ಬೆಂಗಳೂರು: ಪಕ್ಷವನ್ನು ಕಟ್ಟಲು ಐಕ್ಯತೆಯಿಂದ ಹೋರಾಡಿ, ಪಕ್ಷ ಸಂಘಟನೆಗೆ ಎಲ್ಲರೂ ಸಹಕರಿಸಿ ಎಂದು ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡ ಕರೆ ನೀಡಿದರು.
ಅರಮನೆ ಮೈದಾನದಲ್ಲಿ ನಡೆದ ಜೆಡಿಎಸ್ ವಿಚಾರ ವಿಕಾಸ ವಿಕೇಂದ್ರೀಕರಣ ಸಮಾವೇಶದಲ್ಲಿ ಮಾತನಾಡಿದ ಅವರು, ಗ್ರಾ.ಪಂ. ಚುನಾವಣೆಯಲ್ಲಿ ನಮ್ಮನ್ನು ಲಘುವಾಗಿ ಕಂಡಿದ್ರು. ಆದ್ರೆ ಚುನಾವಣೆಯಲ್ಲಿ 16 ಸಾವಿರದಷ್ಟು ಜೆಡಿಎಸ್ ಬೆಂಬಲಿತರು ಗೆದ್ದಿದ್ದಾರೆ. ನಾವು ಯಾರಿಗೂ ಕಮ್ಮಿ ಇಲ್ಲ ಅಂತ ಗೆದ್ದವರು ತೋರಿಸಿದ್ದಾರೆ. ನಮ್ಮಲ್ಲಿ ಶಕ್ತಿ ಇದೆ, ಆದ್ರೆ ಐಕ್ಯತೆ ಇಲ್ಲ. ಸಣ್ಣ ಪುಟ್ಟ ವ್ಯತ್ಯಾಸಗಳು ಇರಬಹುದು. ಸೀಟ್ ಹಂಚಿಕೆ ವೇಳೆ ಸಣ್ಣಪುಟ್ಟ ವ್ಯತ್ಯಾಸಗಳು ಬರಬಹುದು. ಆದ್ರೆ ಅದನ್ನು ಪರಿಗಣಿಸದೆ ಐಕ್ಯತೆಯಿಂದ ಹೋರಾಡಿ. ಪಕ್ಷ ಕಟ್ಟಲು ಎಲ್ಲರೂ ಸಹಕರಿಸಿ ಎಂದು ಪಕ್ಷದ ಮುಖಂಡರಿಗೆ ದೇವೇಗೌಡರು ಮನವಿ ಮಾಡಿದರು.
ನನಗೆ ಎಲ್ಲ ಕಡೆ ಓಡಾಡಲು, ಪ್ರವಾಸ ಮಾಡಲು ಆಗಲ್ಲ. ನಾನು ಸಲಹೆ ಸೂಚನೆ ಕೊಡಬಹುದಷ್ಟೇ. ಪಕ್ಷಕ್ಕೆ ಚೈತನ್ಯ ತುಂಬಲು ಪಕ್ಷದ ರಾಜ್ಯಾಧ್ಯಕ್ಷರು, ಶಾಸಕಾಂಗ ಪಕ್ಷದ ನಾಯಕರು ರೂಪುರೇಷೆ ರೂಪಿಸಿದ್ದಾರೆ. ಪಕ್ಷಕ್ಕೆ ಮಾರ್ಗದರ್ಶನ ಮಾಡೋ ಕೆಲಸ ಮಾತ್ರ ನಾನು ಮಾಡುತ್ತೇನೆ ಎಂದರು.
ಓದಿ: ದೇವೇಗೌಡರ ಆರೋಪಕ್ಕೆ ಪ್ರತಿಕ್ರಿಯೆ ನೀಡಲು ವಿಪಕ್ಷ ನಾಯಕ ಸಿದ್ದರಾಮಯ್ಯ ನಕಾರ
ನಮ್ಮ ಮುಖಂಡರು ಯಾರೂ ನಮ್ಮನ್ನು ಬಿಟ್ಟು ಹೋಗಿಲ್ಲ, ಪಕ್ಷಕ್ಕೆ ನಿಷ್ಠೆಯಿಂದ ದುಡಿಯುತ್ತಿದ್ದಾರೆ. ರಾಯಚೂರು, ಯಾದಗಿರಿ, ಬಿಜಾಪುರಗಳಲ್ಲಿ ಶಕ್ತಿ ತುಂಬಿದ್ದಾರೆ. ಎರಡೂ ರಾಷ್ಟ್ರೀಯ ಪಕ್ಷಗಳ ವಿರುದ್ದ ಹೋರಾಟ ಮಾಡಬೇಕು ಅನ್ನೋದು ನಮ್ಮಉದ್ದೇಶ. ಈ ಪಕ್ಷ ಚುನಾವಣೆ ಬಳಿಕ ಇರೋದಿಲ್ಲ ಅಂತ ಹೇಳಿದ್ರು ಒಬ್ರು. ಯಾರೂ ಅಂತ ಹೆಸರು ಹೇಳೋದಿಲ್ಲ ನಾನು. ನಮ್ಮ ಪಕ್ಷದ ಬಗ್ಗೆ ಲಘುವಾಗಿ ಮಾತಾಡಿದ್ದಾರೆ. ಅದಕ್ಕೆ ಈಗ ನಾನು ಮಾತಾಡೋದಿಲ್ಲ ಚುನಾವಣೆ ಬಳಿಕ ಮಾತಾಡುತ್ತೇನೆ ಎಂದು ಸಿದ್ದರಾಮಯ್ಯ ಹೆಸರು ಹೇಳದೆ ಟಾಂಗ್ ನೀಡಿದರು.
ಕೇರಳದಲ್ಲಿ ಚುನಾವಣೆ ಇದೆ, ಅಲ್ಲಿ ನಮ್ಮ ಪಕ್ಷದಲ್ಲಿ ಯಾವುದೇ ತೊಂದರೆ ಇಲ್ಲ. ಮುಂದಿನ ದಿನಗಳಲ್ಲಿ ಶಾಶ್ವತವಾಗಿ ಪಕ್ಷ ಉಳಿಯಲು ಕೆಲಸ ಮಾಡೋಣ ಎಂದು ದೇವೇಗೌಡರು ಕರೆ ನೀಡಿದರು.