ಬೆಂಗಳೂರು: ರಾಜ್ಯ ಸಚಿವ ಸಂಪುಟದ ನಿರ್ಣಯ ಆಧರಿಸಿ ಶಾಸಕರು ಹಾಗೂ ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳನ್ನು ಕೈಬಿಡುವ ಸರ್ಕಾರದ ಆದೇಶಕ್ಕೆ ಹೈಕೋರ್ಟ್ ಮಧ್ಯಂತರ ತಡೆ ನೀಡಿ ಆದೇಶಿಸಿದೆ.
ಶಾಸಕರು, ಸಂಸದರು, ಮಂತ್ರಿಗಳು ಸೇರಿದಂತೆ 62 ಜನಪ್ರತಿನಿಧಿಗಳ ವಿರುದ್ಧದ ಕ್ರಿಮಿನಲ್ ಪ್ರಕರಣಗಳನ್ನು ರಾಜ್ಯ ಸರ್ಕಾರ ಹಿಂತೆಗೆದುಕೊಂಡಿರುವ ಕ್ರಮ ಪ್ರಶ್ನಿಸಿ ವಕೀಲೆ ಸುಧಾ ಕಾಟ್ವಾ ಹಾಗೂ ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಈ ವೇಳೆ ರಾಜ್ಯ ಸರ್ಕಾರದ ಪರ ವಕೀಲರು, ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಮತ್ತಷ್ಟು ಕಾಲಾವಕಾಶ ನೀಡುವಂತೆ ಮನವಿ ಮಾಡಿದರು.
ಈ ಹಿನ್ನೆಲೆಯಲ್ಲಿ ಮಧ್ಯಂತರ ಆದೇಶ ನೀಡಿದ ಪೀಠ, ರಾಜ್ಯ ಸರ್ಕಾರ ಈವರೆಗೂ ಅರ್ಜಿದಾರರ ಆರೋಪಗಳಿಗೆ ಉತ್ತರಿಸಿಲ್ಲ. ಆಕ್ಷೇಪಣೆಯನ್ನೂ ಸಲ್ಲಿಸಿಲ್ಲ. ಹೀಗಾಗಿ ನ್ಯಾಯಾಲಯದ ಮುಂದಿನ ಆದೇಶದವರೆಗೆ ರಾಜ್ಯ ಸರ್ಕಾರ 2020ರ ಆಗಸ್ಟ್ 31ರಂದು ಹೊರಡಿಸಿರುವ ಆದೇಶಕ್ಕೆ ಸಂಬಂಧಿಸಿದಂತೆ ಯಾವುದೇ ಕ್ರಮ ಜರುಗಿಸಬಾರದು ಎಂದು ಆದೇಶಿಸಿತು.
ಇದನ್ನೂ ಓದಿ: ಡ್ರಗ್ಸ್ ಪ್ರಕರಣ : ತಲೆಮರೆಸಿಕೊಂಡಿದ್ದ ಮತ್ತೋರ್ವ ಆರೋಪಿ ಅರೆಸ್ಟ್
ಅಲ್ಲದೆ ರಾಜ್ಯ ಸರ್ಕಾರ ಅರ್ಜಿಗೆ ಆಕ್ಷೇಪಣೆಗಳನ್ನು ಹಾಗೂ ಅರ್ಜಿದಾರರು ಎತ್ತಿರುವ ಆರೋಪಗಳಿಗೆ ಸ್ಪಷ್ಟನೆಯನ್ನೂ ಜನವರಿ 22ರೊಳಗೆ ಸಲ್ಲಿಸಬೇಕು. ಇದಕ್ಕೆ ಮತ್ತಷ್ಟು ಕಾಲಾವಕಾಶ ನೀಡುವುದಿಲ್ಲ ಎಂದು ಗಡುವು ವಿಧಿಸಿ ವಿಚಾರಣೆಯನ್ನು ಜನವರಿ 29ಕ್ಕೆ ಮುಂದೂಡಿತು.
ಪ್ರಕರಣದ ಹಿನ್ನೆಲೆ: ಗೃಹ ಮಂತ್ರಿ ನೇತೃತ್ವದ ಉಪ ಸಮಿತಿ ಶಿಫಾರಸಿನ ಮೇರೆಗೆ ಶಾಸಕರು, ಸಂಸದರ ವಿರುದ್ಧದ 62 ಪ್ರಕರಣಗಳನ್ನು ರಾಜ್ಯ ಸಚಿವ ಸಂಪುಟ 2020ರ ಆಗಸ್ಟ್ 31ರಂದು ಹಿಂಪಡೆದುಕೊಂಡು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಇದನ್ನು ಆಕ್ಷೇಪಿಸಿರುವ ಅರ್ಜಿದಾರರು, ಸಿಆರ್ಪಿಸಿ ಸೆಕ್ಷನ್ 321ರ ಮೇರೆಗೆ ಸರ್ಕಾರ ಕೆಲ ಜನಪ್ರತಿನಿಧಿಗಳ ವಿರುದ್ಧ ದಾಖಲಾಗಿದ್ದ ಪ್ರಕರಣಗಳನ್ನು ಹಿಂಪಡೆದಿದೆ. ಇದು ನಿಯಮ ಬಾಹಿರ ಎಂದು ಆರೋಪಿಸಿದ್ದಾರೆ.
ಡಿಸೆಂಬರ್ 1ರಂದು ಅರ್ಜಿ ವಿಚಾರಣೆ ನಡೆಸಿದ್ದ ವಿಭಾಗೀಯ ಪೀಠ, ಆರೋಪಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಗೃಹ ಇಲಾಖೆ ಪ್ರಧಾನ ಕಾರ್ಯದರ್ಶಿ, ಕಾನೂನು ಇಲಾಖೆ ಪ್ರಧಾನ ಕಾರ್ಯದರ್ಶಿ, ರಾಜ್ಯ ಪೊಲೀಸ್ ಮಹಾನಿರ್ದೇಶಕರು ಹಾಗೂ ಅಭಿಯೋಜನೆ ಇಲಾಖೆ ನಿರ್ದೇಶಕರಿಗೆ ನೋಟಿಸ್ ಜಾರಿ ಮಾಡಿ, ಅರ್ಜಿಗೆ ಆಕ್ಷೇಪಣೆ ಸಲ್ಲಿಸುವಂತೆ ಸೂಚಿಸಿತ್ತು. ಹಾಗೆಯೇ ರಾಜಕೀಯ ನಾಯಕರ ವಿರುದ್ಧದ ಪ್ರಕರಣಗಳನ್ನು ಕೈಬಿಡಲು ಪ್ರಾಸಿಕ್ಯೂಷನ್ ಯಾವ ಆಧಾರದಲ್ಲಿ ಶಿಫಾರಸು ಮಾಡಿದೆ ಎಂಬುದರ ವರದಿ ತರಿಸಿಕೊಂಡು ನ್ಯಾಯಾಲಯಕ್ಕೆ ಸಲ್ಲಿಸುವಂತೆಯೂ ಸೂಚಿಸಿತ್ತು. ಆದರೆ ಸರ್ಕಾರ ಈವರೆಗೆ ಆಕ್ಷೇಪಣೆ ಸಲ್ಲಿಸಿಲ್ಲ.