾವುದೇ ರೀತಿಯ ದೃಢೀಕರಿಸದ ವಿಡಿಯೋಗಳನ್ನು ಫೋಟೋಗಳನ್ನು ಹಾಗೂ ಬರಹಗಳನ್ನು ಸರಿಯಾದ ಪರಿಶೀಲನೆ ಇಲ್ಲದೆ ಹಂಚಿಕೊಳ್ಳದಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.