ಬೆಂಗಳೂರು: ನಾನು ಏನಾದರೂ ಕಮಿಷನ್ ಕೇಳಿದ್ರೆ, ಇವತ್ತೇ ರಾಜಕೀಯದಿಂದ ನಿವೃತ್ತಿ ಆಗುವೆ. ಬಸವರಾಜ ಬೊಮ್ಮಾಯಿ ಆಗ್ತಾರಾ? ಅಥವಾ ಆರ್ ಅಶೋಕ್ ಅವರು ನಿವೃತ್ತಿ ಆಗ್ತಾರಾ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಸವಾಲು ಹಾಕಿದ್ದಾರೆ. ಸದಾಶಿವನಗರದಲ್ಲಿ ಮಾತನಾಡಿದ ಅವರು, ಕಾಂಟ್ರಾಕ್ಟರ್ ಅಸೋಸಿಯೇಷನ್ ಸುದ್ದಿಗೋಷ್ಠಿ ವಿಚಾರವಾಗಿ ಪ್ರತಿಕ್ರಿಯಿಸಿ, ಅವರೆಲ್ಲ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಾತನಾಡಬೇಕು. ಅವರ ಪಕ್ಷದ ನಾಯಕರೂ ತನಿಖೆ ಮಾಡಿ ಎಂದು ನಮ್ರತೆಯಿಂದ ಮನವಿ ಮಾಡಿದ್ರು. ಕೆಲಸ ಮಾಡಿದವರ ಬಿಲ್ ಅವರು ಏಕೆ ಕೊಡಲಿಲ್ಲ? ಎಂದು ಪ್ರಶ್ನಿಸಿದರು.
ಕಾಂಟ್ರಾಕ್ಟರ್ಗಳು ಯಾರಿಗೆ ಎಷ್ಟು ಕೊಟ್ಟಿದಾರೆ ಎಂದು ಚರ್ಚೆ ಮಾಡಲು ಹೋಗಲ್ಲ. 10 ರಿಂದ 15 ಪರ್ಸೆಂಟ್ ಕಮಿಷನ್ ಕೇಳಿದ್ರು ಅಂತಾರೆ, ಯಾರು ಕೇಳಿದ್ರು? ಡಿಕೆಶಿ ಕೇಳಿದ್ರಾ, ಸಿದ್ದರಾಮಯ್ಯನವರು, ಅಥವಾ ಯಾವುದಾದರು ಶಾಸಕರು, ಸಚಿವರು ಕೇಳಿದರಾ? ಮೊದಲು ಅದನ್ನು ಹೇಳಲಿ. ನಾನು ಏನಾದರೂ ಕಮಿಷನ್ ಕೇಳಿದ್ದರೆ, ಇವತ್ತೇ ರಾಜಕೀಯದಿಂದ ನಿವೃತ್ತಿ ಆಗುತ್ತೇನೆ. ಅದೇ ರೀತಿ ಬೊಮ್ಮಾಯಿ ಅಥವಾ ಆರ್ ಅಶೋಕ್ ಅವರು ರಾಜಕೀಯದಿಂದ ನಿವೃತ್ತಿ ಆಗ್ತಾರಾ? ಎಂದು ಸವಾಲು ಹಾಕಿದರು.
ಅಶೋಕ ಮಾತಾಡಿದ್ದು ನೋಡಿದ್ದೇನೆ. ಒಂದು ಕಾಲು ಲಕ್ಷ ವೋಟ್ನಲ್ಲಿ ಸೋತು ಡೆಪಾಸಿಟ್ ಕಳ್ಕೊಂಡು ಇನ್ನೇನು ಆಗಬೇಕು?. ಎಂದು ಏಕವಚನದಲ್ಲೇ ವಾಗ್ದಾಳಿ ನಡೆಸಿದ ಡಿಕೆಶಿ, ಅಶೋಕ ಚಕ್ರವರ್ತಿ ಪ್ರಶ್ನೆ ಕೇಳ್ತಿದ್ನಲ ಇದಕ್ಕೆ ಉತ್ತರ ಕೊಡ್ಲಿ ಎಂದು ಹೇಳದರು. ಅಜ್ಜಯ್ಯನ ಸನ್ನಿಧಿಯಲ್ಲಿ ಆಣೆಗೆ ಆಹ್ವಾನ ವಿಚಾರವಾಗಿ ಪ್ರತಿಕ್ರಿಯಿಸಿ, ರಸ್ತೆಯಲ್ಲಿ ಹೋಗುವವರ ಪ್ರಶ್ನೆಗೆಲ್ಲ ಉತ್ತರ ಕೊಡಲ್ಲ. ಎಲ್ಲಿ ಉತ್ತರ ಕೊಡಬೇಕೋ ಅಲ್ಲಿ ಕೊಡುವೆ ಎಂದು ಹೇಳಿದರು.
ಮೊನ್ನೆ ಮೊನ್ನೆವರೆಗೆ ಬಸವರಾಜ ಬೊಮ್ಮಾಯಿ ಅವರ ಸರ್ಕಾರ ಅಧಿಕಾರದಲ್ಲಿತ್ತು. ಅವರ ಅಧಿಕಾರವಧಿಯಲ್ಲಿ ಯಾಕೆ ಬಿಲ್ ಕೊಟ್ಟಿಲ್ಲ? ಅವರ ಬಳಿ ಹಣ ಇರಲಿಲ್ಲವಾ, ಅಥವಾ ಕೆಲಸ ಸರಿ ಇರಲಿಲ್ಲವಾ? ಬಿಜೆಪಿ ನಾಯಕರು ನಿಮ್ಮ ಅವಧಿಗೆ ಯಾಕೆ ಬಿಲ್ ಕ್ಲಿಯರ್ ಮಾಡ್ಲಿಲ್ಲ? ಮೊದಲು ಅವರು ಉತ್ತರ ಕೊಡಬೇಕು. ಕೆಲಸ ಮಾಡಿಸಿದ್ದು ಅವರು. ಈಗ ಬಿಲ್ ಕೊಡುವ ಬಗ್ಗೆ ನಮ್ಮ ಮೇಲೆ ಆರೋಪ ಮಾಡುತ್ತಿದ್ದಾರೆ. ಅವರನ್ನು ಬಿಲ್ ಕೊಡದಂತೆ ಯಾರು ನಿಲ್ಲಿಸಿದ್ದರು ಎಂದು ಪ್ರಶ್ನಿಸಿದರು.
ಈಗ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಕೆಂಪಣ್ಣ ಅವರ ಮನವಿ ಹಾಗೂ ಅವರ ಪಾರ್ಟಿಯ ಕೆಲವು ಶಾಸಕರು ನಮ್ರತೆಯಿಂದ ಮನವಿ ಮಾಡಿಕೊಂಡ ಮೇಲೆ ತನಿಖೆ ಮಾಡಲು ಒಂದು ಕಮಿಟಿಯನ್ನು ಮಾಡಿದ್ದೇವೆ. ಕೆಲಸ ಆಗಿದೆಯೋ ಇಲ್ಲವೋ ಎಂಬುದನ್ನು ಪರಿಶೀಲನೆ ಮಾಡಲು, ನೈಜತೆಯನ್ನು ಪರಿಶೀಲಿಸಲು ಐಎಎಸ್ ಅಧಿಕಾರಿಗಳನ್ನೊಳಗೊಂಡ ಒಂದು ಕಮಿಟಿಯನ್ನು ಮಾಡಲಾಗಿದೆ. ನಾಲ್ಕರಿಂದ ಐದು ವರ್ಷ ಕಾದಿದ್ದೀರಿ, ಈಗ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದೊಡನೆ ಯಾಕೆ ಇಷ್ಟೊಂದು ಅರ್ಜೆಂಟ್ ಮಾಡ್ತಾ ಇದ್ದೀರಿ ಎಂದು ಡಿ ಕೆ ಶಿವಕುಮಾರ್ ಪ್ರಶ್ನಿಸಿದರು.
ಇದನ್ನೂ ಓದಿ : ಪೇ ಕಾಂಗ್ರೆಸ್, ಪೇ ಸಿಎಂ, ಪೇ ಡಿಸಿಎಂ ಮೂಲಕ ಲೋಕಸಭೆ ಚುನಾವಣೆಗೆ ಫಂಡ್ ಕಲೆಕ್ಷನ್: ಆರ್.ಅಶೋಕ್