ಬೆಂಗಳೂರು: ನಗರದ ಹೊರವಲಯ ನೆಲಮಂಗಲ ಬಳಿಯ ಮಾದವಾರದಲ್ಲಿರುವ ವಿಶಾಲ ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ ಪ್ರತ್ಯೇಕೀಕರಣ (ಕ್ವಾರಂಟೈನ್) ಘಟಕ ಮತ್ತು ಕೋವಿಡ್ -19 ತುರ್ತು ಚಿಕಿತ್ಸಾ ಘಟಕ ಸ್ಥಾಪಿಸುವ ಬಗ್ಗೆ ಕ್ರಮ ಕೈಗೊಳ್ಳುವಂತೆ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.
ಈ ಸಂಬಂಧ ಪ್ರಕಟಣೆ ಹೊರಡಿಸಿರುವ ಅವರು, ವಿಶ್ವವನ್ನೇ ಬೆಚ್ಚಿಬೀಳಿಸಿರುವ ಕೊರೊನಾ ವೈರಸ್ ವ್ಯಾಪಕವಾಗಿ ಹಬ್ಬುತ್ತಿದ್ದು, ಸಾವಿರಾರು ಜನರನ್ನು ಬಲಿ ತೆಗೆದುಕೊಂಡಿದೆ. ಸೋಂಕು ತಗುಲಿದ 3 ಮತ್ತು 4ನೇ ವಾರಗಳಲ್ಲಿ ಸೋಂಕಿತರ ಸಂಖ್ಯೆ ಅತ್ಯಂತ ವೇಗವಾಗಿ ಬೆಳೆಯುತ್ತಿದೆ. ರೋಗ ಲಕ್ಷಣ ಹಲವು ದಿನಗಳ ಕಾಲ ಗೋಚರಿಸದ ಕಾರಣ ಪ್ರಸ್ತುತ ರಾಜ್ಯದಲ್ಲಿ ಎಷ್ಟು ಸೋಂಕಿತರಿದ್ದಾರೆ ಎಂಬ ಬಗ್ಗೆ ನಿಖರ ಮಾಹಿತಿ ಸಿಗುತ್ತಿಲ್ಲ. ಕೆಲವು ತಜ್ಞ ವೈದ್ಯರು ಈ ಸಂಖ್ಯೆ 1 ಲಕ್ಷ ಮುಟ್ಟುವ ಭೀತಿಯನ್ನೂ ವ್ಯಕ್ತಪಡಿಸಿರುವ ಹಿನ್ನೆಲೆ ಎಲ್ಲಾ ಸಂಭವನೀಯ ಪರಿಸ್ಥಿತಿ ಎದುರಿಸಲು ಸರ್ಕಾರ ಸನ್ನದ್ಧವಾಗಬೇಕು ಎಂದು ಒತ್ತಾಯಿಸಿದ್ದಾರೆ.
ಬೆಂಗಳೂರು ನಗರದಲ್ಲಿ ಸೋಂಕು ಪೀಡಿತ ರಾಷ್ಟ್ರಗಳಿಂದ ಬಂದಿರುವವ ಸಂಖ್ಯೆ ಅಧಿಕವಾಗಿದ್ದು, ಪ್ರಕರಣಗಳ ಸಂಖ್ಯೆಯೂ ಅಧಿಕವಾಗಿದೆ. ಈ ಹಿನ್ನೆಲೆಯಲ್ಲಿ ರೋಗ ಇತರರಿಗೆ ಹರಡದಂತೆ ತಡೆಯಲು ನೆಲಮಂಗಲ ಬಳಿ 57 ಎಕರೆ ಪ್ರದೇಶದಲ್ಲಿರುವ ವಸ್ತುಪ್ರದರ್ಶನ ಕೇಂದ್ರವನ್ನು ಸಮರ್ಪಕವಾಗಿ ಬಳಸಿಕೊಂಡು, ಅಲ್ಲಿ ತುರ್ತು ಚಿಕಿತ್ಸಾ ಘಟಕ ಸ್ಥಾಪಿಸಿ, ತಜ್ಞ ವೈದ್ಯರ ಸೇವೆ, ವೆಂಟಿಲೇಟರ್, ರೋಗ ಪತ್ತೆ ಕಿಟ್, ಪ್ರಯೋಗಾಲಯ ಸೇರಿದಂತೆ ಸಕಲ ವೈದ್ಯಕೀಯ ಸೌಲಭ್ಯ ಒದಗಿಸಬೇಕು. ಇದರಿಂದ ರೋಗಿಗಳಿಗೆ ಸೂಕ್ತ ಚಿಕಿತ್ಸೆಯೂ ಲಭಿಸುತ್ತದೆ. ಜೊತೆಗೆ ಬೆಂಗಳೂರು ನಗರದಲ್ಲಿ ರೋಗ ಹರಡದಂತೆ ತಡೆಯಲೂ ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ತಕ್ಷಣವೇ ಸರ್ಕಾರ ಸಮರೋಪಾದಿಯಲ್ಲಿ ವಸ್ತುಪ್ರದರ್ಶನ ಕೇಂದ್ರವನ್ನು ತಾತ್ಕಾಲಿಕವಾಗಿ ಕೋವಿಡ್ -19 ಚಿಕಿತ್ಸಾ ಕೇಂದ್ರವಾಗಿ ಪರಿವರ್ತಿಸುವ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.