ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಕೊರೊನಾ ಪೀಡಿತರ ನರಕಯಾತನೆ ಮುಂದುವರೆದಿದೆ. ಸೋಂಕಿನಿಂದ ಚಿಕಿತ್ಸೆಗೆ ಒಳಗಾದ ಕೋವಿಡ್ ವಾರಿಯರ್ಗೆ ಆಸ್ಪತ್ರೆಯ ಸಿಬ್ಬಂದಿ ತಪಾಸಣೆಯ ಕಿಂಚಿತ್ತು ಮಾಹಿತಿ ನೀಡದೆ, ಏಕಾಏಕಿ ಶವ ಒಯ್ಯುವಂತೆ ಫೋನ್ ಕರೆ ಮಾಡಿದ್ದಾರೆ ಎಂದು ಆರೋಪ ಕೇಳಿ ಬಂದಿದೆ.
ಧರ್ಮರಾಯ ದೇವಸ್ಥಾನ ವಾರ್ಡ್ ಕೊರೊನಾ ಎರಡನೇ ಅಲೆಗೆ ಭೀಕರವಾಗಿ ತುತ್ತಾಗಿದೆ. ನಗರತ್ ಪೇಟೆಯಲ್ಲಿ 105ಕ್ಕೂ ಹೆಚ್ಚು ಪಾಸಿಟಿವ್ ಕೇಸ್ಗಳು ದೃಢಪಟ್ಟಿವೆ. ನಿತ್ಯ ಕೋವಿಡ್ ಪರೀಕ್ಷೆ, ಸೋಂಕಿತರ ಕ್ವಾರಂಟೈನ್ ಉಸ್ತುವಾರಿ, ಲಸಿಕೆ ಹಾಕಿಸುವಂತಹ ಗುರುತರ ಜವಾಬ್ದಾರಿ ಹೊತ್ತು ಶ್ರಮಿಸಿದ್ದ ಬಿಬಿಎಂಪಿಯ ಹಿರಿಯ ಆರೋಗ್ಯ ಪರಿವೀಕ್ಷಕ ಜಿ ಸೀತಾರಾಮಯ್ಯ ಕೋವಿಡ್ಗೆ ತುತ್ತಾಗಿ ಮೃತಪಟ್ಟಿದ್ದಾರೆ. ಅಚ್ಚರಿಯೆಂದರೇ ಅವರ ಚಿಕಿತ್ಸೆಯ ಬಗ್ಗೆ ಆಸ್ಪತ್ರೆಯ ಸಿಬ್ಬಂದಿ ಕುಟುಂಬಸ್ಥರಿಗೆ ಕಿಂಚಿತ್ತು ಮಾಹಿತಿ ನೀಡಿದೆ. ಶವ ಒಯ್ಯುವಂತೆ ಕರೆ ಮಾಡಿದ್ದು ನಿರ್ಲಕ್ಷ್ಯದ ಪರಮಾವಧಿಯಾಗಿದೆ.
58 ವರ್ಷದ ಸೀತಾರಾಮಯ್ಯ ಅವರು ಇದೇ ಏಪ್ರಿಲ್ 22ರಂದು ಎಂ ಎಸ್ ರಾಮಯ್ಯ ಮೆಡಿಕಲ್ ಕಾಲೇಜಿನ ಐಸಿಯುಗೆ ದಾಖಲಾಗಿದ್ದರು. ಡಯಾಬಿಟಿಸ್, ಅಧಿಕ ರಕ್ತದೊತ್ತಡದಿಂದ (ಹೈಪರ್ ಟೆನ್ಶನ್) ಬಳಲುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೇ 24ರ ಸಂಜೆ 7-30ರ ಸುಮಾರಿಗೆ ಮೃತಪಟ್ಟರು. ಸಾವಿನ ಬಳಿಕ ಆಸ್ಪತ್ರೆಯ ಸಿಬ್ಬಂದಿ ಕುಟುಂಬಸ್ಥರಿಗೆ ಫೋನ್ ಕರೆ ಮಾಡಿ, ಶವ ತೆಗೆದುಕೊಂಡು ಹೋಗುವಂತೆ ತಿಳಿಸಿದ್ದಾರೆ ಎಂದು ಆತನ ಸಂಬಂಧಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಆಸ್ಪತ್ರೆಗೆ ದಾಖಲಾಗಿ ಎರಡು ದಿನ ಕಳೆದರೂ ಸೀತಾರಾಮಯ್ಯರ ಆರೋಗ್ಯ ಸ್ಥಿತಿ ಹೇಗಿದೆ? ಏನೆಲ್ಲಾ ಚಿಕಿತ್ಸೆ ನೀಡಲಾಗುತ್ತಿದೆ ಎಂಬ ಕಿಂಚಿತ್ತು ಮಾಹಿತಿ ಸಹ ಕುಟುಂಬಸ್ಥರಿಗೆ ನೀಡಿಲ್ಲ. ಪಾಲಿಕೆ ಅಧಿಕಾರಿಗಳೂ ಸಹ ಆಸ್ಪತ್ರೆಯ ಸ್ವಾಗತಕಾರರು (ರಿಸೆಪ್ಷನಿಸ್ಟ್), ವೈದ್ಯರಿಗೆ ಫೋನ್ ಮಾಡಿದ್ದರೂ ಯಾರಿಂದಲೂ ಸೀತಾರಾಮಯ್ಯ ಅವರ ಆರೋಗ್ಯದ ಬಗ್ಗೆ ತಿಳಿಸಲಿಲ್ಲ ಎಂಬ ಗಂಭೀರ ಆರೋಪ ಮಾಡಿದ್ದಾರೆ.
ಕೋವಿಡ್ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾದ ಸೋಂಕಿತರ ಬಗ್ಗೆ ದಿನಕ್ಕೆ ಒಂದು ಬಾರಿಯಾದರೂ ಮನೆಯವರಿಗೆ ಅವರ ಆರೋಗ್ಯದ ಕುರಿತ ಮಾಹಿತಿ ನೀಡಬೇಕು ಎಂಬ ನಿಯಮವಿದೆ. ಕೋವಿಡ್ ವಾರಿಯರ್ ಎನಿಸಿಕೊಂಡ ಸರ್ಕಾರದ ಸಿಬ್ಬಂದಿ ದಾಖಲಾಗಿ ಎರಡು ದಿನ ಕಳೆದರೂ ಆರೋಗ್ಯದ ವಿಚಾರ ಸಿಗದೇ ಕುಟುಂಬಸ್ಥರು ಕಂಗಾಲಾಗಿದ್ದರು. ಅತ್ತ ಸೀತಾರಾಮಯ್ಯ ಅವರ ಫೋನ್ ಕೂಡಾ ಸ್ವಿಚ್ಡ್ ಆಫ್ ಆಗಿತ್ತು. ಕೊನೆಯ ಬಾರಿ ಆಸ್ಪತ್ರೆಯಿಂದ ಬಂದ ಕರೆಯಲ್ಲಿ, ಸೀತಾರಾಮಯ್ಯ ಮೃತಪಟ್ಟಿದ್ದಾರೆ. ಮೃತದೇಹ ತೆಗೆದುಕೊಂಡು ಹೋಗಿ ಎಂದಿದ್ದಾರೆ. ಪಾಲಿಕೆ ಅಧಿಕಾರಿಯ ಸ್ಥಿತಿ ಹೀಗಾದರೇ ಜನ ಸಾಮಾನ್ಯ ಸ್ಥಿತಿ ಹೇಗೆ ಎಂಬ ಆತಂಕ ಎದುರಾಗಿದೆ.
ಎಂಎಸ್ ರಾಮಯ್ಯ ಮೆಡಿಕಲ್ ಕಾಲೇಜಿನಲ್ಲಿ 500 ಕೋವಿಡ್ ಸೋಂಕಿತರು ದಾಖಲಾಗಿದ್ದಾರೆ. ಇಷ್ಟೂ ಜನರ ಮಾಹಿತಿ ಕೊಡಲು ಹೇಗೆ ಸಾಧ್ಯ? ಬಿಬಿಎಂಪಿಯ ಒತ್ತಾಯದಿಂದ ಹಾಸಿಗೆ ಪಡೆಯುತ್ತಿದ್ದಾರೆ. ನಮಗೂ ಸಿಬ್ಬಂದಿ ಕೊರತೆ ಇದೆ ಎಂದು ಆಸ್ಪತ್ರೆ ವೈದ್ಯರು ಸಾಬೂಬು ನೀಡಿದ್ದಾರೆ.
ಎಂಎಸ್ ರಾಮಯ್ಯ, ವಿಕ್ಟೋರಿಯಾ, ರಾಜರಾಜೇಶ್ವರಿ ಮೆಡಿಕಲ್ ಕಾಲೇಜು... ಹೀಗೆ ನಗರದ ಅನೇಕ ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಗಳಿಗೆ ದಾಖಲಾದ ಕೋವಿಡ್ ಸೋಂಕಿತರು ಎಷ್ಟೇ ಗಂಭೀರವಾಗಿದ್ದೂ ಅವರ ಮನೆಯವರಿಗೆ ಫೋನ್ ಕಾಲ್ ಮಾಡುತ್ತಿಲ್ಲ. ಕುಟುಂಬಸ್ಥರು ಆಸ್ಪತ್ರೆಯ ಕರೆಗಾಗಿ ಎದುರು ನೋಡಬೇಕಾಗಿದೆ.
ವಿಕ್ಟೋರಿಯಾ ಆಸ್ಪತ್ರೆ ಸಿಬ್ಬಂದಿ ರೋಗಿಗಳಿಗೆ, 'ಸ್ಮಾರ್ಟ್ ಫೋನ್ ಬೇಡ, ನಾರ್ಮಲ್ ಕೀಪ್ಯಾಡ್ನ ಫೋನ್ ತೆಗೆದುಕೊಂಡು ಬನ್ನಿ' ಎಂದು ತಾಕೀತು ಮಾಡುತ್ತಿದ್ದಾರೆ. ಈ ಮಧ್ಯೆ ಆಸ್ಪತ್ರೆಗೆ ದಾಖಲಾದವರು ಗುಣಮುಖರಾಗಿ ಬರುತ್ತಾರೋ, ಶವವಾಗಿ ಬರುತ್ತಾರೋ ಎಂಬ ಚಿಂತೆಯಲ್ಲೇ ಕುಟುಂಬಸ್ಥರು ಫೋನ್ ಕರೆಗೆ ಕಾಯುತ್ತಿರುತ್ತಾರೆ.
ಕೊನೆಯ ಪಕ್ಷ ಆಸ್ಪತ್ರೆಗಳ ದಾಖಲಾತಿ ಪ್ರದೇಶದಲ್ಲಿ ಆದರೂ ಸಿಸಿಟಿವಿ ಕ್ಯಾಮರಾ ಮೂಲಕ ನೋಡಲು ಅವಕಾಶ ಮಾಡಿಕೊಡಲಿ ಎಂದು ಪಾಲಿಕೆ ಅಧಿಕಾರಿ ಸೇರಿದಂತೆ ಸೋಂಕಿತರ ಕುಟುಂಬಸ್ಥರ ಬೇಡಿಕೆ. ಆದರೆ, ಇದ್ಯಾವುದಕ್ಕೂ ಮೆಡಿಕಲ್ ಕಾಲೇಜುಗಳು ಕಿವಿಗೆ ಹಾಕಿಕೊಳ್ಳುತ್ತಿಲ್ಲ. ಬೆರಳೆಣಿಕೆ ಆಸ್ಪತ್ರೆಗಳಲ್ಲಿ ಮಾತ್ರ, ಸೋಂಕಿತರ ಮನೆಯವರಿಗೆ ಆಸ್ಪತ್ರೆಗೆ ದಾಖಲಾದವರ ಆರೋಗ್ಯದ ಮಾಹಿತಿ ದಿನಕ್ಕೊಂದು ಬಾರಿ ತಲುಪಿಸಲಾಗುತ್ತಿದೆ. ಉಳಿದಂತೆ ಹಲವು ಕಡೆ ಐಸಿಯುಗೆ ಗಂಭೀರ ಆರೋಗ್ಯ ಪರಿಸ್ಥಿತಿಯಲ್ಲಿ ದಾಖಲಾದವರು ಹೆಣವಾದ ನಂತರ ಕರೆ ಮಾಡಲಾಗುತ್ತಿದೆ. ಈ ಬಗ್ಗೆ ಸರ್ಕಾರ ಎಚ್ಚೆತ್ತುಕೊಂಡು ಅಂತಹ ಆಸ್ಪತ್ರೆಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕಿದೆ.