ಬೆಂಗಳೂರು: ಅಂತಾರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದಲ್ಲಿ ನಿರ್ಮಿಸಿರುವ ಕೋವಿಡ್ ಸೆಂಟರ್ ಅವ್ಯವಸ್ಥೆಯ ಆಗರವಾಗಿದೆ ಎಂದು ಮಾಜಿ ಸಚಿವ ಹೆಚ್ ಕೆ ಪಾಟೀಲ್ ಆರೋಪಿಸಿದ್ದಾರೆ.
ತಮ್ಮ ನಿವಾಸದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಬಿಐಇಸಿಯಲ್ಲಿ ಕೋವಿಡ್ ಸೆಂಟರ್ ಮಾಡಲಾಗಿದೆ. ಅಲ್ಲಿ ಕುಡಿಯುವ ನೀರಿಲ್ಲ. ಇದು ಸರ್ಕಾರದ ಬೇಜವಾಬ್ದಾರಿತನಕ್ಕೆ ಸಾಕ್ಷಿ. ಈ ಬಗ್ಗೆ ಮಾನವ ಹಕ್ಕುಗಳ ಆಯೋಗಕ್ಕೆ ವಿವರಿಸಿದ್ದೇನೆ ಎಂದರು.
ಕೋವಿಡ್ ಸೋಂಕು ಹೆಚ್ಚುತ್ತಲೇ ಇದೆ. ಸರ್ಕಾರದ ಅಸಮರ್ಪಕತೆ ಮುಂದುವರಿದಿದೆ. ಜನ ಇನ್ನೂ ಸಮಸ್ಯೆಗೆ ತುತ್ತಾಗುತ್ತಲೇ ಇದ್ದಾರೆ. ಬೆಡ್, ಸಿಬ್ಬಂದಿ, ಔಷಧಿಗಳ ಸಮಸ್ಯೆ ಮುಂದುವರಿದಿದೆ. ಆಕ್ಸಿಜನ್ ಕೊರತೆ ಇದೀಗ ಹೆಚ್ಚಾಗಿ ಕಂಡು ಬರುತ್ತಿದೆ. 25,000 ರೋಗಿಗಳಿಗೆ ಸೂಕ್ತ ರೀತಿಯಲ್ಲಿ ಆಮ್ಲಜನಕ ಪೂರೈಕೆ ಆಗುತ್ತಿಲ್ಲ. 1 ಸಾವಿರ ಮಂದಿ ಗಂಭೀರ ಸ್ಥಿತಿಯಲ್ಲಿದ್ದಾರೆ. ಎಲ್ಲಾ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಕೊರತೆ ಮುಂದುವರಿದಿದೆ. ಗುಜರಾತ್ ಕಂಪನಿಗೆ ಟೆಂಡರ್ ಕೊಟ್ಟು ವಾಪಸ್ ಪಡೆದ್ರು. ಲಿಕ್ವಿಡ್ ಆಕ್ಸಿಜನ್ ಪೈಪ್ಲೈನ್ ಹಾಕಿಲ್ಲ. ಆಕ್ಸಿಜನ್ ಕೊರತೆಯಿಂದ ಸಾವು ಸಂಭವಿಸಿದರೆ ಸರ್ಕಾರವೇ ಹೊಣೆ. ಈ ವಿಚಾರದಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಹೆಚ್.ಕೆ. ಪಾಟೀಲ್ ವಾಗ್ದಾಳಿ ನಡೆಸಿದರು.
ತೆರಿಗೆ ಹಣ ಸಂಗ್ರಹದಲ್ಲಿ ಖೋತಾ ವಿಚಾರ ಕುರಿತು ಮಾತನಾಡಿ, ಇದರ ಬಗ್ಗೆ ನಮ್ಮ ಲೆಕ್ಕಪತ್ರ ಸಮಿತಿಯಲ್ಲಿ ಚರ್ಚಿಸುತ್ತೇವೆ. ನಂತರ ಈ ಬಗ್ಗೆ ನಿರ್ಧಾರ ತೆಗೆದುಕೊಳ್ತೇವೆ. ಸದನದಲ್ಲಿ ಚರ್ಚೆಯಾಗುವವರೆಗೆ ಕಾಯ್ದೆ ಅನುಷ್ಠಾನ ಬೇಡ. ಮಾಡಿದ್ದರೆ ಅದನ್ನ ವಾಪಸ್ ಪಡೆಯಬೇಕೆಂದು ಪಾಟೀಲ್ ಆಗ್ರಹಿಸಿದರು.
ಭೂ ಸುಧಾರಣಾ ತಿದ್ದುಪಡಿ ಕಾಯ್ದೆ ಮೂಲಕ ಉಳುವವನಿಂದ ಭೂಮಿ ಕಿತ್ತುಕೊಂಡು ಉಳ್ಳವನಿಗೆ ನೀಡಿದೆ. ರೈತರು ಆರ್ಥಿಕವಾಗಿ ಸಂಕಷ್ಟದಲ್ಲಿದ್ದಾರೆ. ಇದನ್ನೇ ದುರ್ಬಳಕೆ ಮಾಡಿಕೊಳ್ಳುವ ಪ್ರಯತ್ನ ನಡೆದಿದೆ. ನಮ್ಮ ಪಕ್ಷ ಇದನ್ನ ವಿರೋಧಿಸಿದೆ. ಸುಮಾರು 8 ಸಾವಿರ ಪ್ರಕರಣಗಳು ಇವೆ. ಕಾನೂನನ್ನ ಧಿಕ್ಕರಿಸಿ ಭೂಮಿ ಖರೀದಿ ಮಾಡಿದ್ದಾರೆ. ಬೆಂಗಳೂರು ಸೇರಿ ಇತರ ಕಡೆ ಮಾಡಿದ್ದಾರೆ. ಅದನ್ನ ರೆಗ್ಯೂಲರ್ ಮಾಡಲು ಸರ್ಕಾರ ಇದನ್ನ ಜಾರಿಗೆ ತಂದಿದೆ. ಆರ್ಡಿನೆನ್ಸ್(ಸುಗ್ರೀವಾಜ್ಞೆ) ಮೂಲಕ ರೈತರ ಹೊಲ ಮಾರೋಕೆ ಅವಕಾಶ ಕೊಟ್ಟಿದ್ದಾರೆ ಎಂದು ಹೆಚ್ ಕೆ ಪಾಟೀಲ್ ಕಿಡಿಕಾರಿದರು.
ಪ್ರವಾಹ ಹೆಚ್ಚಾಗಿದೆ, ಸರ್ಕಾರದ ಒಂದು ಟಾಸ್ಕ್ ಫೋರ್ಸ್ ಮಾಡಬೇಕು. ಆಕ್ಸಿಜನ್ ಬೆಡ್ ಪೂರೈಕೆ, ಸಮಸ್ಯೆ ಬಗ್ಗೆ ಗಮನಹರಿಸಬೇಕು. ಈ ಟಾಸ್ಕ್ ಫೋರ್ಸ್ ಕಮಿಟಿ ನೋಡಿಕೊಳ್ಳಬೇಕು. ಏರ್ಕ್ರಾಫ್ಟ್, ಹೆಲಿಕಾಪ್ಟರ್ ಮೂಲಕ ಪೂರೈಕೆ ಮಾಡಿಕೊಳ್ಳಲಿ ಎಂದರು.
ಉತ್ತರ ಕರ್ನಾಟಕದಲ್ಲಿ ಉಂಟಾಗಿರುವ ಪ್ರವಾಹ ಪರಿಸ್ಥಿತಿ ಕುರಿತು ಮಾತನಾಡಿ, ಉತ್ತರ ಕರ್ನಾಟಕದಲ್ಲಿ ಪ್ರವಾಹದ ಭೀತಿ ಎದುರಾಗಿದೆ. ಮಲಪ್ರಭಾದಲ್ಲಿ 22 ಸಾವಿರ ಕ್ಯೂಸೆಕ್ ನೀರು ಹರಿಯುತ್ತಿದೆ. ಮಳೆಯ ಪ್ರಮಾಣ ನೋಡಿದರೆ ಅನಾಹುತ ಖಂಡಿತ. ಕಳೆದ ಬಾರಿಯೂ ಸಾಕಷ್ಟು ಸಮಸ್ಯೆಯಾಗಿತ್ತು. ಜನರಿಗೆ ಪರಿಹಾರದ ಕೆಲಸ ಆಗಿರಲಿಲ್ಲ. ಈ ಬಾರಿ ಅಂತಹ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು ಎಂದು ಹೆಚ್ ಕೆ ಪಾಟೀಲ್ ಸಲಹೆ ನೀಡಿದರು.