ಬೆಂಗಳೂರು: ವರದಕ್ಷಿಣೆ ಕಿರುಕುಳ ನೀಡಿದ ಹಾಗೂ ಹೆಂಡತಿಯನ್ನು ಕೊಲ್ಲಲು ಪ್ರಯತ್ನಿಸಿದ ಆರೋಪದಡಿ ಜೈಲು ಸೇರಿದ್ದ ವ್ಯಕ್ತಿಗೆ ಹೈಕೋರ್ಟ್ ಜಾಮೀನು ನೀಡಿ ಆದೇಶಿಸಿದೆ. ಈ ಕುರಿತು ಬೆಂಗಳೂರಿನ ಲಗ್ಗೆರೆ ನಿವಾಸಿ ಎ. ಮಹೇಶ್ ಎಂಬಾತ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಎಚ್.ಪಿ ಸಂದೇಶ್ ಅವರಿದ್ದ ಏಕಸದಸ್ಯ ಪೀಠ ಆರೋಪಿಗೆ ಜಾಮೀನು ಮಂಜೂರು ಮಾಡಿದೆ.
ಪೀಠ ತನ್ನ ಆದೇಶದಲ್ಲಿ, ಆರೋಪಿತ ಮಹೇಶ್ ತನ್ನ ಪತ್ನಿಯ ಕತ್ತು ಹಿಸುಕಿ ಕೊಲ್ಲುಲು ಯತ್ನಿಸಿದ ಎನ್ನಲಾಗಿದೆ. ಆದರೆ, ದೂರುದಾರರಾದ ಪತ್ನಿ ತನ್ನ ಕತ್ತಿನ ಭಾಗದಲ್ಲಿ ಗಾಯವಾಗಿರುವುದನ್ನು ದೃಢಪಡಿಸುವ ವೈದ್ಯಕೀಯ ಪ್ರಮಾಣಪತ್ರ ಸಲ್ಲಿಸಿಲ್ಲ. ಮಹಿಳೆಯ ಕುತ್ತಿಗೆ ಭಾಗದಲ್ಲಿ ಯಾವುದೇ ಗಾಯಗಳು ಅಥವಾ ಗುರುತು ಇಲ್ಲ. ಆರೋಪಿ ಕಳೆದ 4 ತಿಂಗಳಿಂದ ಜೈಲಿನಲ್ಲಿದ್ದಾನೆ. ಪ್ರಕರಣದ ತನಿಖೆ ಪೂರ್ಣಗೊಂಡಿದ್ದು, ಸಾಕ್ಷಿಗಳ ಹೇಳಿಕೆಯೂ ದಾಖಲಾಗಿದೆ. ಹೆಚ್ಚಿನ ತನಿಖೆಗೆ ಆರೋಪಿಯ ಬಂಧನದ ಅಗತ್ಯ ಇಲ್ಲವಾದ್ದರಿಂದ ಜಾಮೀನು ನೀಡಬಹುದು ಎಂದು ಅಭಿಪ್ರಾಯಪಟ್ಟಿದೆ.
ಇದನ್ನೂ ಓದಿ: 5 ವರ್ಷದ ಮಕ್ಕಳಿಗೆ ಮಾಸ್ಕ್ ಬೇಕಿಲ್ಲ, ಸ್ಟಿರಾಯ್ಡ್ ಬಳಕೆ ಕಡಿತಗೊಳಿಸಿ.. ಕೇಂದ್ರದಿಂದ ಕೊರೊನಾ ಮಾರ್ಗಸೂಚಿ ಪರಿಷ್ಕರಣೆ
ಅಲ್ಲದೆ, ಆರೋಪಿ 2 ಲಕ್ಷ ರೂಪಾಯಿ ಮೊತ್ತದ ವೈಯಕ್ತಿಕ ಬಾಂಡ್ ಹಾಗೂ ಅಷ್ಟೇ ಮೊತ್ತಕ್ಕೆ ಇಬ್ಬರು ವ್ಯಕ್ತಿಗಳ ಭದ್ರತಾ ಖಾತರಿ ಒದಗಿಸಬೇಕು. ಸಾಕ್ಷಿ ನಾಶಪಡಿಸಬಾರದು. ನ್ಯಾಯಾಲಯದ ವಿಚಾರಣೆಗೆ ತಪ್ಪದೇ ಹಾಜರಾಗಬೇಕು. ಪ್ರಕರಣ ಇತ್ಯರ್ಥ ಆಗುವವರೆಗೆ ಅನುಮತಿ ಇಲ್ಲದೆ ವಿಚಾರಣಾ ನ್ಯಾಯಾಲಯದ ವ್ಯಾಪ್ತಿಯಿಂದ ಹೊರಗೆ ಹೋಗಬಾರದು ಎಂದು ಷರತ್ತು ವಿಧಿಸಿದೆ.
ಪ್ರಕರಣದ ಹಿನ್ನೆಲೆ: ಪತಿ ಮಹೇಶ ನನಗೆ ವರದಕ್ಷಿಣೆ ತರುವಂತೆ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡಿದ. ಕತ್ತು ಹಿಸುಕಿ ಕೊಲೆ ಮಾಡಲು ಪ್ರಯತ್ನಿಸಿದ. ಸತ್ತು ಹೋಗುವಂತೆ ಹೇಳಿದನೆಂದು ಆರೋಪಿಸಿ ಆತನ ಪತ್ನಿ ಬೆಂಗಳೂರಿನ ನಂದಿನಿ ಲೇಔಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಕೌಟುಂಬಿಕ ದೌರ್ಜನ್ಯ, ಕೊಲೆಯತ್ನ, ಕೊಲೆ ಬೆದರಿಕೆ ಹಾಗೂ ವರದಕ್ಷಿಣೆ ಕಿರುಕುಳ ಆರೋಪದಡಿ ಎಫ್ಐಆರ್ ದಾಖಲಿಸಿದ್ದ ಪೊಲೀಸರು, ಮಹೇಶ್ ವಶಕ್ಕೆ ಪಡೆದು ನ್ಯಾಯಾಂದ ಬಂಧನಕ್ಕೆ ಒಪ್ಪಿಸಿದ್ದರು. ಜೈಲು ಸೇರಿದ ಬಳಿಕ ಆರೋಪಿ ಮಹೇಶ ಜಾಮೀನು ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ