ಬೆಂಗಳೂರು: ನಮ್ಮ ದೇಶ ಸರ್ವ ಧರ್ಮದ ನಾಡು. ಇಲ್ಲಿ ಎಲ್ಲ ಧರ್ಮದವರ ಹಬ್ಬ, ಸಂಸ್ಕೃತಿ ಆಚರಣೆ ತನ್ನದೇ ಆದ ಹಿನ್ನೆಲೆಗಳಿಂದ ಕೂಡಿದೆ. ಎಲ್ಲಾ ಧರ್ಮಗಳ ಆಚಾರ, ವಿಚಾರ ಹಬ್ಬಗಳ ಹಿನ್ನಲೆ ತಿಳಿಸುವ ಮೂಲಕ ಸರ್ವ ಧರ್ಮಗಳಲ್ಲಿ ಸಾಮರಸ್ಯ ಮೂಡಿಸುವ ಉದ್ದೇಶದಿಂದ ಯಲಹಂಕದ ಶೇಷಾದ್ರಿಪುರಂ ಪ್ರಥಮ ದರ್ಜೆ ಕಾಲೇಜಿನಲ್ಲಿ ಭಾರತೀಯ ಉತ್ಸವ ನಡೆಸಲಾಯಿತು.
ಕಳೆದ 5 ದಿನಗಳಿಂದ ಸಾಂಪ್ರದಾಯಿಕ ಹಬ್ಬಗಳ ಆಚರಣೆ ಮಾಡುವ ಮೂಲಕ ವಿದ್ಯಾರ್ಥಿಗಳು ಸಂಭ್ರಮಿಸಿದರು. ಸಂಕ್ರಾಂತಿ, ಮಹಾಶಿವರಾತ್ರಿ, ಗೌರಿಗಣೇಶ ಚತುರ್ಥಿ, ದೀಪಾವಳಿ, ನವರಾತ್ರಿ, ರಂಜಾನ್, ಹುತ್ತರಿ, ಓಣಂ, ಈದ್ ಮಿಲಾದ್ ಕ್ರಿಸ್ಮಸ್ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ಆಚರಿಸುವ ಸುಮಾರು 36 ಹಬ್ಬಗಳನ್ನು ಆಚರಿಸಲಾಯಿತು. ಇದಕ್ಕಾಗಿ ಕಾಲೇಜಿನ ವಿದ್ಯಾರ್ಥಿಗಳೇ ಸ್ವತಃ ಹಬ್ಬಗಳ ಸಿದ್ದತೆ ಮಾಡಿ ಹಬ್ಬಗಳ ವಿಶೇಷ ಉಡುಗೆಯನ್ನುಟ್ಟು, ದೇವರ ಪೂಜೆ ಮಾಡಿ ಪ್ರಸಾದ ವಿತರಣೆ ಮಾಡಿದರು.
ಶೇಷಾದ್ರಿಪುರಂ ಶಿಕ್ಷಣ ದತ್ತಿ ಕಾಲೇಜಿನ ಅಧ್ಯಕ್ಷ ಎನ್.ಆರ್ ಪಂಡಿತಾರಾಧ್ಯ, ಟ್ರಸ್ಟಿ ಅಶೋಕ್, ಸಹಾಯಕ ಪ್ರಾಧ್ಯಾಪಕಿ ಪ್ರೊ.ಎಸ್.ಭಾರತಿ ಅವರು ಹಬ್ಬಗಳ ಆಚರಣೆ ವೀಕ್ಷಿಸಿದರು. ಬಳಿಕ ವಿಶೇಷವಾಗಿ ಆಚರಿಸಿದ ವಿದ್ಯಾರ್ಥಿಗಳ ತಂಡವನ್ನು ಶ್ಲಾಘಿಸಿದರು.
ಈ ವೇಳೆ ಮಾತನಾಡಿದ ಎನ್.ಆರ್.ಪಂಡಿತಾರಾದ್ಯ, ನಮ್ಮ ದೇಶದ ಹಬ್ಬಗಳ ವಿಶೇಷತೆಯನ್ನು ಇಂದಿನ ಪೀಳಿಗೆಗೆ ತಿಳಿಸುವ ನಿಟ್ಟಿನಲ್ಲಿ ಇಂದು ಭಾರತೀಯ ಉತ್ಸವ ಆಯೋಜಿಸಲಾಗಿದೆ. ದೇಶದ ಸಂಸ್ಕೃತಿ, ಪರಂಪರೆ, ಹಬ್ಬಗಳ ಆಚರಣೆ ಬಗ್ಗೆ ತಿಳಿಸಬೇಕಿದೆ. ಈ ಹಿನ್ನೆಲೆಯಲ್ಲಿ ಕಾಲೇಜಿನ 36 ಕೊಠಡಿಗಳಲ್ಲಿ ಹಿಂದೂ, ಮುಸ್ಲಿಂ, ಕ್ರೈಸ್ತ ಸೇರಿದಂತೆ ಎಲ್ಲ ಧರ್ಮಗಳ ಹಬ್ಬ ಆಚರಣೆಗಳನ್ನು ಆಯೋಜಿಸಲಾಗಿದೆ ಎಂದರು.