ಬೆಂಗಳೂರು: ಲೋಕಸಭಾ ಫಲಿತಾಂಶ ನಮಗೆ ಆಶ್ಚರ್ಯ ತಂದಿದೆ. ಈ ಫಲಿತಾಂಶದ ನೈತಿಕ ಹೊಣೆ ಹೊರುತ್ತೇನೆ, ಪಕ್ಷ ಹಾಗೂ ಹೈಕಮಾಂಡ್ ಕೈಗೊಳ್ಳುವ ನಿರ್ಧಾರಕ್ಕೆ ಬದ್ಧವಾಗಿರುತ್ತೇನೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಅಧ್ಯಕ್ಷ ಸ್ಥಾನಕ್ಕೆ ಅದರದ್ದೇ ಆದ ಶಿಷ್ಟಾಚಾರ ಮುಖ್ಯ. ನನಗೆ ಇದೇ ಸ್ಥಾನದಲ್ಲಿ ಕೂರಬೇಕೆಂಬ ಆಶಯವಿಲ್ಲ. ಪಕ್ಷದ ಶಿಸ್ತಿನ ಸಿಪಾಯಿ ನಾನು. ಇಲ್ಲಿನ ಎಲ್ಲಾ ವಿಚಾರವನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿಯವರಿಗೆ ಸಂಪೂರ್ಣ ವಿವರ ನೀಡುತ್ತೇನೆ ಎಂದರು.
ಪಕ್ಷದ ಹೈಕಮಾಂಡ್ ನಾನು ಕೊಡುವ ವರದಿ ಹಾಗೂ ಮಾಹಿತಿ ಆಧರಿಸಿ ಮುಂದಿನ ನಿರ್ಧಾರ ಕೈಗೊಳ್ಳಲಿದೆ. ಕಡಿಮೆ ಸ್ಥಾನ ಬಂದಿದೆ. ಇಷ್ಟು ಕಡಿಮೆ ಸ್ಥಾನ ಗೆಲ್ತೀವಿ ಅಂದುಕೊಂಡಿರಲಿಲ್ಲ. ನಾವು ಕನಸು ಮನಸಿನಲ್ಲೂ ಈ ರೀತಿ ರಿಸಲ್ಟ್ ಬರುತ್ತೆ ಎಂದು ಕೊಂಡಿರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಕೆಪಿಸಿಸಿ ಅಧ್ಯಕ್ಷನಾಗಿ ನನಗೆ ಪಕ್ಷ ಎಲ್ಲಾ ಅಧಿಕಾರ ಹಾಗೂ ಜವಾಬ್ದಾರಿ ನೀಡಿತ್ತು. ಎಕ್ಸ್ಪೆರಿಮೆಂಟ್ ನಡೆಸುವ ಅವಕಾಶವನ್ನು ರಾಹುಲ್ ಗಾಂಧಿ ನೀಡಿದ್ರು. ನಂತರ ನಮ್ಮ ಪಕ್ಷದ ಮುಖಂಡರನ್ನು ಒಗ್ಗೂಡಿಸಿ ಒಟ್ಟಾಗಿ ಹೋಗುವ ಕೆಲಸ ಮಾಡಿದ್ವಿ. ಬಿಜೆಪಿ ಅವರು ಮೈತ್ರಿ ಹೊಡೆಯುವ ಕೆಲಸ ಕೂಡ ಮಾಡುತ್ತಿದ್ರು. ಈ ಫಲಿತಾಂಶದಲ್ಲಿ ನಮಗೆ ಆದ ಸೋಲಿನ ಹೊಣೆ ನನ್ನದೆ. ಅಧ್ಯಕ್ಷನಾಗಿ ಸೋಲಿನ ನೈತಿಕ ಹೊಣೆಯನ್ನ ನಾನು ಹೊತ್ತುಕೊಳ್ಳುತ್ತಿದ್ದೇನೆ ಎಂದು ಪುನರುಚ್ಚರಿಸಿದರು.
ಚುನಾವಣೆಯ ಫಲಿತಾಂಶ, ಪ್ರಚಾರ, ಏಕೆ ಹೆಚ್ಚು ಸೀಟ್ ಗೆಲ್ಲುವುದಕ್ಕೆ ಆಗಲಿಲ್ಲ ಎಂಬುದರ ಕಾರಣವನ್ನು ನಾನು ಎಐಸಿಸಿ ಅಧ್ಯಕ್ಷರಿಗೆ ಮಾಹಿತಿ ಕೊಡುತ್ತಿದ್ದೇನೆ. ಅವರು ಮುಂದೆ ಯಾವುದೇ ತೀರ್ಮಾನ ತೆಗೆದುಕೊಂಡರು ಒಪ್ಪಿಕೊಳ್ಳುತ್ತೇನೆ ಎಂದರು.
ಈ ಫಲಿತಾಂಶವನ್ನು ಗೌರವಿಸುತ್ತೇನೆ. ಬಿಜೆಪಿಗೆ ಅಭಿನಂದನೆ, ಪ್ರಧಾನಿ ಮೋದಿಗೂ ಅಭಿನಂದನೆ ಸಲ್ಲಿಸುತ್ತೇನೆ. ಫಲಿತಾಂಶ ನಮಗೆ ಆಶ್ಚರ್ಯ ತಂದಿದೆ. ಒಂದೇ ಕ್ಷೇತ್ರದಲ್ಲಿ ಮಾತ್ರ ಗೆದ್ದಿದ್ದೇವೆ. ಕನಸಿನಲ್ಲಿ ಕೂಡ ಅಂದುಕೊಂಡಿರಲಿಲ್ಲ. ಪ್ರಜಾಪ್ರಭುತ್ವದಲ್ಲಿ ಜನರ ತೀರ್ಪನ್ನ ಗೌರವಿಸಬೇಕು. ಪ್ರಜಾಪ್ರಭುತ್ವ ಉಳಿಸುವ ಕೆಲಸ ಕಾಂಗ್ರೆಸ್ ಮಾಡಲಿದೆ. ರಾಜಕೀಯದಲ್ಲಿ ಸೋಲು, ಗೆಲುವು ಇರುತ್ತದೆ. ಸೋತರೂ ನಮ್ಮ ಸಿದ್ಧಾಂತ ಮುಂದುವರಿಯಲಿದೆ. ಪಕ್ಷವನ್ನು ಮತ್ತಷ್ಟು ಬಲಪಡಿಸಲು ಶ್ರಮಿಸುತ್ತೇವೆ ಎಂದರು.