ಬೆಂಗಳೂರು: ಐಎಂಎ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿ ಅಧಿಕಾರಿಗಳು ತನಿಖೆ ಚುರುಕುಗೊಳಿಸಿದ್ದು, ವಂಚನೆಯಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಪೊಲೀಸ್ ಅಧಿಕಾರಿಗಳು ಹಾಗೂ ರಾಜಕಾರಣಿಗಳನ್ನ ವಿಚಾರಣೆಗೆ ಒಳಪಡಿಸಿದ್ದಾರೆ.
ಎರಡು ದಿನದ ಹಿಂದೆ ಡಿಸಿಪಿ ಅಜಯ್ ಹೀಲೋರಿ ಅವರನ್ನು ವಿಚಾರಣೆಗೆ ಒಳಪಡಿಸಿ ತನಿಖೆಗೆ ಬೇಕಾದ ವಿಚಾರಗಳನ್ನ ಪತ್ತೆ ಹಚ್ಚಿದ್ರು. ಡಿಸಿಪಿ ಆದ ನಂತರ ಇಬ್ಬರು ಪೊಲೀಸ್ ಅಧಿಕಾರಿಗಳಾದ ಎಸಿಪಿ ರಮೇಶ್ ಕುಮಾರ್, ಇನ್ಸ್ಪೆಕ್ಟರ್ ರಮೇಶ್ ಎಸ್ಐಟಿ ಮುಂದೆ ಹಾಜರಾಗಿ ಐಎಂಎ ಕುರಿತು ಕೆಲ ವಿಚಾರ ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ.
ಈ ಹಿಂದೆ ಪುಲಕೇಶಿ ನಗರದ ಎಸಿಪಿ ಆಗಿದ್ದ ರಮೇಶ್ ಕುಮಾರ್ ಜೊತೆಗೆ ಈ ಹಿಂದೆ ಕಮರ್ಷಿಯಲ್ ಸ್ಟ್ರೀಟ್ ಇನ್ಸ್ಪೆಕ್ಟರ್ ಆಗಿದ್ದ ರಮೇಶ್ ಅವರನ್ನು ಕೂಡ ವಿಚಾರಣೆಗೆ ಬರುವಂತೆ ಎಸ್ಐಟಿ ತಿಳಿಸಿತ್ತು. ವಿಚಾರಣೆಗೆ ಹಾಜರಾದ ಇನ್ಸ್ಪೆಕ್ಟರ್ ರಮೇಶ್ ಹಾಗೂ ಎಸಿಪಿ ರಮೇಶ್ ತಮ್ಮ ಹೇಳಿಕೆಯನ್ನ ಎಸ್ಐಟಿ ಮುಂದೆ ನೀಡಿದ್ದಾರೆ.
ಈ ಹಿಂದೆ ಕಮರ್ಷಿಯಲ್ ಸ್ಟ್ರೀಟ್ ಇನ್ಸ್ಪೆಕ್ಟರ್ ಆಗಿದ್ದ ರಮೇಶ್ 2018ರಲ್ಲಿ ವಂಚಕ ಮನ್ಸೂರ್ ಖಾನ್ ಬಳಿ ಲಂಚದ ಹಣ ಪಡೆದಿರುವ ಆರೋಪ ಹಿನ್ನೆಲೆಯಲ್ಲಿ ಎಸ್ಐಟಿ ಅಧಿಕಾರಿಗಳು ನೋಟಿಸ್ ನೀಡಿ ವಿಚಾರಣೆಗೆಂದು ಕರೆದಿದ್ರು. ಇನ್ನು ಅಂದಿನ ಡಿಸಿಪಿಯಾಗಿದ್ದ ಅಜಯ್ ಹಿಲೋರಿ ಒತ್ತಡದಿಂದ ಮನ್ಸೂರ್ನನ್ನು ಸಮರ್ಪಕವಾಗಿ ತನಿಖೆ ನಡೆಸಲು ಹಿಂದೇಟು ಹಾಕಿದ್ದಾರೆ ಅನ್ನೋ ಆರೋಪ ಕೂಡ ಇದೆ.
ಮತ್ತೊಂದೆಡೆ ಶಿವಾಜಿನಗರದ ಅನರ್ಹ ಶಾಸಕ ರೋಷನ್ ಬೇಗ್ ನಿನ್ನೆ ವಿಚಾರಣೆಗೆ ಗೈರಾಗಿದ್ದಾರೆ. ಹಲವು ಬಾರಿ ಅನಾರೋಗ್ಯದ ನೆಪವೊಡ್ಡಿ ವಿಚಾರಣೆಗೆ ಬರದೆ ಎಸ್ಐಟಿ ಅಧಿಕಾರಿಗಳ ಕೋಪಕ್ಕೆ ರೋಷನ್ ಬೇಗ್ ಗುರಿಯಾಗಿದ್ದರು. ಹಾಗಾಗಿ ಎಸ್ಐಟಿ ಇನ್ನೊಂದು ನೋಟಿಸ್ ಜಾರಿ ಮಾಡುವ ಸಾಧ್ಯತೆ ಇದೆ.