ಬೆಂಗಳೂರು: ಐಎಂಎ ಕಂಪನಿ ಬಹುಕೋಟಿ ವಂಚನೆ ಪ್ರಕರಣದ 25 ನೇ ಆರೋಪಿ ಖಲೀಲ್ಮುಲ್ಲಾ ಜಮಾನ್ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದು, ಆಕ್ಷೇಪಣೆ ಸಲ್ಲಿಸಲು ಸಿಬಿಐಗೆ ಹೈಕೋರ್ಟ್ ಆದೇಶಿಸಿದೆ.
ಮನ್ಸೂರ್ ಖಾನ್ನಿಂದ ಹಣ ಪಡೆದು ಆಸ್ತಿ ಖರೀದಿ ಮಾಡಿದ ಆರೋಪ ಪ್ರಕರಣದಲ್ಲಿ ಎಸ್.ಐ.ಟಿ ಖಲೀಲ್ಮುಲ್ಲಾ ಜಮಾನ್ ಅವರನ್ನು ಬಂಧಿಸಿತ್ತು. ಹೀಗಾಗಿ 25 ನೇ ಆರೋಪಿಯಾಗಿರುವ ಜಮಾನ್ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದು ನ್ಯಾಯಾಲಯದಲ್ಲಿ ಇಂದು ಅರ್ಜಿ ವಿಚಾರಣೆ ನಡೆಯಿತು.
ಅರ್ಜಿಯನ್ನು ಪರಿಗಣಿಸಿದ ನ್ಯಾಯಾಲಯ ಈಗಾಗಲೇ ಪ್ರಕರಣವನ್ನು ರಾಜ್ಯ ಸರ್ಕಾರ ಸಿಬಿಐಗೆ ಹಸ್ತಾಂತರ ಮಾಡಿರುವ ಕಾರಣ, ತನಿಖೆ ನಡೆಸುತ್ತಿರುವ ಸಿಬಿಐಗೆ ನೋಟಿಸ್ ಜಾರಿ ಮಾಡಿ ಜಾಮೀನು ಅರ್ಜಿಗೆ ಆಕ್ಷೇಪಣೆ ಸಲ್ಲಿಕೆ ಮಾಡುವಂತೆ ಸೂಚಿಸಿ ವಿಚಾರಣೆಯನ್ನ ಅಕ್ಟೋಬರ್ 9 ಕ್ಕೆ ಮುಂದೂಡಿದೆ.
ಏನಿದು ಪ್ರಕರಣ: ಐಎಂಎ ಬಹುಕೋಟಿ ವಂಚನೆ ಪ್ರಕರಣದ ತನಿಖೆ ನಡೆಸಿದ ಎಸ್.ಐ.ಟಿ ಪ್ರಕರಣದ ಪ್ರಮುಖ ಆರೋಪಿ ಮನ್ಸೂರ್ ಖಾನ್ನಿಂದ ಹಣ ಹಾಗೂ ಆಸ್ತಿ ಮಾಡಿದವರ ಪಟ್ಟಿ ತಯಾರು ಮಾಡಿದಾಗ ಖಲೀಲ್ಮುಲ್ಲಾ ಜಮಾನ್ ಪ್ರಮುಖ ಆರೋಪಿಯಾಗಿದ್ದು, ಮನ್ಸೂರ್ ನಿಂದ ಹಣ ಪಡೆದು ಪತ್ನಿ ಹೆಸರಲ್ಲಿ ಆಸ್ತಿ ಖರೀದಿ ಮಾಡಿದ ಆರೋಪದ ಮೇರೆಗೆ ಈತನನ್ನ ಬಂಧಿಸಲಾಗಿತ್ತು.