ಬೆಂಗಳೂರು : ಜೆಡಿಎಸ್ ಹಮ್ಮಿಕೊಂಡಿರುವ ಮಹತ್ವಾಕಾಂಕ್ಷಿ 'ಜನತಾ ಜಲಧಾರೆ' ಗಂಗಾ ರಥಯಾತ್ರೆಯ ಸಂಕಲ್ಪ ಸಮಾವೇಶ ಸೇರಿದಂತೆ ಹಲವು ವಿಚಾರಗಳ ಕುರಿತು ಚರ್ಚಿಸಲು ಮೇ 5ರಂದು ಪಕ್ಷದ ಕೋರ್ ಕಮಿಟಿ ಸಭೆ ಕರೆಯಲಾಗಿದೆ. ಪಕ್ಷದ ಕೋರ್ ಸಮಿತಿ ಅಧ್ಯಕ್ಷ, ಮಾಜಿ ಸಚಿವ ಬಂಡೆಪ್ಪ ಕಾಶೆಂಪೂರ್ ಅಧ್ಯಕ್ಷತೆಯಲ್ಲಿ ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಮೇ 5ರ ಬೆಳಗ್ಗೆ 11 ಗಂಟೆಗೆ ಸಭೆ ನಡೆಯಲಿದೆ.
ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹೆಚ್.ಡಿ. ಕುಮಾರಸ್ವಾಮಿ, ಪಕ್ಷದ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಹಾಗೂ ಪಕ್ಷದ ರಾಜ್ಯ ಸಂಸದೀಯ ಮಂಡಳಿ ಅಧ್ಯಕ್ಷ ಹೆಚ್.ಕೆ. ಕುಮಾರಸ್ವಾಮಿ ಹಾಗೂ ಪಕ್ಷದ ಕೋರ್ ಸಮಿತಿ ಸದಸ್ಯರು ಭಾಗವಹಿಸಲಿದ್ದಾರೆ. ಕೋರ್ ಸಮಿತಿಯ ಸಭೆಯಲ್ಲಿ ಮೇ 13ರಂದು ನೆಲಮಂಗಲದ ಬಳಿ ಜನತಾ ಜಲಧಾರೆ ಗಂಗಾ ರಥಯಾತ್ರೆಯ ಸಂಕಲ್ಪ ಬೃಹತ್ ಸಮಾವೇಶ ಹಾಗೂ ಪಕ್ಷದ ಸಾಂಸ್ಥಿಕ ಚುನಾವಣೆ ಬಗ್ಗೆ ಚರ್ಚೆ ನಡೆಯಲಿದೆ.
ಮೇ 8ಕ್ಕೆ ಸಂಕಲ್ಪ ಸಮಾವೇಶ ನಡೆಸಲು ಹೆಚ್.ಡಿ ಕುಮಾರಸ್ವಾಮಿ ತೀರ್ಮಾನಿಸಿದ್ದರು. ಆದರೆ, ಇದಕ್ಕಿಂತ ಶುಭ ದಿನ ಮೇ 13 ಎಂದು ಹೆಚ್.ಡಿ ರೇವಣ್ಣ ನೀಡಿದ ಸಲಹೆ ಮೇರೆಗೆ ಸಂಕಲ್ಪ ಸಮಾವೇಶದ ದಿನಾಂಕದ ಜೊತೆಗೆ ಸ್ಥಳವನ್ನೂ ಬದಲಾವಣೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಈ ಮೊದಲು ಬೆಂಗಳೂರಿನ ಅರಮನೆ ಮೈದಾನದಲ್ಲಿ ಸಂಕಲ್ಪ ಸಮಾವೇಶ ನಡೆಸಲು ಉದ್ದೇಶಿಸಲಾಗಿತ್ತು. ಆದರೆ, ಇದೀಗ ನೆಲಮಂಗಲ ಬಳಿಯ ಬೃಹತ್ ಮೈದಾನದಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ಕೋರ್ ಸಮಿತಿ ಸಭೆಯಲ್ಲಿ ಸಮಾವೇಶದ ರೂಪುರೇಷೆಗಳ ನಾಯಕರು ಸಮಾಲೋಚನೆ ನಡೆಸಲಿದ್ದಾರೆ.
ಇದನ್ನೂ ಓದಿ: ಜರ್ಮನಿಯಲ್ಲಿ ಮೋದಿ: ಐಜಿಸಿ ಸಮಾಲೋಚನೆ ನಡೆಸಿದ ಪ್ರಧಾನಿ, ಜರ್ಮನ್ ಚಾನ್ಸೆಲರ್