ಬೆಂಗಳೂರು: ರಾಜ್ಯ ಬಿಜೆಪಿ ಸರ್ಕಾರದ 100 ಸಾಧನೆ ಬಗ್ಗೆ ನಾನು ಮಾತನಾಡಲ್ಲ. ಸರ್ಕಾರಕ್ಕೆ ಬೈದರೆ ಏನೂ ಪ್ರಯೋಜನವಿಲ್ಲ. ಪ್ರವಾಹ ಸಂತ್ರಸ್ತ ಜನರಿಗೆ ಶಾಶ್ವತ ಪರಿಹಾರ ಸಿಗಬೇಕು ಅನ್ನೋದು ನನ್ನ ಒತ್ತಾಯ ಎಂದು ಮಾಜಿ ಸಚಿವ ಎಂ.ಬಿ. ಪಾಟೀಲ್ ಹೇಳಿದ್ರು.
ಸದಾಶಿವನಗರದಲ್ಲಿರುವ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ಸರ್ಕಾರಕ್ಕೆ ನೂರು ದಿನಗಳೇ ಆಗಲಿ, ಸಾವಿರ ದಿನವೇ ಆಗಲಿ, ನೆರೆ ಪೀಡಿತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ದೊರಕಿಸಿ ಕೊಡಲಿ. ಕಳೆದ ನೂರು ದಿನಗಳಲ್ಲಿ ಈ ಬಗ್ಗೆ ಸರ್ಕಾರ ಗಮನ ಕೊಟ್ಟಿಲ್ಲ. ಇನ್ನೂ ಮುಂದಾದ್ರೂ ಈ ಬಗ್ಗೆ ಗಮನ ಕೊಡಲಿ. ನಾನು ಇದರಲ್ಲಿ ರಾಜಕೀಯ ಮಾಡುವುದಕ್ಕೆ ಹೋಗಲ್ಲ ಎಂದರು.
ಕಣ್ವ ವಂಚನೆ ವಿಚಾರ ಪ್ರಸ್ತಾಪ:
ಕಣ್ವ ಸಂಸ್ಥೆ ನಡೆಸಿದೆ ಎನ್ನಲಾದ ಬಹುಕೋಟಿ ರೂಪಾಯಿ ವಂಚನೆ ಪ್ರಕರಣ ಕುರಿತು ಪ್ರತಿಕ್ರಿಯಿಸಿ, ನಾನು ಗೃಹ ಸಚಿವನಾಗಿದ್ದಾಗ ಸಾಕಷ್ಟು ಕಂಪೆನಿಗಳ ಮೇಲೆ ದೂರು ಬಂದಿತ್ತು. ಐಎಂಎ ಸೇರಿದಂತೆ ಹಲವು ಸಂಸ್ಥೆಗಳ ಮೇಲೆ ಆರೋಪಗಳು ಕೇಳಿ ಬಂದಿದ್ವು. ನಮ್ಮ ಅಧಿಕಾರಿಗಳು ಈ ಬಗ್ಗೆ ಪರಿಶೀಲನೆ ಮಾಡುತ್ತಾರೆ. ಜನರು ಈ ರೀತಿಯ ನಕಲಿ ಕಂಪನಿಗಳಿಂದ ಮೋಸ ಹೋಗುತ್ತಿದ್ದಾರೆ. ಕೇಂದ್ರ, ರಾಜ್ಯ ಸರ್ಕಾರ ಇಂಥ ಸಂಸ್ಥೆಗಳ ವಿರುದ್ಧ ಕ್ರಮ ತೆಗದುಕೊಳ್ಳಬೇಕು. ಎಲ್ಲ ರಾಜ್ಯದ ಮುಖ್ಯಮಂತ್ರಿಗಳ ಸಭೆ ಕರೆದು ಚರ್ಚೆ ಮಾಡಬೇಕು ಎಂದು ಸಲಹೆ ಕೊಟ್ಟರು.
ಸಿಎಂ ಆಗುವ ಕನಸು:
ನಾನು ಮುಖ್ಯಮಂತ್ರಿಯಾಗಬೇಕೆಂದು ಕನಸು ಕಂಡವನು. ನನ್ನ ಮೇಲೆ ಇಲ್ಲಸಲ್ಲದ ಆರೋಪ ಮಾಡಬೇಡಿ. ಮುಖ್ಯಮಂತ್ರಿಯಾಗಲು ನಾನು ಸಮರ್ಥನಿದ್ದೇನೆ ಎಂದು ಇದೇ ವೇಳೆ ಅವರು ಮನದಿಂಗಿತ ವ್ಯಕ್ತಪಡಿಸಿದ್ರು.