ಬೆಂಗಳೂರು: ಮಾಜಿ ಸಚಿವ ಡಿ ಕೆ ಶಿವಕುಮಾರ್ ವಿರುದ್ಧ ಐಟಿ ಇಲಾಖೆ ದಾಖಲಿಸಿದ್ದ ದೂರಿಗೆ ಸಂಬಂಧಿಸಿದ ವಿಚಾರಣೆ ಇಂದು ಅಧೀನ ನ್ಯಾಯಾಲಯದಲ್ಲಿ ನಡೆಯಿತು.
ಐಟಿ ಇಲಾಖೆ ಸಲ್ಲಿಸಿದ್ದ ಅರ್ಜಿ ರದ್ದು ಕೋರಿ ಡಿಕೆಶಿ ಹಾಗೂ ಅವರ ಆಪ್ತರು ಹೈಕೋರ್ಟ್ ಗೆ ಅರ್ಜಿ ಸಲ್ಲಿದ್ದರು. ಈ ಅರ್ಜಿಯನ್ನ ಕೆಲ ದಿನಗಳ ಹಿಂದೆ ಹೈಕೋರ್ಟ್ ವಜಾ ಮಾಡಿತ್ತು. ಸದ್ಯ ಈ ಸಂಬಂಧ ಮಾಜಿ ಸಚಿವ ಡಿ ಕೆ ಶಿವಕುಮಾರ್ ಖುದ್ದಾಗಿ ಇಂದು ಸಿಟಿ ಸಿವಿಲ್ ಆವರಣದಲ್ಲಿರುವ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ 4ನೇ ಪ್ರಾಸಿಕ್ಯೂಷನ್(ವಿಚಾರಣೆ)ಗೆ ಹಾಜರಾಗಿದ್ದರು.
ಅರ್ಜಿ ವಿಚಾರಣೆ ಜನಪ್ರತಿನಿಧಿಗಳ ನ್ಯಾಯಾಲಯದ ನ್ಯಾಯಾಧೀಶ ರಾಮಚಂದ್ರ ಹುದ್ದಾರ್ ಅವರ ಪೀಠದಲ್ಲಿ ಇಂದು ನಡೆದಿದ್ದು, ಈ ವೇಳೆ ವಿಚಾರಣೆಯನ್ನ ಡಿಸೆಂಬರ್12ಕ್ಕೆ ಮುಂದೂಡಿದ್ದಾರೆ.
ಡಿಕೆಶಿ, ರೆಡ್ಡಿ ಭೇಟಿ:
ಇದೇ ವೇಳೆ ಗಣಿ ಹಗರಣ ಆರೋಪಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಜನಾರ್ದನ್ ರೆಡ್ಡಿ ನ್ಯಾಯಾಲಯಕ್ಕೆ ಬಂದಿದ್ರು. ಕೋರ್ಟ್ ಆವರಣದಲ್ಲಿ ಡಿಕೆಶಿ ಹಾಗೂ ರೆಡ್ಡಿ ಮಾತುಕತೆ ನಡೆಸಿದ್ರು.
ಪ್ರಕರಣದ ಹಿನ್ನಲೆ:
ಈ ಹಿಂದೆ 2019 ರ ಮಾರ್ಚ್ 15 ರಂದು ಡಿ ಕೆ ಶಿವಕುಮಾರ್ ಮತ್ತು ತಂಡದವರು ನಾಲ್ಕನೇ ಪ್ರಕರಣ ರದ್ದಿಗಾಗಿ ಜನಪ್ರತಿನಿಧಿಗಳ ನ್ಯಾಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಇದಕ್ಕೆ ಎಪ್ರಿಲ್ 22 ರಂದು ಅಕ್ಷೇಪಣೆ ಸಲ್ಲಿಸಿದ್ದ ಐಟಿ ಇಲಾಖೆ ಪ್ರಕರಣ ರದ್ದು ಮಾಡದಂತೆ ಮನವಿ ಮಾಡಿತ್ತು. ಜೂನ್ 25 ರಂದು ವಿಚಾರಣೆ ನಡೆಸಿದ್ದ ನ್ಯಾಯಾಧೀಶ ರಾಮಚಂದ್ರ ಡಿ ಹುದ್ದಾರ್ ಅವರು ಮಾಜಿ ಸಚಿವ ಡಿಕೆಶಿಗೆ ವಿಚಾರಣೆಗೆ ಹಾಜರಾಗುವಂತೆ ಆದೇಶಿಸಿದ್ದರು.
ಡಿಕೆಶಿ ವಿರುದ್ಧ ಹವಾಲ, ಹೈಕಮಾಂಡ್ಗೆ ಕಪ್ಪ ನೀಡಿರುವ ಆರೋಪ ಮತ್ತು ತೆರಿಗೆ ವಂಚನೆ ಆರೋಪಗಳಿವೆ. ಈ ಪ್ರಕರಣಗಳನ್ನು ಕೈಬಿಡಲು ಡಿಕೆಶಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿತ್ತು. ನಂತ್ರ ಡಿಕೆಶಿ ಆ್ಯಂಡ್ ಟೀಂ ಅಧೀನ ನ್ಯಾಯಾಲಯದ ಆದೇಶ ಪ್ರಶ್ನಿಸಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದರು. ಅಲ್ಲೂ ಕೂಡ ಡಿಕೆಶಿ ಮತ್ತು ಅವರ ಆಪ್ತರಿಗೆ ಹಿನ್ನಡೆಯಾಗಿತ್ತು.
ಪ್ರಕರಣ ದಾಖಲಾಗಲು ಕಾರಣ:
2017ರ ಆಗಸ್ಟ್ನಲ್ಲಿ ಡಿಕೆಶಿ ಕಚೇರಿ, ಮನೆ, ದೆಹಲಿಯಲ್ಲಿರುವ ಫ್ಲಾಟ್ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದರು. ನಂತ್ರ 2018ರಲ್ಲಿ ಐಟಿ ಇಲಾಖೆ ಡಿಕೆಶಿ ಹಾಗೂ ಅವರ ಆಪ್ತರ ಮೇಲೆ ತೆರಿಗೆ ವಂಚನೆ ಆರೋಪದಡಿ ಸೆಕ್ಷನ್ 277, 278,193_199,12 0 ಪ್ರಕರಣ ದಾಖಲಿಸಿತ್ತು. ಸದ್ಯ ಅರ್ಜಿ ಕೈಗೆತ್ತಿಕೊಂಡಿದ್ದು, ವಿಚಾರಣೆಯನ್ನು ಡಿಸೆಂಬರ್ 12ಕ್ಕೆ ನ್ಯಾಯಾಲಯ ಮುಂದೂಡಿದೆ.