ಬೆಂಗಳೂರು : ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಅವರ ವಿರುದ್ಧ ವಾಣಿಜ್ಯ ಕಟ್ಟಡದಲ್ಲಿ ಕರ್ನಾಟಕ ಅಗ್ನಿಶಾಮಕ ದಳ ಕಾಯ್ದೆ-1964ರ ಸೆಕ್ಷನ್ 13ರಡಿ ಬರುವ ಸುರಕ್ಷತಾ ಕ್ರಮಗಳನ್ನು ಉಲ್ಲಂಘಿಸಿದ ಆರೋಪ ಸಂಬಂಧ ದಾಖಲಿಸಲಾಗಿದ್ದ ದೋಷಾರೋಪ ಪಟ್ಟಿಗೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ.
ತಮ್ಮ ವಿರುದ್ಧ ದೋಷಾರೋಪ ಪಟ್ಟಿ ಹಾಗೂ ಆ ಸಂಬಂಧ ನಗರದ 10ನೇ ಎಸಿಎಂಎಂ ಕೋರ್ಟ್‌ನಲ್ಲಿ ನಡೆಯುತ್ತಿರುವ ವಿಚಾರಣೆ ರದ್ದುಪಡಿಸಬೇಕು ಎಂದು ಕೋರಿ ಸಚಿವ ಬೈರತಿ ಸುರೇಶ್ ಕ್ರಿಮಿನಲ್ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ, 10ನೇ ಎಸಿಎಂಎಂ ನ್ಯಾಯಾಲಯಕ್ಕೆ ಸಲ್ಲಿಸಿರುವ ದೋಷಾರೋಪ ಪಟ್ಟಿಗೆ ಮಧ್ಯಂತರ ತಡೆಯಾಜ್ಞೆ ನೀಡಿ ವಿಚಾರಣೆಯನ್ನು ಡಿ.15ಕ್ಕೆ ಮುಂದೂಡಿತು.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ನಕ್ಷೆೆ ಮಂಜೂರಾತಿ ಹಾಗೂ ಇತರ ಪರವಾನಗಿಗಳು ಹೊಂದಿದ್ದ ಕಟ್ಟಡ ಅರ್ಜಿದಾರರು ಖರೀದಿಸಿದ್ದಾರೆ. ಪರಿಷ್ಕೃತ ಮಾಸ್ಟರ್ ಪ್ಲಾನ್ ಜಾರಿಗೆ ಬರುವ ಮೊದಲೇ ಈ ಕಟ್ಟಡ ಖರೀದಿಸಲಾಗಿತ್ತು. 2011ರಲ್ಲಿ ಅಗ್ನಿ ಶಾಮಕ ಹೊರಿಡಿಸಿದ ಅಧಿಸೂಚನೆಯ 3 ವರ್ಷದ ಬಳಿಕ ಹಾಗೂ ಕಟ್ಟಡ ನಿರ್ಮಾಣ ಮಾಡಿದ 8 ವರ್ಷಗಳ ನಂತರ ಅರ್ಜಿದಾರರು ಕಟ್ಟಡ ಖರೀದಿಸಿದ್ದಾರೆ. ಹಾಗಾಗಿ, ಮೂಲ ಮಾಲೀಕರು ಅಳವಡಿಸಿದ ಸುರಕ್ಷತಾ ಕ್ರಮಗಳಿಗೆ ಅರ್ಜಿದಾರರು ಹೊಣೆಗಾರರಲ್ಲ.
ಹಿಂದೆ ನ್ಯಾಯಾಲಯದ ತಡೆ ಇದ್ದರೂ, ವಿಚಾರಣಾ ನ್ಯಾಯಾಲಯ ಡಿ.9ರಂದು ವಿಚಾರಣೆಗೆ ಹಾಜರಾಗಲು ಸಮನ್ಸ್ ಜಾರಿ ಮಾಡಿದೆ. ಅದರ ಬಳಿಕವಷ್ಟೇ ವಿಚಾರ ಅರ್ಜಿದಾರರ ಗಮನಕ್ಕೆ ಬಂದಿದೆ. ಅರ್ಜಿದಾರರು ಶಾಸಕ ಮತ್ತು ಸಚಿವ ಆಗಿದ್ದರಿಂದ ಬೆಳಗಾವಿಯಲ್ಲಿ ನಡೆಯಲಿರುವ ಅಧಿವೇಶನದಲ್ಲಿ ಪಾಲ್ಗೊಳ್ಳಬೇಕಾಗಿದೆ. ಹೀಗಾಗಿ ವಿಚಾರಣೆಗೆ ಹಾಜರಾಗಲು ಆಗುವುದಿಲ್ಲ ಅರ್ಜಿದಾರರ ಪರ ವಕೀಲರು ವಿವರಿಸಿದರು.
ಪ್ರಕರಣದ ಹಿನ್ನೆಲೆ ಏನು ? : ಇಂದಿರಾನಗರ ಎಚ್‌ಎಎಲ್ 2ನೇ ಹಂತದಲ್ಲಿ ಸರ್ವೆ ನಂಬರ್ 765ರಲ್ಲಿ 2005-06ರಲ್ಲಿ ನಕ್ಷೆ ಮಂಜೂರಾತಿ ಹೊಂದಿದ್ದ ವಾಣಿಜ್ಯ ಕಟ್ಟಡವನ್ನು ಬೈರತಿ ಸುರೇಶ್ 2014ರಲ್ಲಿ ಖರೀದಿಸಿದ್ದರು. 2015ರ ಪರಿಷ್ಕೃತ ಮಾಸ್ಟರ್ ಪ್ಲಾನ್ ಪ್ರಕಾರ 24 ಮೀಟರ್ ಎತ್ತರದ ಕಟ್ಟಡಗಳು ಅಗ್ನಿಶಾಮಕ ಇಲಾಖೆಯಿಂದ ಎನ್‌ಓಸಿ ಪಡೆದುಕೊಳ್ಳಬೇಕು ಎಂದಿದೆ. ಆದರೆ, ಈ ಕಟ್ಟಡವು 24 ಮೀಟರ್ ಒಳಗೆ ಇದೆ. ಆದಾಗ್ಯೂ ಅತೀ ಎತ್ತರದ ಕಟ್ಟಡಗಳಿಗೆ ಅಳವಡಿಸಬೇಕಾದ ಸುರಕ್ಷತಾ ಕ್ರಮಗಳನ್ನು ಅನುಸರಿಸಲಾಗಿಲ್ಲ ಎಂದು ಅಗ್ನಿಶಾಮಕ ಅಧಿಕಾರಿಗಳು ನೀಡಿದ ದೂರು ಆಧರಿಸಿ, ಇಂದಿರಾನಗರ ಪೊಲೀಸರು ಭೈರತಿ ಸುರೇಶ್ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ.
ಇದಕ್ಕೆ 2019ರ ಸೆ.9ಕ್ಕೆ ನ್ಯಾಯಾಲಯ ತಡೆ ನೀಡಿತ್ತು. ಆದಾಗ್ಯೂ ಪೊಲೀಸರು 2019ರ ಅ.11ರಂದು 10ನೇ ಎಸಿಎಂಎಂ ಕೋರ್ಟ್‌ಗೆ ಚಾರ್ಜ್‌ಶೀಟ್ ಸಲ್ಲಿಸಿದ್ದಾರೆ ಎಂದು ಅರ್ಜಿಯಲ್ಲಿ ದೂರಲಾಗಿದೆ. ಅಲ್ಲದೇ, ಇಂದಿರಾನಗರ ಪೊಲೀಸರು ದಾಖಲಿಸಿರುವ ಚಾರ್ಜ್‌ಶೀಟ್ ಹಾಗೂ ಅದರ ಸಂಬಂಧ 10ನೇ ಎಸಿಎಂಎಂ ಕೋರ್ಟ್‌ನಲ್ಲಿ ನಡೆಯುತ್ತಿರುವ ವಿಚಾರಣಾ ಪ್ರಕ್ರಿಯೆ ರದ್ದುಪಡಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.
ಇದನ್ನೂ ಓದಿ : ಖಾಸಗಿ ಬಡಾವಣೆಯಲ್ಲಿ ರಸ್ತೆಗೆ ಬಿಟ್ಟುಕೊಟ್ಟ ಸ್ಥಳದಲ್ಲಿ ಮಾಲೀಕರು ಹಕ್ಕು ಕಳೆದುಕೊಳ್ಳುತ್ತಾರೆ: ಹೈಕೋರ್ಟ್