ಬೆಂಗಳೂರು : ಭಾರತ ವಿಭಜನೆಯ ದುರಂತದ ಸ್ಮರಣೆಯ ದಿನ (Partition Horrors Remembrance Day)ದ ಅಂಗವಾಗಿ ನಗರದ ಕೆಂಪೇಗೌಡ ರಸ್ತೆಯ ಪುರಭವನದಲ್ಲಿ ಛಾಯಾಚಿತ್ರ ಪ್ರದರ್ಶನ ಆಯೋಜಿಸಲಾಗಿದೆ. ಶಾಲಾ ವಿದ್ಯಾರ್ಥಿಗಳು ಹಾಗೂ ವಿವಿಧ ಸಮುದಾಯದ ನಾಗರಿಕರ ಸಮ್ಮುಖದಲ್ಲಿ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹಾಗೂ ಶಾಸಕ ಉದಯ್ ಗರುಡಾಚಾರ್ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
1947ರಲ್ಲಿ ದೇಶದ ಸ್ವಾತಂತ್ರ್ಯದೊಂದಿಗೆ ಭಾರತ ವಿಭಜನೆಯಿಂದ ನೊಂದ ಲಕ್ಷಾಂತರ ಮಂದಿಯ ಸಂಕಟ ಮತ್ತು ನೋವನ್ನು ಬೆಳಕಿಗೆ ತರುವ ಸಲುವಾಗಿ ಆ.14 ರಂದು ವಿಭಜನೆಯ ದುರಂತದ ಸ್ಮರಣೆಯ ದಿನವನ್ನಾಗಿ ಆಚರಿಸಲಾಗುತ್ತಿದೆ. ಇದರ ಅಂಗವಾಗಿ ಆಯೋಜಿಸಿರುವ ಪ್ರದರ್ಶನದಲ್ಲಿ ಒಟ್ಟು 52 ಛಾಯಾಚಿತ್ರಗಳು ಹಾಗೂ ಆ ಸಂದರ್ಭದ ಬರಹಗಳನ್ನು ಪ್ರದರ್ಶನದಲ್ಲಿ ಇಡಲಾಗಿದೆ. ದಕ್ಷಿಣ ವಲಯ ಆಯುಕ್ತ ಜಯರಾಮ ರಾಯಪುರ ಹಾಗೂ ಇನ್ನಿತರ ಗಣ್ಯರು ಈ ಪ್ರದರ್ಶನದಲ್ಲಿ ಪಾಲ್ಗೊಂಡಿದ್ದರು.
ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಶಾಸಕ ಉದಯ್ ಗರುಡಾಚಾರ್ , ಇಂಥದೊಂದು ಪ್ರಯತ್ನ ಈ ಹಿಂದೆ ಎಲ್ಲಿಯೂ ನಡೆದಿಲ್ಲ. ಒಂದು ಅಪರೂಪದ ಸನ್ನಿವೇಶಕ್ಕೆ ನಾವೆಲ್ಲ ಸಾಕ್ಷಿಯಾಗಿದ್ದೇವೆ. ಭಾರತ ಪಾಕಿಸ್ತಾನ ಮತ್ತಿತರ ದೇಶಗಳು ಸೇರಿ ಹಿಂದೆ ಭಾರತ ಅಖಂಡ ರಾಷ್ಟ್ರವಾಗಿತ್ತು. ಇಲ್ಲಿ ಆಡಳಿತ ನಡೆಸಿ ಬ್ರಿಟಿಷರು ಬಿಟ್ಟು ಹೋಗುವ ಸಂದರ್ಭ ಭಾರತವನ್ನು ವಿಭಜನೆ ಮಾಡಿ ತೆರಳಿದರು. ಇದು ಬಹಳ ದುಃಖಕರವಾದ ಸಂಗತಿ.
ಈ ವಿಭಜನೆ ಆಗದಿದ್ದರೆ ನಾವು ಇಂದು ಅಮೆರಿಕ ಹಾಗೂ ರಷ್ಯಾಗಿಂತ ದೊಡ್ಡ ಹಾಗೂ ಸೂಪರ್ ಪವರ್ ರಾಷ್ಟ್ರವಾಗಿ ಹೊರಹೊಮ್ಮುತ್ತಿದ್ದೆವು. ವಿಭಜನೆ ಆಗಿದೆ ಈಗ ಇನ್ನೇನು ಮಾಡಲು ಸಾಧ್ಯವಿಲ್ಲ. ಈ ಒಂದು ಸಂದರ್ಭದ ಅರಿವು ಈಗಿನವರಿಗೆ ಇಲ್ಲ. ಹಾಗಾಗಿ ಛಾಯಾ ಚಿತ್ರ ಪ್ರದರ್ಶನವನ್ನು ವೀಕ್ಷಿಸಿ ಒಂದಿಷ್ಟು ಜ್ಞಾನ ಪಡೆದುಕೊಳ್ಳಿ ಎಂದು ಸಲಹೆ ನೀಡಿದರು.
ಬಳಿಕ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಮಾತನಾಡಿ, ದೇಶ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಆಚರಿಸಿಕೊಳ್ಳುತ್ತಿರುವುದು ಬಹಳ ಸಂತಸದ ವಿಚಾರ. ಆದರೆ, ಇದಕ್ಕೆ ಒಂದು ದಿನ ಮುನ್ನ ದೇಶದ ವಿಭಜನೆ ಆಗಿತ್ತು. ಸಾಕಷ್ಟು ಜನ ತಮ್ಮ ಮನೆಮಠವನ್ನ ಬಿಟ್ಟು ಪ್ರತ್ಯೇಕವಾಗಿ ಬದುಕಬೇಕಾದ ಸ್ಥಿತಿ ನಿರ್ಮಾಣವಾಗಿತ್ತು. ಯಾವುದೇ ತಪ್ಪು ಮಾಡದಿದ್ದರೂ ಜನ ವಿಭಜನೆಯಲ್ಲಿ ತಮ್ಮ ತಮ್ಮ ನೆಲವನ್ನು ಕಳೆದುಕೊಂಡು ಬೇರೆಡೆ ಬಂದು ವಾಸಿಸುವ ಅನಿವಾರ್ಯ ಎದುರಾಯಿತು. ಸಾಕಷ್ಟು ನೋವನ್ನು ಜನ ಅನುಭವಿಸಿದ್ದರು.
ಈ ಹಿನ್ನೆಲೆ ಸ್ವಾತಂತ್ರ್ಯದ ಸಂಭ್ರಮದ ಜೊತೆ ಈ ಒಂದು ನೋವಿನ ದಿನವನ್ನು ನಾವು ಆಚರಿಸುವ ಸ್ಥಿತಿ ಎದುರಾಗಿದೆ. ಸ್ವಾತಂತ್ರ್ಯಕ್ಕಾಗಿ ಹೋರಾಡಿದವರ ನೆನಪು ಯಾವ ರೀತಿ ಮಾಡಿಕೊಳ್ಳಬೇಕು. ಅದೇ ರೀತಿ ತಮ್ಮ ತಮ್ಮ ಮನೆ ಜಮೀನು ಕಳೆದುಕೊಂಡ ಜನರ ಬಗ್ಗೆ ನಾವು ಅನುಕಂಪ ಹೊಂದಬೇಕು. ಕೇಂದ್ರ ಹಾಗೂ ರಾಜ್ಯ ಸರ್ಕಾರ ಸೇರಿ ಇಡೀ ದೇಶಾದ್ಯಂತ ಇಂತಹದೊಂದು ಪ್ರದರ್ಶನವನ್ನು ಆಯೋಜಿಸುತ್ತಿದ್ದೇವೆ. ದೇಶವನ್ನು ಈಗಲೂ ವಿಭಜನೆ ಮಾಡಬೇಕು ಎಂದು ಹೇಳುವ ಕಿಡಿಗೇಡಿಗಳು ಇದ್ದಾರೆ. ಆದರೆ ನಾವು ಒಂದಿನ ವಿಭಜನೆಯ ನೋವನ್ನು ನೆನಪಿಸಿಕೊಳ್ಳಬೇಕು ಎಂದು ಹೇಳಿದರು.
ಇದನ್ನೂ ಓದಿ : ದೇಶದ ಅತಿ ಎತ್ತರದ ಧ್ವಜಸ್ತಂಭದ ಮೇಲೆ ಧ್ವಜಾರೋಹಣ ನೇರವೆರಸಿದ ಶಾಸಕ ಅನಿಲ್ ಬೆನಕೆ..!