ಬೆಂಗಳೂರು: ಮೈಸೂರು ವಿಶ್ವವಿದ್ಯಾಲಯ ಕುಲಪತಿ ನೇಮಕಾತಿ ಪ್ರಕ್ರಿಯೆಗೆ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ. ವಿಶ್ವವಿದ್ಯಾಲಯದ ಪ್ರಭಾರಿ ಕುಲಪತಿ ಪ್ರೊ. ಎಚ್.ರಾಜಶೇಖರ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ.ಎಸ್. ಹೇಮಲೇಖ ಅವರಿದ್ದ ನ್ಯಾಯಪೀಠ, ವಿಚಾರಣೆಗೆ ತಡೆ ನೀಡಿ, ರಾಜ್ಯ ಸರ್ಕಾರ ಹಾಗೂ ಉನ್ನತ ಶಿಕ್ಷಣ ಇಲಾಖೆಗೆ ನೋಟಿಸ್ ಜಾರಿ ಮಾಡಿ ವಿಚಾರಣೆ ಮುಂದೂಡಿದೆ.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, ನಮ್ಮ ಕಕ್ಷಿದಾರರಾದ ಪ್ರೊ. ಎಚ್.ರಾಜಶೇಖರ್ ಅವರು ಪ್ರಸ್ತುತ ಪ್ರಭಾರಿ ಕುಲಪತಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಜತೆಗೆ, ಕುಲಪತಿಯಾಗುವುದಕ್ಕೆ ಅಗತ್ಯವಿರುವ ಎಲ್ಲ ಅರ್ಹತೆಗಳನ್ನು ಹೊಂದಿದ್ದಾರೆ. ಆದರೆ, ವಿಶ್ವವಿದ್ಯಾಯಕ್ಕೆ ಕುಲಪತಿ ನೇಮಕಕ್ಕೆ ರಚನೆಯಾಗಿರುವ ಶೋಧನಾ ಸಮಿತಿಗೆ ಅರ್ಜಿ ಸಲ್ಲಿಸಿದ್ದರೂ, ಅವರನ್ನು ಹೊರತು ಪಡಿಸಿ ಇತರೆ ಮೂವರ ಹೆಸರನ್ನು ಶಿಫಾರಸು ಮಾಡಲಾಗಿದೆ. ಜತೆಗೆ, ಅರ್ಜಿದಾರರ ವಿರುದ್ಧ ಯಾವುದೇ ಪ್ರಕರಣ ವಿಚಾರಣೆಗೆ ಸೂಚನೆ ನೀಡಿಲ್ಲ. ಯಾವುದೇ ಪ್ರಕರಣ ಬಾಕಿಯಿಲ್ಲ. ಹೀಗಾಗಿ ನೇಮಕ ಪ್ರಕ್ರಿಯೆಗೆ ತಡೆ ನೀಡಬೇಕು ಎಂದು ಮನವಿ ಮಾಡಿದರು.
ಮನವಿಯನ್ನು ಪುರಸ್ಕರಿಸಿದ ನ್ಯಾಯಪೀಠ, ಕುಲಪತಿ ನೇಮಕ ಪ್ರಕ್ರಿಯೆಗೆ ಮಧ್ಯಂತರ ತಡೆಯಾಜ್ಞೆ ನೀಡಿ ವಿಚಾರಣೆ ಮುಂದೂಡಿದೆ.
ಪ್ರಕರಣದ ಹಿನ್ನೆಲೆ: ಖಾಲಿಯಿದ್ದ ಮೈಸೂರು ವಿಶ್ವವಿದ್ಯಾಲಯದ ಕುಲಪತಿ ನೇಮಕಕ್ಕಾಗಿ ಬೆಂಗಳೂರಿನ ಸಿಎಂಆರ್ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ. ಎಂ.ಎಸ್. ಶಿವಕುಮಾರ್ ಅಧ್ಯಕ್ಷತೆಯಲ್ಲಿ ಶೋಧನಾ ಸಮಿತಿ ರಚನೆ ಮಾಡಲಾಗಿತ್ತು. ಈ ಸಭೆ ವಿವಿ ಕುಲಪತಿ ನೇಮಕಕ್ಕೆ ಅರ್ಜಿಗಳನ್ನು ಅಹ್ವಾನಿಸಿದ್ದು ಒಟ್ಟು 71 ಅರ್ಜಿಗಳು ಸಲ್ಲಿಕೆಯಾಗಿದ್ದವು. ಇದಕ್ಕೆ ಮೈಸೂರು ವಿಶ್ವವಿದ್ಯಾಲಯದ ಪ್ರಭಾರಿ ಕುಲಪತಿ ಪ್ರೊ. ಎಚ್. ರಾಜಶೇಖರ್ (ಅರ್ಜಿದಾರರು) ಅವರೂ ಅರ್ಜಿ ಸಲ್ಲಿಸಿದ್ದರು.
ಮಂಗಳವಾರ ಸಭೆ ನಡೆಸಿದ್ದ ಶೋಧನಾ ಸಮಿತಿ ಸಭೆಯಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಗಣಕ ವಿಜ್ಞಾನ ವಿಭಾಗದ ಮುಖ್ಯಸ್ಥ ಪ್ರೊ. ಡಿ.ಎಸ್.ಗುರು, ಮನೋವಿಜ್ಞಾನ ವಿಭಾಗದ ಮುಖ್ಯಸ್ಥ ಪ್ರೊ. ಜಿ.ವೆಂಕಟೇಶ್ ಕುಮಾರ್, ಬೆಂಗಳೂರು ವಿಶ್ವವಿದ್ಯಾನಿಲಯದ ಡಾ. ಶರತ್ ಅನಂತಮೂರ್ತಿ ಅವರ ಹೆಸರುಗಳನ್ನು ಶಿಫಾರಸು ಮಾಡಿತ್ತು. ಇನ್ನುಳಿದ ಅರ್ಜಿಗಳನ್ನು ತಿರಸ್ಕರಿಸಿತ್ತು. ಜತೆಗೆ, ಅವರ ವಿರುದ್ಧ ಕೆಲ ವಿಚಾರಣೆಗಳು ಬಾಕಿ ಇವೆ. ಹೀಗಾಗಿ ಯೂಜಿಸಿ ನಿಯಮಗಳ ಪ್ರಕಾರ ಅವನ್ನು ಕುಲಪತಿಯನ್ನಾಗಿ ನೇಮಕ ಮಾಡುವುದಕ್ಕೆ ಅರ್ಹರಲ್ಲ ಎಂದು ತಿಳಿಸಿ ಮೈಸೂರು ವಿವಿ ಹಂಗಾಮಿ ಕುಲಪತಿ ಪ್ರೊ. ರಾಜಶೇಖರ್ ಅವರ ಅರ್ಜಿಯನ್ನೂ ತಿರಸ್ಕರಿಸಲಾಗಿತ್ತು.
ಕುಲಪತಿಯಾಗುವುದಕ್ಕೆ ಶಿಫಾರಸ್ಸು ಮಾಡಿರುವ ಎಲ್ಲರಂತೆ ತಾನೂ ಅರ್ಹನಾಗಿದ್ದು, ತಮ್ಮ ಹೆಸರನ್ನು ತಿರಸ್ಕರಿಸಲಾಗಿದೆ ಎಂದು ಆರೋಪಿಸಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು.
ಇದನ್ನೂ ಓದಿ: ಇಂಜಿನಿಯರಿಂಗ್ ವಿದ್ಯಾರ್ಥಿನಿಯರಿಂದ ಪೋಷಕರ ಪಾದಪೂಜೆ.. ಅಪ್ಪಾ ಕಾಲೇಜಿನಲ್ಲಿ ಮಮ್ಮಿ ಬದಲು 'ಅಮ್ಮ' ಪಾಠ