ಬೆಂಗಳೂರು: ಪ್ರತಿಭಟನೆ ನೆಪದಲ್ಲಿ ಸಾರ್ವಜನಿಕ ಆಸ್ತಿಪಾಸ್ತಿ ನಷ್ಟ ಮಾಡುವವರ ಆಸ್ತಿ ಮುಟ್ಟುಗೋಲು ಹಾಕುವ ಉತ್ತರ ಪ್ರದೇಶ ಮಾದರಿ ಕಾನೂನಿಗೆ ನಮ್ಮ ಪೂರ್ಣ ಸಹಮತವಿದೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದರು.
ವಿಧಾನಸೌಧದಲ್ಲಿ ಮಾತನಾಡಿದ ಅವರು, ನಾನು ಮಾತ್ರವಲ್ಲ, ಸಮೀಕ್ಷೆ ಮಾಡಿದರೆ ನೂರಕ್ಕೆ ತೊಂಭತ್ತರಷ್ಟು ಜನ ಇದನ್ನೇ ಬೆಂಬಲಿಸುತ್ತಾರೆ. ಇಂತಹ ಕಾನೂನು ತಂದರೆ ಆಸ್ತಿಪಾಸ್ತಿ ಹಾನಿ ಮಾಡುವ ಗಲಭೆಕೋರರ ಮನಸ್ಥಿತಿ ಬದಲಾಗುತ್ತದೆ ಎಂದು ಸ್ಪಷ್ಟಪಡಿಸಿದರು.
ಗೋಮಾಳ ಖರೀದಿ ಅಸಾಧ್ಯ:
ಕಪಾಲಿ ಬೆಟ್ಟದಲ್ಲಿ ಏಸು ಪ್ರತಿಮೆ ಸ್ಥಾಪನೆಗೆ ಸಾಕಷ್ಟು ವಿರೋಧ ಇದೆ. ಅದು ಗೊತ್ತಿದ್ದೂ ಕೂಡ ತಾವು ಜಾತ್ಯತೀತರು ಎಂಬ ಸಂದೇಶ ನೀಡಲು ಹಾಗೂ ಯಾರನ್ನೋ ಓಲೈಸಲು ಡಿ.ಕೆ.ಶಿವಕುಮಾರ್ ಈ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ಅವರಿಗೆ ಯಾವ ಸಮಯದಲ್ಲಿ ಏನು ಮಾಡಬೇಕು ಎಂಬುದು ಚೆನ್ನಾಗೇ ಗೊತ್ತಿದೆ. ಇನ್ನೂ ಗೋಮಾಳ ಜಮೀನು ಖರೀದಿ ಮಾಡಲು ಸಾಧ್ಯವಿಲ್ಲ. ಆದರೆ, ಡಿ. ಕೆ. ಶಿವಕುಮಾರ್ ಅದು ಹೇಗೆ 10 ಎಕರೆ ಜಾಗವನ್ನ ಖರೀದಿಸಿ ಟ್ರಸ್ಟ್ ಮೂಲಕ ಹಸ್ತಾಂತರ ಮಾಡಿದ್ದರೋ ಗೊತ್ತಿಲ್ಲ ಎಂದರು.
ಪಿಎಫ್ಐ, ಎಸ್ಡಿಪಿಐ ನಂತಹ ದೇಶದ್ರೋಹಿ ಸಂಘಟನೆಗಳ ಮೇಲಿನ ಪ್ರಕರಣ ಮುಂದುವರಿಸುವುದು ಮಾತ್ರವಲ್ಲ, ಆ ಸಂಘಟನೆಗಳನ್ನೇ ನಿಷೇಧಿಸಬೇಕು ಎಂಬುದು ನಮ್ಮ ಒತ್ತಾಯ ಎಂದು ಇದೇ ವೇಳೆ ಅಭಿಪ್ರಾಯಪಟ್ಟರು.