ಬೆಂಗಳೂರು: ಶಾಲೆಗಳನ್ನು ವ್ಯವಹಾರ ಕೇಂದ್ರವನ್ನಾಗಿಸಲು ಸಾಧ್ಯವಿಲ್ಲ. ಅಗ್ನಿ ಸುರಕ್ಷತಾ ಪ್ರಮಾಣ ಪತ್ರ ಪಡೆಯದೇ ಶಾಲೆ ನಡೆಸುವ ಮೂಲಕ ಸಣ್ಣ ಮಕ್ಕಳ ಜೀವದ ಜತೆ ಆಟವಾಡಲು ಅವಕಾಶ ನೀಡಲಾಗದು ಎಂದು ಖಾಸಗಿ ಶಾಲೆಯನ್ನು ಹೈಕೋರ್ಟ್ ತೀವ್ರ ತರಾಟೆಗೆ ತೆಗೆದುಕೊಂಡಿತು.
ಅಲ್ಲದೇ ಈ ರೀತಿಯ ಬೆಳವಣಿಗೆಯಲ್ಲಿ ನ್ಯಾಯಾಲಯ ಮಧ್ಯಪ್ರವೇಶಿಸುವಂತೆ ಮಾಡುವುದನ್ನು ಸಹಿಸುವುದಿಲ್ಲ ಎಂದು ಖಾಸಗಿ ಶಾಲೆಯ ಆಡಳಿತ ಮಂಡಳಿಯ ಕ್ರಮಕ್ಕೆ ಹೈಕೋರ್ಟ್ ತೀವ್ರ ಅಸಮಾಧಾನ ಹೊರಹಾಕಿತು. ಮಂಡ್ಯ ಜಿಲ್ಲೆ ಆದಿ ಶಕ್ತಿ ಸೇವಾ ಟ್ರಸ್ಟ್ ಸಲ್ಲಿಸಿದ್ದ ಸಿವಿಲ್ ನ್ಯಾಯಾಂಗ ನಿಂದನೆ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ ಅವರಿದ್ದ ನ್ಯಾಯಪೀಠ ವಿಚಾರಣೆ ನಡೆಸಿತು. ಇಂತಹ ಶಾಲೆಗೆ ಯಾವುದೇ ಸಾರ್ವಜನಿಕರು ತಮ್ಮ ಮಕ್ಕಳನ್ನು ಕಳುಹಿಸುವುದಕ್ಕೆ ಮುಂದಾಗುವುದಿಲ್ಲ ಎಂದು ನ್ಯಾಯಪೀಠ ಹೇಳಿತು.
ಶಾಲಾ ಕಟ್ಟಡವಿದ್ದರೂ ಮಕ್ಕಳಿಗೆ ಸರಿಯಾದ ಕೊಠಡಿ ವ್ಯವಸ್ಥೆ ಇಲ್ಲ. ಕ್ರೀಡಾಂಗಣ, ಗ್ರಂಥಾಲಯ, ಪ್ರಯೋಗಾಲಯ ಹಾಗೂ ಕಾಂಪೌಂಡ್ ಸಹ ಇಲ್ಲ. ಹೀಗಿರುವಾಗಿ ಶಾಲೆ ನಡೆಸುವುದಕ್ಕೆ ಹೇಗೆ ಸಾಧ್ಯ ಎಂದು ಪ್ರಶ್ನಿಸಿರುವ ಹೈಕೋರ್ಟ್, ಇದೇ ಕಾರಣದಿಂದ ಶಾಲೆಯನ್ನು ಮೇಲ್ದರ್ಜೆಗೇರಿಸಲು ಅವಕಾಶ ನೀಡಿಲ್ಲ. ಸರ್ಕಾರದ ಪ್ರಾಧಿಕಾರಗಳ ಕ್ರಮದಲ್ಲಿ ಯಾವುದೇ ದುರುದ್ದೇಶ ಅಡಗಿಲ್ಲ ಎಂದಿತು.
ಇದೇ ವೇಳೆ, ಶಾಲೆಯ ವಿರುದ್ಧ ಕ್ರಮಕ್ಕೆ ಮುಂದಾಗದಂತೆ ಏಕಸದಸ್ಯ ಪೀಠ ಆದೇಶ ನೀಡಿದೆ. ಆದರೆ ಯಾವುದೇ ಸೌಲಭ್ಯ ಇಲ್ಲದೇ ಅನುಮತಿ ನೀಡುವಂತೆ ಕೋರುವುದು ಸರಿಯಲ್ಲ. ಶಾಲೆ ಕಟ್ಟಡದ ಸ್ಥಳವನ್ನು ಪರಿವರ್ತನೆ ಮಾಡಿಲ್ಲ. ಆದರೂ ಮೇಲ್ದಜೆಗೇರಿಸಲು ಅನುಮತಿ ನೀಡುವುದಕ್ಕೆ ಸಾಧ್ಯವಿಲ್ಲ ಎಂಬ ಸರ್ಕಾರದ ಪ್ರಾಧಿಕಾರಗಳು ತಿಳಿಸಿರುವ ಕ್ರಮ ಸರಿಯಾಗಿದೆ. ಏಕ ಸದಸ್ಯ ಪೀಠದ ಆದೇಶವನ್ನು ಸರ್ಕಾರದ ಪ್ರಾಧಿಕಾರಗಳು ಉದ್ದೇಶಪೂರ್ವಕವಾಗಿ ಜಾರಿ ಮಾಡಿಲ್ಲ ಎಂಬ ಆರೋಪವನ್ನು ಒಪ್ಪಲಾಗದು ಎಂದು ಪೀಠ ತನ್ನ ಆದೇಶದಲ್ಲಿ ತಿಳಿಸಿದೆ.
ಶಾಲೆಯನ್ನು ಮೇಲ್ದರ್ಜೆಗೇರಿಸಲು ಭೂ ಪರಿವರ್ತನೆ ಸೇರಿದಂತೆ ಅಗತ್ಯ ದಾಖಲೆಗಳನ್ನು ಸಲ್ಲಿಸಿಲ್ಲ. ಆದರೂ, ಏಕ ಸದಸ್ಯ ಪೀಠದ ಆದೇಶವನ್ನು ಪಾಲನೆ ಮಾಡಿಲ್ಲ ಎಂಬುದಾಗಿ ಊಹೆಗಳ ಆಧಾರದಲ್ಲಿ ತಪ್ಪಾಗಿ ತಿಳಿದು ಅರ್ಜಿ ಸಲ್ಲಿಸಲಾಗಿದೆ ಎಂದು ತಿಳಿಸಿದ ನ್ಯಾಯಪೀಠ, ಅರ್ಜಿ ವಜಾಗೊಳಿಸಿ ಆದೇಶಿಸಿತು. ಶಿಕ್ಷಣ ಇಲಾಖೆ ಕೇಳಿರುವ ಎಲ್ಲ ದಾಖಲೆಗಳೊಂದಿಗೆ ಮನವಿ ಸಲ್ಲಿಸಿ ಅನುಮತಿ ಪಡೆದುಕೊಳ್ಳಲು ಅವಕಾಶವಿದೆ ಎಂದು ತಿಳಿಸಿತು.
ಇದನ್ನೂಓದಿ: ಸಪ್ತಪದಿ ತುಳಿಯದ ಹಿಂದೂ ಮದುವೆ ಮಾನ್ಯವಲ್ಲ; ಅಲಹಾಬಾದ್ ಹೈಕೋರ್ಟ್