ಬೆಂಗಳೂರು : ಮೈಸೂರು - ಚಾಮರಾಜನಗರ ಜಿಲ್ಲಾ ಸಹಕಾರ ಬ್ಯಾಂಕ್ ಹಾಗೂ ದಾವಣಗೆರೆ ಜಿಲ್ಲಾ ಸಹಕಾರ ಬ್ಯಾಂಕಿನ ಆಡಳಿತ ಮಂಡಳಿಗೆ ಎಂಟು ವಾರಗಳಲ್ಲಿ ಚುನಾವಣೆ ನಡೆಸುವಂತೆ ಹೈಕೋರ್ಟ್ ಸಹಕಾರ ಚುನಾವಣಾ ಪ್ರಾಧಿಕಾರಕ್ಕೆ ನಿರ್ದೇಶಿಸಿದೆ.
ಎರಡು ಡಿಸಿಸಿ ಬ್ಯಾಂಕ್ಗಳು ಸಲ್ಲಿಸಿದ್ದ ಮೇಲ್ಮನವಿಗಳ ವಿಚಾರಣೆ ಪೂರ್ಣಗೊಳಿಸಿ ಕಾಯ್ದಿರಿಸಿದ್ದ ತೀರ್ಪನ್ನು ಮಂಗಳವಾರ ಪ್ರಕಟಿಸಿದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಲೆ ಹಾಗೂ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ವಿಭಾಗೀಯ ಪೀಠ ಈ ನಿರ್ದೇಶನ ನೀಡಿದೆ.
ಮೈಸೂರು - ಚಾಮರಾಜನಗರ ಜಿಲ್ಲಾ ಸಹಕಾರ ಬ್ಯಾಂಕ್ ಹಾಗೂ ದಾವಣಗೆರೆ ಜಿಲ್ಲಾ ಸಹಕಾರ ಬ್ಯಾಂಕಿನ ಆಡಳಿತ ಮಂಡಳಿಗೆ 8 ವಾರಗಳಲ್ಲಿ ಚುನಾವಣೆ ನಡೆಸಬೇಕು. ಇದಕ್ಕಾಗಿ ಸರ್ಕಾರ ಸೇರಿದಂತೆ ಸಂಬಂಧಪಟ್ಟ ಎಲ್ಲಾ ಭಾಗಿದಾರರು ಅಗತ್ಯ ಅನುಕೂಲಕರ ಕ್ರಮಗಳನ್ನು ಕೈಗೊಳ್ಳಬೇಕು. ತಕ್ಷಣ ಆಡಳಿತಾಧಿಕಾರಿಗಳು ಸಹಕಾರ ಬ್ಯಾಂಕುಗಳ ಕಾರ್ಯಭಾರವನ್ನು ವಹಿಸಿಕೊಳ್ಳಬೇಕು. ನ್ಯಾಯಾಲಯ ನೀಡಿರುವ ಎಲ್ಲಾ ಮಧ್ಯಂತರ ಆದೇಶಗಳು ವಿಸರ್ಜನೆಗೊಂಡಿದ್ದು, ಸಂಬಂಧಪಟ್ಟ ಪ್ರಾಧಿಕಾರಗಳು ತಕ್ಷಣ ಕಾನೂನು ರೀತಿ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಪೀಠ ತನ್ನ ಆದೇಶದಲ್ಲಿ ತಿಳಿಸಿದೆ.
ಮೈಸೂರು - ಚಾಮರಾಜನಗರ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ ಆಡಳಿತ ಮಂಡಳಿಗೆ 2018ರ ನ.12ಕ್ಕೆ ಚುನಾವಣೆ ನಡೆದಿತ್ತು. 2023ರ ನ.11 ಕ್ಕೆ ಆಡಳಿತ ಮಂಡಳಿಯ ಐದು ವರ್ಷದ ಕಾಲಾವಧಿ ಮುಗಿದಿತ್ತು. ಚುನಾವಣೆ ನಡೆಸುವಂತೆ ಅವಧಿ ಮುಗಿಯುವ 6 ತಿಂಗಳು ಮುಂಚಿತವಾಗಿ ಅಂದರೆ 2023ರ ಮೇ 4 ರಂದು ಸಹಕಾರ ಚುನಾವಣಾ ಪ್ರಾಧಿಕಾರಕ್ಕೆ ಮನವಿ ಸಲ್ಲಿಸಲಾಗಿತ್ತು. 2023-2028 ರ ಅವಧಿಗೆ 2023ರ ಅ.27 ರಿಂದ ನ.4 ರವರೆಗೆ ಚುನಾವಣೆ ನಡೆಸಲು 2023ರ ಸೆ.1ರಂದು ಚುನಾವಣಾಧಿಕಾರಿ ಅಧಿಸೂಚನೆ ಹೊರಡಿಸಿದ್ದರು. ಈ ನಡುವೆ ಮತದಾರರ ಪಟ್ಟಿಯಲ್ಲಿನ ಗೊಂದಲಗಳ ಹಿನ್ನೆಲೆಯಲ್ಲಿ ಸೆ.2 ರಂದು ಚುನಾವಣಾ ವೇಳಾಪಟ್ಟಿಯನ್ನು ವಾಪಸ್ ಹಿಂಪಡೆಯಲಾಗಿತ್ತು. ಇದನ್ನು ಪ್ರಶ್ನಿಸಿ ಬ್ಯಾಂಕಿನ ಕೆಲ ನಿರ್ದೇಶಕರು ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.
ಅರ್ಜಿ ವಿಚಾರಣೆ ನಡೆಸಿದ್ದ ಏಕಸದಸ್ಯ ಪೀಠ ಕಾಲಮಿತಿಯೊಳಗೆ ಅಂದರೆ ಗರಿಷ್ಠ 120 ದಿನಗಳಲ್ಲಿ ಚುನಾವಣೆ ನಡೆಸಬೇಕು, ಚುನಾವಣೆ ವಿಳಂಬಕ್ಕೆ ಸರ್ಕಾರ ಮತ್ತು ಬ್ಯಾಂಕಿನ ಆಡಳಿತ ಇಬ್ಬರಿಂದಲೂ ಲೋಪ ಆಗಿದ್ದರಿಂದ ಅವಧಿ ಮುಗಿದ ಆಡಳಿತ ಮಂಡಳಿಯಲ್ಲಿದ್ದ ನಿರ್ದೇಶಕರಿಗೆ ಚುನಾವಣೆ ಸ್ಪರ್ಧೆಯಿಂದ ಅನರ್ಹಗೊಳಿಸಬಾರದು ಎಂದು 2023ರ ಅ.12 ರಂದು ಏಕಸದಸ್ಯ ಪೀಠ ಆದೇಶ ನೀಡಿತ್ತು. ದಾವಣಗೆರೆ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ ವಿಷಯವೂ ಒಂದೇ ಆಗಿದ್ದರಿಂದ ಆ ಅರ್ಜಿಯನ್ನೂ ಸೇರಿಸಿ ಏಕಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಿದ್ದರಿಂದ ಮೂರು ಬ್ಯಾಂಕ್ಗಳಿಗೂ ಅನ್ವಯವಾಗಿತ್ತು.
ಇದನ್ನೂ ಓದಿ : ಜಾತಿ ಗಣತಿ ವರದಿ ಬಿಡುಗಡೆಗೆ ಕೋರಿದ್ದ ಅರ್ಜಿಗೆ ಮಧ್ಯಂತರ ಅರ್ಜಿ ಸಲ್ಲಿಕೆ : ವರದಿ ತಿರಸ್ಕರಿಸಲು ಮನವಿ
ಚುನಾವಣೆಗಳನ್ನು 120 ದಿನಗಳಲ್ಲಿ ನಡೆಸುವಂತೆ ಏಕಸಕದಸ್ಯ ಪೀಠದ ಆದೇಶ ಮಾರ್ಪಡಿಸುವಂತೆ ಕೋರಿ ಮೇಲ್ಮನವಿಗಳನ್ನು ಸಲ್ಲಿಸಲಾಗಿತ್ತು. ಈ ಮೇಲ್ಮನವಿಗಳನ್ನು ಮಾನ್ಯ ಮಾಡಿರುವ ವಿಭಾಗೀಯ ನ್ಯಾಯಪೀಠ ಎಂಟು ವಾರಗಳಲ್ಲಿ ಚುನಾವಣೆ ನಡೆಸುವಂತೆ ಸಹಕಾರ ಚುನಾವಣಾ ಪ್ರಾಧಿಕಾರಕ್ಕೆ ನಿರ್ದೇಶಿಸಿ ಆದೇಶಿಸಿದೆ.